ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಸಂತೋಷ್‌ ರಾವ್‌ ಖುಲಾಸೆಗೊಳಿಸಿದ ಬೆಂಗಳೂರು ನ್ಯಾಯಾಲಯ

ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ 2012ರ ಅಕ್ಟೋಬರ್‌ 9ರಂದು ನಾಪತ್ತೆಯಾಗಿದ್ದರು. ಮರು ದಿನ ಮೃತ ವಿದ್ಯಾರ್ಥಿನಿಯ ದೇಹವು ಮಣ್ಣಸಂಕ ಬಳಿ ಪತ್ತೆಯಾಗಿತ್ತು.
City civil court, Bengaluru
City civil court, Bengaluru

ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂತೋಷ್‌ ರಾವ್‌ ಅವರನ್ನು ಬೆಂಗಳೂರಿನ ನ್ಯಾಯಾಲಯವು ಶುಕ್ರವಾರ ಖುಲಾಸೆಗೊಳಿಸಿದೆ.

ಸುಮಾರು 11 ವರ್ಷಗಳ ಸುದೀರ್ಘ ಕಾನೂನು ಪ್ರಕ್ರಿಯೆ ಇದಾಗಿದೆ. ಸಿಆರ್‌ಪಿಸಿ ಸೆಕ್ಷನ್‌ 235(1)ರ ಅಡಿ ಆರೋಪಿ ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು 50ನೇ ಹೆಚ್ಚುವರಿ ಸತ್ರ ನ್ಯಾಯಾಧೀಶರಾದ ಸಿ ಬಿ ಸಂತೋಷ್‌ ಆದೇಶ ಮಾಡಿದ್ದಾರೆ. ವಿಸ್ತೃತವಾದ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಆರೋಪಿಯನ್ನು ಖುಲಾಸೆಗೊಳಿಸಲಾಗಿದ್ದು, ಒಂದೊಮ್ಮೆ ಪ್ರಕರಣದಲ್ಲಿ ಮೇಲ್ಮನವಿ ಅಥವಾ ಆದೇಶ ಮರುಪರಿಶೀಲನಾ ಅರ್ಜಿ ಸಲ್ಲಿಕೆಯಾದರೆ ಆತನ ಹಾಜರಾತಿ ಖಾತರಿಪಡಿಸುವ ಉದ್ದೇಶದಿಂದ ಜಾಮೀನು ಬಾಂಡ್‌ ಮತ್ತು ಭದ್ರತೆಯು ಸಿಆರ್‌ಪಿಸಿ ಸೆಕ್ಷನ್‌ 437(ಎ) ಅಡಿ ಆರು ತಿಂಗಳು ಮುಂದುವರಿಯಲಿದೆ.

ಮೇಲ್ಮನವಿ ಸಲ್ಲಿಕೆ ಅವಧಿ ಮುಗಿದ ಬಳಿಕ 3,721 ರೂಪಾಯಿ ಅನ್ನು ಖುಲಾಸೆಗೊಂಡಿರುವ ಸಂತೋಷ್‌ ರಾವ್ ಅವರಿಗೆ ಹಿಂದಿರುಗಿಸಬೇಕು. ದೂರುದಾರರಿಗೆ (ಸೌಜನ್ಯ ಅವರ ತಂದೆ) ಲೇಡಿಸ್‌ ವಾಚ್‌ ಅನ್ನು ಹಿಂದಿರುಗಿಸಬೇಕು. ಅವರು ಅದನ್ನು ಕೋರದಿದ್ದರೆ ಆರು ತಿಂಗಳ ಬಳಿಕ ಅದನ್ನು ವಶಪಡಿಸಿಕೊಂಡು ಕಾನೂನಿನ ಅನ್ವಯ ವಿಲೇವಾರಿ ಮಾಡಬೇಕು ಎಂದು ನ್ಯಾಯಾಲಯವು ಸೂಚಿಸಿದೆ.

ಪ್ರಕರಣದ ಹಿನ್ನೆಲೆ: ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ 2012ರ ಅಕ್ಟೋಬರ್‌ 9ರಂದು ನಾಪತ್ತೆಯಾಗಿದ್ದರು. ಮರು ದಿನ ಮೃತ ವಿದ್ಯಾರ್ಥಿನಿಯ ದೇಹವು ಮಣ್ಣಸಂಕ ಬಳಿ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಬೆಳ್ತಂಗಡಿ ಠಾಣೆಯಲ್ಲಿ ಮೊದಲಿಗೆ ಆಕೆಯ ತಂದೆ ಚಂದ್ರಪ್ಪ ಗೌಡ ಅವರು ತನ್ನ ಎರಡನೇ ಪುತ್ರಿ ಸೌಜನ್ಯ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಆನಂತರ ಅದನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಗಿತ್ತು.

2013ರಲ್ಲಿ ಪ್ರಕರಣವು ಸಿಬಿಐಗೆ ವರ್ಗಾವಣೆಗೊಂಡಿದ್ದು, 2015ರಲ್ಲಿ ಪ್ರಕರಣವು ಮಂಗಳೂರಿನಿಂದ ಬೆಂಗಳೂರಿನ ಸಿಬಿಐ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.

Related Stories

No stories found.
Kannada Bar & Bench
kannada.barandbench.com