ಪೊಲೀಸರು, ಗುಪ್ತಚರ ದಳದಿಂದ ತಮ್ಮ ಮೇಲೆ ನಿರಂತರ ಕಣ್ಗಾವಲು: ವಾಂಗ್‌ಚುಕ್‌ ಪತ್ನಿಯಿಂದ ಅರೋಪ, ಸುಪ್ರೀಂಗೆ ಅಫಿಡವಿಟ್‌

ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸೆಪ್ಟೆಂಬರ್ 30 ರಿಂದ ಹಿಡಿದು ಈವರೆಗೆ ತನ್ನ ಮೇಲೆ ನಿರಂತರ ಕಣ್ಗಾವಲು ಇರಿಸಲಾಗಿದೆ ಎಂದು ಆಂಗ್ಮೋ ಆರೋಪ.
ಪೊಲೀಸರು, ಗುಪ್ತಚರ ದಳದಿಂದ ತಮ್ಮ ಮೇಲೆ ನಿರಂತರ ಕಣ್ಗಾವಲು: ವಾಂಗ್‌ಚುಕ್‌ ಪತ್ನಿಯಿಂದ ಅರೋಪ, ಸುಪ್ರೀಂಗೆ ಅಫಿಡವಿಟ್‌
Published on

ಪರಿಸರವಾದಿ, ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್‌ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ವಾಂಗ್‌ಚುಕ್‌ ಅವರನ್ನು ಭೇಟಿ ಮಾಡಲು ತಾವು ಜೋಧಪುರ‌ ಜೈಲಿಗೆ ಹೋಗಿದ್ದಾಗ ರಾಜಸ್ಥಾನ ಪೊಲೀಸರು ಮತ್ತು ಗುಪ್ತಚರ ಇಲಾಖೆ ತಮ್ಮನ್ನು ಹಿಂಬಾಲಿಸಿ, ನಿಕಟ ಕಣ್ಗಾವಲಿನಲ್ಲಿ ಇರಿಸಿತ್ತು ಎಂದು ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಸೆಪ್ಟೆಂಬರ್ ಅಂತ್ಯದಿಂದ ದೆಹಲಿಯಲ್ಲಿ ತಮ್ಮನ್ನು ಪೊಲೀಸರು ನಿರಂತರ ಕಣ್ಗಾವಲಿನಲ್ಲಿರಿಸಿದ್ದಾರೆ ಎಂದು ಆಂಗ್ಮೋ ಹೇಳಿಕೊಂಡಿದ್ದಾರೆ. ಅಕ್ಟೋಬರ್ 7 ಮತ್ತು ಅಕ್ಟೋಬರ್ 11 ರಂದು ವಾಂಗ್‌ಚುಕ್‌ ಅವರನ್ನು ಭೇಟಿ ಮಾಡಲು ಜೋಧಪುರ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ತಮ್ಮನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಯಿತು. ಅಲ್ಲದೆ, ಪ್ರತಿ ಭೇಟಿಗೂ ಮೊದಲು, ತನ್ನ ಪ್ರಯಾಣದ ವಿವರಗಳು ಮತ್ತು ಆಗಮನದ ಸಮಯವನ್ನು ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲು ಕೇಳಲಾಯಿತು ಎಂದು ಆಂಗ್ಮೋ ಹೇಳಿದ್ದಾರೆ.

ಜೈಲಿನೊಳಗೆ ವಾಂಗ್‌ಚುಕ್‌ ಅವರನ್ನು ಭೇಟಿಯಾದಾಗ, ಮಂಗಳೇಶ್ ಎಂದು ಗುರುತಿಸಲಾದ ಪೊಲೀಸ್ ಉಪ ಆಯುಕ್ತರು ಮತ್ತು ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ವಾಂಗ್‌ಚುಕ್‌ ಅವರೊಂದಿಗಿನ ತಮ್ಮ ಮಾತುಕತೆಗಳನ್ನು ಆಲಿಸುವಷ್ಟು ದೂರದಲ್ಲಿ ಕುಳಿತು ಸಂಭಾಷಣೆಯನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು ಎಂದೂ ಅವರು ಅಫಿಡವಿಟ್‌ನಲ್ಲಿ ಆರೋಪಿಸಿದ್ದಾರೆ.

"ಜೋಧ್‌ಪುರದಲ್ಲಿ ಬೇರೆಲ್ಲಿಗೂ ಹೋಗಲು ಅಥವಾ ಯಾರನ್ನೂ ಭೇಟಿಯಾಗಲು ನನಗೆ ಅವಕಾಶ ನೀಡಲಿಲ್ಲ. ರೈಲು ಹತ್ತುವ ಮೊದಲು ಕೆಲವು ಗಂಟೆಗಳ ಸಮಯವಿದ್ದರೂ ಸಹ ನನ್ನನ್ನು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಅಧಿಕಾರಿಗಳು ನನ್ನೊಂದಿಗೆ ರೈಲು ಹತ್ತಿ ಎರಡು ಗಂಟೆಗಳ ಪ್ರಯಾಣದ ನಂತರ ಮುಂದಿನ ನಿಲ್ದಾಣವಾದ ಮೆರ್ಟಾ ರಸ್ತೆ ಜಂಕ್ಷನ್‌ನಲ್ಲಿ ಇಳಿದುಹೋದರು" ಎಂದು ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ.

ಒಬ್ಬ ನಾಗರಿಕಳಾಗಿ, ತನ್ನ ಚಲನವಲನಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲದೆ ಜೋಧ್‌ಪುರಕ್ಕೆ ಭೇಟಿ ನೀಡಿ ತನ್ನ ಪತಿಯನ್ನು ಭೇಟಿಯಾಗುವ ಹಕ್ಕು ತನಗೆ ಇದೆ ಎಂದು ಆಂಗ್ಮೋ ಅರ್ಜಿಯಲ್ಲಿ ವಾದಿಸಿದ್ದಾರೆ.

"ಸೋನಮ್ ವಾಂಗ್‌ಚುಕ್ ಅವರೊಂದಿಗಿನ ನನ್ನ ಸಂಭಾಷಣೆಗಳನ್ನು ತಿಳಿದುಕೊಳ್ಳುವ ಹಕ್ಕು ಬೇರೆ ಯಾರಿಗೂ ಇರಬಾರದು. ಈ ಕ್ರಮಗಳು ಭಾರತದ ಸಂವಿಧಾನದ 19 ಮತ್ತು 21ನೇ ವಿಧಿಗಳ ಅಡಿಯಲ್ಲಿ ನನ್ನ ಹಕ್ಕುಗಳ ಉಲ್ಲಂಘನೆಯಾಗಿದೆ" ಎಂದು ಅವರು ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸೆಪ್ಟೆಂಬರ್ 30 ರಿಂದ ಹಿಡಿದು ಈವರೆಗೆ ತನ್ನ ಮೇಲೆ ನಿರಂತರ ಕಣ್ಗಾವಲು ಇರಿಸಲಾಗಿದೆ. ನಾನು ಮನೆಯಿಂದ ಹೊರಬಂದ ನಂತರ ದೆಹಲಿಯಲ್ಲಿ ಎಲ್ಲಿಗೇ ಹೋದರೂ ನಿರಂತರವಾಗಿ ಹಿಂಬಾಲಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಅವರು ವಿವರಿಸಿದ್ದಾರೆ.

ಹಿನ್ನೆಲೆ: ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕೆನ್ನುವ ಬೇಡಿಕೆ ಇರಿಸಿ ನಡೆಸಲಾದ ಪ್ರತಿಭಟನೆಗಳ ಮುಂಚೂಣಿಯಲ್ಲಿ ವಾಂಗ್‌ಚುಕ್‌ ಇದ್ದರು. ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26 ರಂದು ವಾಂಗ್‌ಚುಕ್ ಅವರನ್ನು ಬಂಧಿಸಲಾಗಿತ್ತು. ತದನಂತರ ಜೋಧ್‌ಪುರದ ಜೈಲಿನಲ್ಲಿ ಅವರನ್ನು ಇರಿಸಲಾಯಿತು.

ಪತಿಯ ಬಂಧನವನ್ನು ಆಕ್ಷೇಪಿಸಿ ಆಂಗ್ಮೋ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆಯ ಸೆಕ್ಷನ್ 3(2) ರ ಅಡಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಚಕಾರ ಕಾರಣ ನೀಡಿ ತನ್ನ ಪತಿಯನ್ನು ಮುಂಜಾಗರೂಕತಾ ಕ್ರಮವಾಗಿ ಬಂಧಿಸಿರುವುದು ಕಾನೂನುಬಾಹಿರ ಎಂದು ಅವರು ವಾದಿಸಿದ್ದಾರೆ. ವಾಂಗ್‌ಚುಕ್ ಅವರ ಬಂಧನವು ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ನಿಜವಾಗಿಯೂ ಸಂಬಂಧಿಸಿಲ್ಲ, ಬದಲಿಗೆ ಪ್ರಜಾಪ್ರಭುತ್ವ ಮತ್ತು ಪರಿಸರ ಕಾಳಜಿಯ ಕಾರಣಗಳನ್ನು ಪ್ರತಿಪಾದಿಸುವ ಗೌರವಾನ್ವಿತ ಪರಿಸರವಾದಿ ಮತ್ತು ಸಾಮಾಜಿಕ ಸುಧಾರಕರಾದ ವಾಂಗ್‌ಚುಕ್‌ ಅವರ ದನಿ ಹತ್ತಿಕ್ಕುವ ಉದ್ದೇಶವನ್ನು ಹೊಂದಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Kannada Bar & Bench
kannada.barandbench.com