
ಸುಪ್ರೀಂ ಕೋರ್ಟ್‌ನ ಕೌಟುಂಬಿಕ ನ್ಯಾಯಾಲಯಗಳ ಸಮಿತಿ ಮತ್ತು ಕರ್ನಾಟಕ ಹೈಕೋರ್ಟ್ ಹಾಗೂ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಸಹಯೋಗದಲ್ಲಿ “ಕುಟುಂಬ: ಭಾರತೀಯ ಸಮಾಜದ ತಳಹದಿ” ಎಂಬ ವಿಷಯದ ಕುರಿತು ದಕ್ಷಿಣ ವಲಯ ಪ್ರಾದೇಶಿಕ ಸಮಾವೇಶವನ್ನು ಇಂದು ಮತ್ತು ನಾಳೆ (ಏ.12 ಮತ್ತು 13) ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಕ್ರಿಸೆಂಟ್ ರಸ್ತೆಯಲ್ಲಿರುವ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ನಡೆಯಲಿರುವ ಸಮಾವೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಾಗೂ ಕೌಟುಂಬಿಕ ನ್ಯಾಯಾಲಯಗಳ ಸಮಿತಿಯ ಅಧ್ಯಕ್ಷರಾದ ಬಿ ವಿ ನಾಗರತ್ನ ಅವರು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಾಗೂ ಸಮಿತಿ ಸದಸ್ಯರಾದ ಉಜ್ಜಲ್ ಭುಯಾನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ, ನ್ಯಾಯಾಂಗ ಅಕಾಡೆಮಿ ಅಧ್ಯಕ್ಷೆ ಹಾಗೂ ಹೈಕೋರ್ಟ್‌ನ ಕೌಟುಂಬಿಕ ನ್ಯಾಯಾಲಯಗಳ ಅಧ್ಯಕ್ಷರಾದ ಅನು ಶಿವರಾಮನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಆನಂತರ 'ಭಾರತದ ಕೌಟುಂಬಿಕ ಮೌಲ್ಯಗಳಲ್ಲಿನ ಬದಲಾವಣೆ ಕುರಿತಾದ ಸಾಮಾಜಿಕ ಅಧ್ಯಯನ: ಕೌಟುಂಬಿಕ ವಿವಾದಗಳ ಹೆಚ್ಚಳ' ವಿಷಯದ ಕುರಿತಾದ ಚರ್ಚೆಯ ನೇತೃತ್ವವನ್ನು ನ್ಯಾ. ಬಿ ವಿ ನಾಗರತ್ನ ವಹಿಸಲಿದ್ದು, ಮದ್ರಾಸ್ ಹೈಕೋರ್ಟ್ ನ್ಯಾ. ಅನ್ದಯಲ್ ಖುದ್ದೋಸ್ ಸಹ ಅಧ್ಯಕ್ಷತೆ ವಹಿಸಲಿದ್ದಾರೆ. ನವದೆಹಲಿಯ ಸಾಮಾಜಿಕ ಅಭಿವೃದ್ಧಿ ಮಂಡಳಿಯ ಪ್ರೊಫೆಸರ್ ಕಲ್ಪನಾ ಕನ್ನಬಿರನ್ ಮತ್ತು ಬೆಂಗಳೂರು ನಿಮ್ಹಾನ್ಸ್‌ನ ಸಹಾಯಕ ಪ್ರೊಫೆಸರ್ ಡಾ. ದೀಪಕ್ ಘಡಿಗಾವಂಕರ್ ಮಾತನಾಡಲಿದ್ದಾರೆ.
ದಾವೆ ಪೂರ್ವ ಮಧ್ಯಸ್ಥಿಕೆ, ಕೌನ್ಸೆಲಿಂಗ್ ಮತ್ತು ಕೌಟುಂಬಿಕ ವಿವಾದಗಳ ಮಧ್ಯಸ್ಥಿಕೆ ವಿಷಯ ಕುರಿತಾದ ಚರ್ಚೆಯ ನೇತೃತ್ವವನ್ನು ನ್ಯಾ. ಅನು ಶಿವರಾಮನ್ ಹಾಗೂ ಸಹ ನೇತೃತ್ವವನ್ನು ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾ. ಬಿ ಕೃಷ್ಣ ಮೋಹನ್ ವಹಿಸಲಿದ್ದಾರೆ. ವಕೀಲರು ಮತ್ತು ಮಧ್ಯಸ್ಥಿಕೆದಾರರಾದ ಬೆಂಗಳೂರಿನ ಎಸ್ ಎನ್ ಪ್ರಶಾಂತ್ ಚಂದ್ರ ಮತ್ತು ಗೀತಾ ದೇವಿ ಎಂ. ಪಾಪಣ್ಣ ಹಾಗೂ ಕೇರಳದ ಪಾರ್ವತಿ ಮೆನನ್ ಮಾತನಾಡಲಿದ್ದಾರೆ.
ಭಾನುವಾರ ಸಮಾರೋಪ ಸಮಾರಂಭ ನಡೆಯಲಿದ್ದು, ನ್ಯಾ. ಉಜ್ಜಲ್ ಭುಯಾನ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.