[ಕೊರೊನಾ ಮಾರ್ಗಸೂಚಿ ಉಲ್ಲಂಘನೆ] ಡಿಕೆಶಿಗೆ ಜಾಮೀನು; ಖಂಡ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದ ನ್ಯಾಯಾಲಯ

ಜಾಮೀನುರಹಿತ ವಾರೆಂಟ್‌ ಆದೇಶದ ಹೊರತಾಗಿಯೂ ಗೈರಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮತ್ತು ಬಸನಗೌಡ ಬಾದರ್ಲಿ ಅವರಿಗೆ ಮತ್ತೊಮ್ಮೆ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಲಾಗಿದ್ದು, ಏಪ್ರಿಲ್‌ 27ಕ್ಕೆ ವಿಚಾರಣೆ ಮುಂದೂಡಲಾಗಿದೆ.
KPCC Working President Eshwar Khandre
KPCC Working President Eshwar Khandre

ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್‌ ಮತ್ತು ಮುಖಂಡ ಮಂಜುನಾಥ್‌ ಎನ್‌ ಎಸ್‌ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಜಾಮೀನುರಹಿತ ವಾರೆಂಟ್‌ ಆದೇಶದ ಹೊರತಾಗಿಯೂ ಗೈರಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮತ್ತು ಬಸನಗೌಡ ಬಾದರ್ಲಿ ಅವರಿಗೆ ಮತ್ತೊಮ್ಮೆ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಲಾಗಿದೆ (ನಾರಾಯಣಿ ವರ್ಸಸ್‌ ಡಿ ಕೆ ಶಿವಕುಮಾರ್‌ ಮತ್ತು ಇತರರು).

ನಾರಾಯಣಿ ಎಂಬವರು ಸಲ್ಲಿಸಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಸಿದ ನಗರದ 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಹಾಗೂ ಹಾಲಿ ಮತ್ತು ಮಾಜಿ ಶಾಸಕರ ಪ್ರಕರಣಗಳ ವಿಚಾರಣೆ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್ ಅವರು ಈ ಆದೇಶ ಮಾಡಿದ್ದಾರೆ.

ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಆರೋಪಿ ಶಫಿ ಉಲ್ಲಾ, ಸಲೀಮ್‌ ಮೊಹಮ್ಮದ್‌, ಈಶ್ವರ್‌ ಖಂಡ್ರೆ, ಮಂಜುನಾಥ್‌ ಎನ್‌ ಎಸ್‌ ಮತ್ತು ಬಸನಗೌಡ ಬಾದರ್ಲಿ ಕ್ರಮವಾಗಿ ಒಂದರಿಂದ ಆರನೇ ಆರೋಪಿಗಳಾಗಿದ್ದಾರೆ. ಶಫಿ ಉಲ್ಲಾ ಮತ್ತು ಸಲೀಮ್‌ ಮೊಹಮ್ಮದ್‌ ಅವರಿಗೆ ಈಗಾಗಲೇ ಜಾಮೀನು ದೊರೆತಿದ್ದು, ಶುಕ್ರವಾರ ಡಿ ಕೆ ಶಿವಕುಮಾರ್‌ ಮತ್ತು ಮಂಜುನಾಥ್‌ ಎನ್‌ ಎಸ್‌ ಅವರಿಗೆ ತಲಾ ಹತ್ತು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್‌ ಮತ್ತು ತಲಾ ಒಂದೊಂದು ಭದ್ರತೆ ಪಡೆದು ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣದ ವಿಚಾರಣೆಯನ್ನು ಏಪ್ರಿಲ್‌ 27ಕ್ಕೆ ಮುಂದೂಡಲಾಗಿದೆ.

ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪ ಸಂಬಂಧ ಡಿ ಕೆ ಶಿವಕುಮಾರ್, ಈಶ್ವರ್ ಖಂಡ್ರೆ, ಎನ್ ಎಸ್ ಮಂಜುನಾಥ್, ಬಸವನಗೌಡ ಬಾದರ್ಲಿ, ಶಫೀವುಲ್ಲಾ ಮತ್ತು ಸಲೀಂ ಮೊಹಮ್ಮದ್ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ ಅಡಿ ನಾರಾಯಣಿ ಎಂಬುವವರು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಮಾರ್ಚ್‌ 23ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಎಲ್ಲಾ ಆರೋಪಿಗಳಿಗೂ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿತ್ತು.

ಮತ್ತೊಂದು ಪ್ರಕರಣದಲ್ಲಿ ಡಿಕೆಶಿಗೆ ಜಾಮೀನು

ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ಡಿ ಕೆ ಶಿವಕುಮಾರ್‌ ಅವರಿಗೆ 10 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೌಲ್ಯದ ಭದ್ರತೆ ಪಡೆದು ಜಾಮೀನು ಮಂಜೂರು ಮಾಡಲಾಗಿದೆ. ಉಳಿದಂತೆ ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ, ಶಾಸಕ ರಿಜ್ವಾನ್‌ ಅರ್ಷದ್‌, ನಾಯಕರಾದ ಜಿ ಶೇಖರ್‌, ರಾಜಕುಮಾರ್‌, ಜಿ ಕೃಷ್ಣಪ್ಪ, ಮಂಜುನಾಥ್‌ ರೆಡ್ಡಿ ಮತ್ತು ಪದ್ಮಾವತಿ ಅವರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ದೊರೆತಿದ್ದು, ಜೂನ್‌ 2ರಂದು ಹಾಜರಾಗಲು ನ್ಯಾಯಾಲಯ ಆದೇಶ ಮಾಡಿದೆ.

Attachment
PDF
Narayani V. D K Shivakumar and others Bail.pdf
Preview
Attachment
PDF
Halasuru Gate PS versus D K Shivakumar.pdf
Preview

Related Stories

No stories found.
Kannada Bar & Bench
kannada.barandbench.com