
ಲಡಾಖ್‌ಗೆ ಪ್ರತ್ಯೇಕ ರಾಜ್ಯ ಸ್ಥಾನ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಚಿಂತಕ, ಸೋನಮ್ ವಾಂಗ್‌ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಿರುವುದನ್ನು ಸಮರ್ಥಿಸಿಕೊಂಡು ರಾಜಸ್ಥಾನದ ಜೋಧ್‌ಪುರ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಮತ್ತು ಲೇಹ್ ಜಿಲ್ಲಾಧಿಕಾರಿಯವರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ವಾಂಗ್‌ಚುಕ್ ಆರೋಗ್ಯದಿಂದಿದ್ದು ಈ ಸಂಬಂಧ ವೈದ್ಯರ ವರದಿ ಇದೆ. ಪತ್ನಿ ಹಾಗೂ ವಕೀಲರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬಂಧನ ವಿರುದ್ಧ ಕಾನೂನಾತ್ಮಕ ಮನವಿ ಸಿದ್ಧಪಡಿಸುವ ಸಲುವಾಗಿ ಅವರಿಗೆ ಲ್ಯಾಪ್‌ಟಾಪ್ ಕೂಡ ಒದಗಿಸಲಾಗಿದೆ ಎಂದು ಈ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ.
ವಾಂಗ್‌ಚುಕ್ ವಿರುದ್ಧ ಯಾವುದೇ ಕಾರ್ಯವಿಧಾನದ ಲೋಪವಾಗಿಲ್ಲ ಅಥವಾ ಕೆಟ್ಟದಾಗಿ ನಡೆಸಿಕೊಂಡಿಲ್ಲ ಎಂದು ಎರಡು ಪ್ರತ್ಯೇಕ ಅಫಿಡವಿಟ್‌ಗಳು ಹೇಳಿವೆ.
ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ವಾಂಗ್‌ಚುಕ್ ಅವರನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್‌ಗಳನ್ನು ಸಲ್ಲಿಸಲಾಗಿದೆ.
ಸೆಪ್ಟೆಂಬರ್ 26ರಂದು ರಾತ್ರಿ 9:15 ಕ್ಕೆ ವಾಂಗ್‌ಚುಕ್ ಅವರನ್ನು ಜೈಲಿಗೆ ಕರೆತರಲಾಯಿತು. 20/20 ಅಡಿ ವಿಸ್ತೀರ್ಣದ ಕಾರಾಗೃಹದಲ್ಲಿ ಅವರನ್ನು ಇರಿಸಲಾಗಿದೆ. ಅವರು ಆ ಜೈಲು ಬ್ಯಾರಕ್‌ನಲ್ಲಿ ಪ್ರತ್ಯೇಕವಾಗಿ ಒಬ್ಬರೇ ಇದ್ದಾರೆ ಎಂದು ಜೈಲು ಸೂಪರಿಂಟೆಂಡೆಂಟ್ ಪ್ರದೀಪ್ ಲಖಾವತ್ ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಜೈಲು ಭೇಟಿಗೆ ಯಾವುದೇ ನಿರ್ಬಂಧ ಹೇರಿಲ್ಲ. ವಾಂಗ್‌ಚುಕ್ ಭೇಟಿ ಕುರಿತಂತೆ ಆಂಗ್ಮೋ ಅವರು ಬರೆದ ಪತ್ರ ತಡವಾಗಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಬಳಿಕ ತಲುಪಿದೆ. ಒಬ್ಬ ವಕೀಲರು, ಅಡ್ವೊಕೇಟ್ ಆನ್ ರೆಕಾರ್ಡ್ ಸರ್ವಮ್ ರಿತಮ್ ಖರೆ ಹಾಗೂ ಖುದ್ದು ಆಂಗ್ಮೋ ಅವರೇ ಅಕ್ಟೋಬರ್ 7ರಂದು ವಾಂಗ್‌ಚುಕ್ ಅವರನ್ನು ಭೇಟಿ ಮಾಡಿದ್ದರು. ಅವರೊಂದಿಗೆ ಒಂದು ಗಂಟೆ ಕಳೆಯಲು ಅನುಮತಿ ನೀಡಲಾಗಿತ್ತು. ಅಕ್ಟೋಬರ್ 11 ರಂದು ಆಕೆಗೆ ಮತ್ತೆ ಒಂದು ಗಂಟೆ ಭೇಟಿಯ ಅವಕಾಶ ಕಲ್ಪಿಸಲಾಗಿತ್ತು ಎಂದು ಸೂಪರಿಂಡೆಂಟ್ ತಿಳಿಸಿದರು.
ಲೇಹ್ ಜಿಲ್ಲಾಧಿಕಾರಿ ರೋಮಿಲ್ ಸಿಂಗ್ ಡೋಂಕ್ ಅವರು ಸಲ್ಲಿಸಿರುವ ಮತ್ತೊಂದು ಅಫಿಡವಿಟ್ ಎನ್ಎಸ್ಎ ಅಡಿ ವಾಂಗ್‌ಚುಕ್ ಅವರ ಬಂಧನ ಸಮರ್ಥಿಸಿಕೊಂಡಿದೆ. ಸಂವಿಧಾನದ 22ನೇ ವಿಧಿ ಹಾಗೂ ಎನ್ಎಸ್ಎ ಕಾಯಿದೆಯ ನಿಯಮಗಳ ಅನುಸಾರವಾಗಿಯೇ ಬಂಧನ ನಡೆದಿದೆ. ರಾಜ್ಯದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ನಿರ್ವಹಣೆ ಮತ್ತು ಸಮುದಾಯಕ್ಕೆ ಅಗತ್ಯವಾದ ಸೇವೆಗಳಿಗೆ ಹಾನಿ ಉಂಟುಮಾಡಿದ ಹಿನ್ನೆಲೆಯಲ್ಲಿ ಕಾನೂನು ಪ್ರಕಾರವೇ ವಾಂಗ್‌ಚುಕ್ ಅವರನ್ನು ಬಂಧಿಸಲಾಗಿದೆ ಎಂದು ಅಫಿಡವಿಟ್ ತಿಳಿಸಿದೆ.
ವಾಂಗ್‌ಚುಕ್ ಅವರನ್ನುಕಾಯಿದೆಯಡಿ ಬಂಧಿಸಿರುವ ಸಂಗತಿ ಮತ್ತು ಜೋಧ್‌ಪುರದ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಿರುವ ವಿಚಾರ ಎರಡನ್ನೂ ಅವರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಲೇಹ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಅವರ ಪತ್ನಿಗೆ ತಕ್ಷಣವೇ ದೂರವಾಣಿ ಮೂಲಕ ಈ ಕುರಿತು ವಿವರಿಸಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ಸೆಪ್ಟೆಂಬರ್ 26ರಂದು ಲಡಾಖ್‌ನಲ್ಲಿ ಬಂಧಿತರಾದ ವಾಂಗ್‌ಚುಕ್ ಪ್ರಸ್ತುತ ಜೋಧ್‌ಪುರ ಜೈಲಿನಲ್ಲಿದ್ದಾರೆ. ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡುವಂತೆ ಬೇಡಿಕೆ ಇಟ್ಟು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ನಾಲ್ವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ವಾಂಗ್‌ಚುಕ್ ಅವರನ್ನು ಬಂಧಿಸಲಾಗಿದೆ.