ಶಾಸಕಾಂಗ ರೂಪಿಸುತ್ತಿರುವ ಕಾನೂನುಗಳಲ್ಲಿ ಸ್ಪಷ್ಟತೆ ಇಲ್ಲ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ

ಮೊದಲು ಕಾನೂನುಗಳನ್ನು ಚರ್ಚಿಸಲಾಗುತ್ತಿತ್ತು ಮತ್ತು ಆಳ ಅಧ್ಯಯನ ನಡೆಸಲಾಗುತ್ತಿತ್ತು. (ಈಗ) ನಾವು ನೋಡುತ್ತಿರುವ ಕಾನೂನುಗಳಲ್ಲಿ ಸಾಕಷ್ಟು ಅಂತರ ಮತ್ತು ಅಸ್ಪಷ್ಟತೆಗಳಿವೆ” ಎಂದರು.
ಶಾಸಕಾಂಗ ರೂಪಿಸುತ್ತಿರುವ ಕಾನೂನುಗಳಲ್ಲಿ ಸ್ಪಷ್ಟತೆ ಇಲ್ಲ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ

ಸಂಸತ್ತಿನ ಚರ್ಚೆಗಳ ಮಾನದಂಡ ಕುಸಿಯುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಶಾಸಕಾಂಗ ರೂಪಿಸುವ ಕಾನೂನುಗಳಲ್ಲಿ ಸ್ಪಷ್ಟತೆಯ ಕೊರತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದು ಸರ್ಕಾರಕ್ಕೆ ನಷ್ಟ ಉಂಟುಮಾಡುತ್ತಿದೆ. ಅಲ್ಲದೆ ಹೆಚ್ಚಿನ ವ್ಯಾಜ್ಯಗಳಿಗೆ ಕಾರಣವಾಗುವುದರ ಜೊತೆಗೆ ಸಾರ್ವಜನಿಕರಿಗೆ ಸಾಕಷ್ಟು ಅನಾನುಕೂಲತೆ ಉಂಟುಮಾಡುತ್ತಿದೆ ಎಂದು ಅವರು ಹೇಳಿದರು. ಮೊದಲು ಕಾನೂನುಗಳನ್ನು ಜಾರಿಗೊಳಿಸುವಾಗ ಸಾಕಷ್ಟು ಚರ್ಚೆ, ಮಾತುಕತೆಗಳು ನಡೆಯುತ್ತಿದ್ದವು. ಇದರಿಂದಾಗಿ ಕಾನೂನುಗಳನ್ನು ವ್ಯಾಖ್ಯಾನಿಸುವುದು ನ್ಯಾಯಾಲಯಗಳಿಗೆ ಸುಲಭವಾಗುತ್ತಿತ್ತು. ಈಗ ಆ ಸ್ಥಿತಿ ಇಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

"ಹಿಂದೆ ಭಿನ್ನವಾಗಿತ್ತು, ವಿವಿಧ ಕಾನೂನುಗಳನ್ನು ಸಂಸತ್ತಿನಲ್ಲಿ ಚರ್ಚಿಸಲಾಗುತ್ತಿತ್ತು ಮತ್ತು ವಿವರಿಸಲಾಗುತ್ತಿತ್ತು. ಆದ್ದರಿಂದ ಕಾನೂನನ್ನು ಅರ್ಥೈಸುವಾಗ ಅಥವಾ ಅನುಷ್ಠಾನಗೊಳಿಸುವಾಗ ನ್ಯಾಯಾಲಯಗಳ ಹೊರೆ ಕಡಿಮೆಯಾಗುತ್ತಿತ್ತು. ಹಾಗಾಗಿ ಶಾಸಕಾಂಗದ ಭಾಗ ನಮಗೆ ಏನು ಹೇಳಲು ಬಯಸುತ್ತಿದೆ ಎಂಬುದು ಸ್ಪಷ್ಟವಾಗಿತ್ತು. ಏಕೆ ಅವರು ಇಂತಹ ಶಾಸನವನ್ನು ಮಾಡುತ್ತಿದ್ದಾರೆ. ಈಗ ಅದು ವಿಷಾದದ ಸ್ಥಿತಿಯಾಗಿದ್ದು, ಈಗ ನಾವು ವಿಷಾದದ ಸ್ಥಿತಿಯೊಂದಿಗೆ ಶಾಸನವನ್ನು ನೋಡುತ್ತಿದ್ದೇವೆ. ಈಗ ನಾವು ಕಾನೂನುಗಳನ್ನು ರೂಪಿಸುವಲ್ಲಿ ಸಾಕಷ್ಟು ಅಸ್ಪಷ್ಟತೆ ಮತ್ತು ಅಂತರವನ್ನು ಕಾಣುತ್ತಿದ್ದೇವೆ. ಕಾನೂನಿನಲ್ಲಿ ಸ್ಪಷ್ಟತೆ ಇಲ್ಲ. ಕಾನೂನುಗಳು ಯಾವ ಉದ್ದೇಶಕ್ಕಾಗಿ ಇವೆ ಎಂದು ನಮಗೆ ತಿಳಿಯುತ್ತಿಲ್ಲ. ಇದು ಬಹಳಷ್ಟು ವ್ಯಾಜ್ಯ, ಅನಾನುಕೂಲತೆ, ಸರ್ಕಾರಕ್ಕೆ ನಷ್ಟ ಹಾಗೂ ಸಾರ್ವಜನಿಕರಿಗೆ ಅನಾನುಕೂಲತೆ ಸೃಷ್ಟಿಸುತ್ತಿದೆ” ಎಂದು ಅವರು ಹೇಳಿದರು.

ಉತ್ತಮ ವಕೀಲರು ಕಾನೂನು ರಚನೆಗೆ ಕೊಡುಗೆ ನೀಡಲು ಮುಂದೆ ಬರದೆ ಇರುವುದು ಇದಕ್ಕೆ ಕಾರಣ ಎಂದ ಅವರು "ಬುದ್ಧಿಜೀವಿಗಳು ಮತ್ತು ವಕೀಲರು ಸದನದಲ್ಲಿ ಇಲ್ಲದಿರುವಾಗ ಇಂತಹದ್ದು ಸಂಭವಿಸುತ್ತದೆ" ಎಂಬುದಾಗಿ ಹೇಳಿದರು. ಸುಪ್ರೀಂ ಕೋರ್ಟ್ ವಕೀಲರ ಸಂಘ ​​(ಎಸ್‌ಸಿಬಿಎ) ದೆಹಲಿಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ನಂತರದ ಆರಂಭಿಕ ವರ್ಷಗಳಲ್ಲಿ ಭಾರತದ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂಸದರು ವಕೀಲರಾಗಿದ್ದರು ಎಂದು ಅವರು ಇದೇ ವೇಳೆ ಸ್ಮರಿಸಿದರು. ಅಲ್ಲದೆ ವಕೀಲರನ್ನು ಉದ್ದೇಶಿಸಿ “ನೀವು ಹಣ ಗಳಿಸಲು ಮತ್ತು ಆರಾಮದಾಯಕವಾಗಿ ಜೀವಿಸಲು ಮಾತ್ರ ಸೀಮಿತಗೊಳ್ಳಬೇಡಿ. ಸಾರ್ವಜನಿಕ ಮತ್ತು ಸಾಮಾಜಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಿ” ಎಂದು ಕರೆ ನೀಡಿದರು.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮಾತನಾಡಿ "ಭಾರತದ್ದು ಯುವ ಪ್ರಜಾಪ್ರಭುತ್ವವಾಗಿದೆ. ನೆರೆಯ ದೇಶಗಳನ್ನು ನೋಡಿ. ಅವರು ತಮ್ಮನ್ನು ತಾವು ಪ್ರಜಾಪ್ರಭುತ್ವ ದೇಶ ಎಂದು ಕರೆದುಕೊಳ್ಳುತ್ತಾರೆ. (ಆದರೆ) ಅದು ಹೇಗೆ ಭಾಗಶಃ ವಿಫಲವಾಗಿದೆ (ಎಂದು ತಿಳಿಯುತ್ತದೆ). ಭಾರತೀಯ ಸಂವಿಧಾನವನ್ನು ರೂಪಿಸಿದವರು ಅದನ್ನು ಹೇಗೆ ಕಲ್ಪಿಸಿಕೊಂಡರು ಎಂಬುದರ ಆಧಾರದಲ್ಲಿ ನಾವು ಸುಸ್ಥಿರವಾಗಿ ಉಳಿಯಲು ಸಾಧ್ಯವಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Related Stories

No stories found.
Kannada Bar & Bench
kannada.barandbench.com