ಗಾಜಾದಲ್ಲಿರುವ ಪ್ಯಾಲಿಸ್ಟೇನಿಯರ ರಕ್ಷಣೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ

ಭಾರತೀಯ ಮೂಲದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಸೇರಿದಂತೆ ಐಸಿಜೆ ಪೀಠದ ಹದಿನೇಳು ನ್ಯಾಯಮೂರ್ತಿಗಳಲ್ಲಿ ಹದಿನೈದು ಮಂದಿ ಈ ತಾತ್ಕಾಲಿಕ ರಕ್ಷಣಾ ಕ್ರಮ ಹೊರಡಿಸುವ ಕುರಿತಂತೆ ಸರ್ವಾನುಮತದ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅಂತರರಾಷ್ಟ್ರೀಯ ನ್ಯಾಯಾಲಯ
ಅಂತರರಾಷ್ಟ್ರೀಯ ನ್ಯಾಯಾಲಯicj-cij.org

ನರಮೇಧ ತಡೆ ಕಾಯಿದೆಯಡಿ ಪ್ಯಾಲಿಸ್ಟೇನಿಯರ ಹಕ್ಕುಗಳನ್ನು ಇಸ್ರೇಲ್ ಉಲ್ಲಂಘಿಸುತ್ತಿದೆ ಎಂಬುದಕ್ಕೆ ಸಮರ್ಥನೀಯ ಅಂಶಗಳಿವೆ ಎಂದಿರುವ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು (ಐಸಿಜೆ) ಗಾಜಾ ಪಟ್ಟಿಯಲ್ಲಿರುವ ಪ್ಯಾಲಿಸ್ಟೇನಿಯರ ಹಕ್ಕುಗಳನ್ನು ರಕ್ಷಿಸಲು ಶುಕ್ರವಾರ ಸರಣಿ ತಾತ್ಕಾಲಿಕ ಕ್ರಮಗಳನ್ನು ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಅಂತಿಮ ತೀರ್ಪಲ್ಲವಾದರೂ ನ್ಯಾಯಾಲಯ ದಕ್ಷಿಣ ಆಫ್ರಿಕಾ ಪ್ರತಿಪಾದಿಸಿದ ಹಕ್ಕುಗಳನ್ನು ರಕ್ಷಿಸಲು ಸರಣಿ ಕ್ರಮಗಳನ್ನು ಸೂಚಿಸುತ್ತಿರುವುದಾಗಿ ತಿಳಿಸಿದೆ.

"ನರಮೇಧ ನಡೆಸಿದ ವಿಚಾರದಲ್ಲಿ ಇಸ್ರೇಲ್‌ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆಯೇ ಎಂದು ವಿಚಾರಣೆಯ ಈ ಹಂತದಲ್ಲಿ ಕಂಡುಕೊಳ್ಳುವ ಅಗತ್ಯವಿಲ್ಲ. ಪ್ರಕರಣದ ಅರ್ಹತೆಯ ಪರಿಶೀಲನೆ ವೇಳೆ ಆ ಬಗ್ಗೆ ಪರಿಶೀಲಿಸಬಹುದು" ಎಂದು ಇಸ್ರೇಲ್ ವಿರುದ್ಧ ಅರ್ಜಿ ಸಲ್ಲಿಸಲು ದಕ್ಷಿಣ ಆಫ್ರಿಕಾಕ್ಕೆ ಅಧಿಕಾರವಿದೆ ಎಂದು ತೀರ್ಪು ನೀಡುವ ಮೊದಲು ಐಸಿಜೆ ಹೇಳಿದೆ.

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ನರಮೇಧ, ಅಂತಾರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ದಕ್ಷಿಣ ಆಫ್ರಿಕಾ ಐಸಿಜೆಗೆ ಅರ್ಜಿ ಸಲ್ಲಿಸಿತ್ತು.

ನರಮೇಧ ಒಪ್ಪಂದವನ್ನು ಉಲ್ಲಂಘಿಸುವ ಕೃತ್ಯಗಳನ್ನುತಡೆಯುವಂತೆ ಇ‌ಸ್ರೇಲ್‌ಗೆ ನಿರ್ದೇಶನ ನೀಡಬೇಕು. ನರಮೇಧ ತಡೆಗಟ್ಟಲು ಎಲ್ಲಾ ಸಮಂಜಸ ಕ್ರಮ ತೆಗೆದುಕೊಳ್ಳುವುದು ಇಸ್ರೇಲ್ ಕರ್ತವ್ಯ. ಗಾಝಾದಿಂದ ಸ್ಥಳಾಂತರಗೊಂಡವರು ಸೇರಿದಂತೆ ಪ್ಯಾಲಿಸ್ಟೇನಿಯರ ವಿರುದ್ಧ ನಡೆದ ಯಾವುದೇ ನರಮೇಧದ ಕೃತ್ಯಗಳ ಪುರಾವೆಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸಲು ಇಸ್ರೇಲ್‌ಗೆ ಆದೇಶಿಸಬೇಕು ಎಂದು ದಕ್ಷಿಣ ಆಫ್ರಿಕಾ ಕರೆ ನೀಡಿದೆ.

ಭಾರತೀಯ ಮೂಲದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಸೇರಿದಂತೆ ಐಸಿಜೆ ಪೀಠದ ಹದಿನೇಳು ನ್ಯಾಯಮೂರ್ತಿಗಳಲ್ಲಿ ಹದಿನೈದು ಮಂದಿ ಈ ತಾತ್ಕಾಲಿಕ ರಕ್ಷಣಾ ಕ್ರಮ ಹೊರಡಿಸುವ ಕುರಿತಂತೆ ಸರ್ವಾನುಮತದ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಐಸಿಜೆ ಹೊರಡಿಸಿದ ತಾತ್ಕಾಲಿಕ ಕ್ರಮಗಳಲ್ಲಿ (ಬಹುಮತದಿಂದ) ಕದನ ವಿರಾಮ ಸೇರಿಲ್ಲ. ಆದರೆ, ಕದನ ವಿರಾಮ ಕುರಿತು ದಕ್ಷಿಣ ಆಫ್ರಿಕಾ ಮನವಿ ಸಲ್ಲಿಸಿತ್ತು.

ನರಮೇಧ ತಡೆ, ಗಾಜಾ ಪಟ್ಟಿಯಲ್ಲಿ ಪ್ಯಾಲಿಸ್ಟೇನಿಯರು ಎದುರಿಸುತ್ತಿರುವ ಪ್ರತಿಕೂಲ ಜೀವನ ಪರಿಸ್ಥಿತಿ ಸುಧಾರಣೆ, ನರಮೇಧ ಆರೋಪ ಕುರಿತ ಸಾಕ್ಷ್ಯ ನಾಶ ಮಾಡುವಂತಿಲ್ಲ, ನ್ಯಾಯಾಲಯದ ಆದೇಶ ಜಾರಿ ಮಾಡಿದ ಕುರಿತಂತೆ ತನಗೆ ಇಸ್ರೇಲ್‌ ಅನುಪಾಲನಾ ವರದಿ ಸಲ್ಲಿಸಬೇಕು ಎಂಬಂತಹ ಕ್ರಮಗಳನ್ನು ಐಸಿಜೆ ಸೂಚಿಸಿದೆ.

ಐಸಿಜೆ ಕಾಯಿದೆಯ 41ನೇ ವಿಧಿಯಡಿ ಈ ತಾತ್ಕಾಲಿಕ ಕ್ರಮಗಳು ಬದ್ಧ ಪರಿಣಾಮ ಹೊಂದಿವೆ ಎಂದು ಐಸಿಜೆ ತಿಳಿಸಿದ್ದರೂ ಇದನ್ನು ಇಸ್ರೇಲ್‌ ಜಾರಿಗೆ ತರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಹಮಾಸ್ ಮತ್ತಿತರ ಸಶಸ್ತ್ರ ಗುಂಪುಗಳು ಅಪಹರಿಸಿರುವ ಒತ್ತೆಯಾಳುಗಳನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡುವಂತೆಯೂ ನ್ಯಾಯಾಲಯ ಕರೆ ನೀಡಿದೆ. ಈ ಮಧ್ಯೆ ಕೆಲ ನ್ಯಾಯಮೂರ್ತಿಗಳು ಈ ಆದೇಶಕ್ಕೆ ವ್ಯತಿರಿಕ್ತವಾದ ತೀರ್ಪನ್ನು ಕೂಡ ಬರೆದಿದ್ದಾರೆ.

[ಐಸಿಜೆ ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
ICJ Order.pdf
Preview

[ಭಿನ್ನ ತೀರ್ಪಿನ ವಿವರಗಳಿಗೆ ಸಂಬಂಧಿಸಿದಂತೆ ಇಲ್ಲಿ ಕ್ಲಿಕ್ಕಿಸಿ]

Attachment
PDF
Judge Sebutinde Dissenting Opinion.pdf
Preview
Attachment
PDF
Judge Barak Opinion..pdf
Preview
Kannada Bar & Bench
kannada.barandbench.com