ಪ್ರಧಾನ ಅರ್ಚಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದೇಗುಲಗಳನ್ನು ಉಳಿಸಿ ಎಂದ ಉತ್ತರಾಖಂಡ ಹೈಕೋರ್ಟ್‌

"ಇಂತಹ ಘಟನೆಗಳು ದೇವಾಲಯಗಳಲ್ಲಿ ನಡೆಯುತ್ತಿವೆ ಎಂಬಂತಹ ಕಾಲವೂ ಬಂತೇ?" ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.
Uttarakhand High Court
Uttarakhand High Court
Published on

ಹರಿದ್ವಾರದ ಕೆಲವು ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಪ್ರಸ್ತಾಪಿಸಿರುವ ಉತ್ತರಾಖಂಡ ಹೈಕೋರ್ಟ್‌ ಪರಿಸ್ಥಿತಿ ಚಿಂತಾಜನಕವಾಗಿದ್ದು ದೇಗುಲ ಮತ್ತು ಆಶ್ರಮಗಳಲ್ಲಿ ದಿಢೀರ್‌ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಬುಧವಾರ ನಿರ್ದೇಶಿಸಿದೆ.

ಮಹಿಳೆಯೊಂದಿಗೆ ಸಹಜೀವನ ನಡೆಸುತ್ತಿರುವ ಆರೋಪವೂ ಸೇರಿದಂತೆ ಮಾ ಚಂಡಾ ದೇವಿ ದೇಗುಲದ ಮುಖ್ಯ ಅರ್ಚಕರ ವಿರುದ್ಧ ದಾಖಲಾಗಿರುವ ವಿವಿಧ ಕ್ರಿಮಿನಲ್‌ ಪ್ರಕರಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ರಾಕೇಶ್‌ ತಪ್ಲಿಯಾಲ್‌ ಈ ನಿರ್ದೇಶನ ನೀಡಿದ್ದಾರೆ.

Also Read
ಡಿಜಿಟಲ್‌ ಅರೆಸ್ಟ್‌: ಬ್ಯಾಂಕ್‌ಗಳ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ

ದೇವಾಲಯ ನಿರ್ವಹಿಸುತ್ತಿರುವವರ ವಿರುದ್ಧ ಇಂತಹ ಹಲವು ಅಪರಾಧ ಪ್ರಕರಣಗಳು ದಾಖಲಾಗುತ್ತಿರುವುದನ್ನು ಗಮನಿಸಿರುವುದಾಗಿ ನ್ಯಾಯಾಲಯ ತಿಳಿಸಿದೆ. ಅಂತೆಯೇ ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕುರಿತು ಪರಿಶೀಲಿಸಲು ದಿಡೀರ್‌ ತಪಾಸಣೆ ನಡೆಸಲು ತಂಡ ರಚಿಸುವಂತೆ ಅದು ಸೂಚಿಸಿದೆ. ಅಂತಹ ಘಟನೆಗಳು ದೇವಾಲಯಗಳಲ್ಲಿ ನಡೆಯುತ್ತಿವೆ ಎಂಬಂತಹ ಕಾಲವೂ ಬಂತೇ? ಎಂದು ಪೀಠ ಬೇಸರ ವ್ಯಕ್ತಪಡಿಸಿದೆ. ಜೊತೆಗೆ ದೇಗುಲಗಳನ್ನು ಉಳಿಸಿ ಎಂದು ಬುದ್ಧಿವಾದ ಹೇಳಿದೆ.

"ದೇಶ, ವಿದೇಶಗಳ ವಿವಿಧೆಡೆಯಿಂದ ಭಕ್ತಾದಿಗಳು ಇಲ್ಲಿ ದೇವರಿದ್ದಾರೆ ಎಂದು ಬರುತ್ತಾರೆ... ಆದರೆ, ಇಂತಹ ಮಂದಿರಗಳಲ್ಲಿಯೇ ಅಲ್ಲಿನ ಮಹಾಂತರು ಈ ಎಲ್ಲ ಚಟುವಟಿಕೆಗಳನ್ನು ನಡೆಸಿದ್ದಾರೆ ನೋಡಿ... ಮೊದಲಿಗೆ (ಪ್ರಸಕ್ತ ಪ್ರಕರಣದಲ್ಲಿ) ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ, ಮುಂದುವರಿದು ಈಗ ಲಿವ್‌-ಇನ್‌ ಸಂಬಂಧ ಕೇಳಿಬಂದಿದೆ, ಲಿವ್‌ ಇನ್‌ ಸಂಬಂಧ ಇರುವವರ ಜೊತೆಗೆ ಮಗುವೂ ಆಗಿದೆ.. ಇದಲ್ಲದೆ ಪಂಜಾಬ್‌ ಪೊಲೀಸರು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ..." ಎಂದು ನ್ಯಾಯಾಲಯ ಪ್ರಕರಣದ ಬಗ್ಗೆ ತೀವ್ರ ಬೇಸರ ಹೊರಹಾಕಿತು.

ದಿಢೀರ್‌ ತಪಾಸಣೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದಿರುವ ಅದು, ಆಶ್ರಮ ದೇವಾಲಯಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ ಅದು ಅತ್ಯಂತ ಚಿಂತಾಜನಕ ಸ್ಥಿತಿ ಎಂದು ತಿಳಿಸಿದೆ.

ದೇವಾಲಯದ ಪ್ರಧಾನ ಅರ್ಚಕ ರೋಹಿತ್‌ ಗಿರಿ ಅವರ ವಿರುದ್ಧ ಮಹಿಳೆಯೊಬ್ಬರ ವಿಚ್ಛೇದನ ಪ್ರಕ್ರಿಯೆ ನಡೆಯತ್ತಿರುವಾಗಲೇ ಆಕೆಯೊಂದಿಗೆ ಸಹಜೀವನದಲ್ಲಿ ತೊಡಗಿ ಮಗು ಪಡೆದಿರುವುದು ಜೊತೆಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ವಿವಿಧ ಪ್ರಕರಣಗಳು ದಾಖಲಾಗಿರುವುದನ್ನು ಗಮನಿಸಿರುವ ನ್ಯಾಯಾಲಯ  ತಹ ಘಟನೆಗಳಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದಿತು. ಕನಿಷ್ಠ ದೇವಾಲಯ, ಮಸೀದಿ, ಗುರುದ್ವಾರಗಳಂತಹ ಪವಿತ್ರ ಸ್ಥಳಗಳನ್ನು ಇಂತಹ ಚಟುವಟಿಕೆಗಳಿಂದ ಉಳಿಸಬೇಕೆಂದು ಅದು ಖಡಕ್‌ ಎಚ್ಚರಿಕೆ ನೀಡಿತು.

ಮುಂದುವರೆದು, ದೇವರಿಗೆಂದು ಭಕ್ತಾದಿಗಳು ನೀಡುವ ದೇಣಿಗೆ ಹಣವನ್ನು ಭೋಗಲಾಲಸೆಗೆ ಬಳಸುವ ಅರ್ಚಕರ ಪ್ರವೃತ್ತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. "ಭಕ್ತರು ಕೊಡುವ ದಾನ ನಿಮ್ಮ ಕೌಟುಂಬಿಕ ಜೀವನಕ್ಕಾಗಿಯೇ?" ಎಂದು ಕೆಂಡಕಾರಿತು. ದಾನವನ್ನು ನೀಡುವುದು ಸಾಮಾಜಿಕ ಸೇವೆಗಳ ಉದ್ದೇಶಕ್ಕಾಗಿ ಎಂದು ತಿಳಿಸಿತು.

Also Read
ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು: ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಈ ಹಿಂದೆ ದೇವಸ್ಥಾನಕ್ಕೆ ಸಂಬಂಧಿಸಿದ ಟ್ರಸ್ಟ್‌ನ ಅವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಂಡಿದ್ದ ಹೈಕೋರ್ಟ್‌, ಟ್ರಸ್ಟ್‌ ಕಾರ್ಯವೈಖರಿ ಮೇಲ್ವಿಚಾರಣೆ ಮಾಡುವಂತೆ ಬದರೀನಾಥ ಕೇದಾರನಾಥ ದೇವಸ್ಥಾನ ಸಮಿತಿಗೆ (ಬಿಕೆಟಿಸಿ) ಸೂಚಿಸಿತ್ತು. ಹೈಕೋರ್ಟ್‌ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ 2025ರ ಆಗಸ್ಟ್‌ನಲ್ಲಿ ಸ್ಪಷ್ಟಪಡಿಸಿತ್ತು. ಅಲ್ಲದೆ ಹರಿದ್ವಾರ ಜಿಲ್ಲಾಧಿಕಾರಿ ತನಿಖೆ ನಡೆಸಬೇಕು ಮತ್ತು ಬಿಕೆಟಿಸಿ ಹೈಕೋರ್ಟ್‌ಗೆ ನಿಯಮಿತ ವರದಿ ಸಲ್ಲಿಸುವಂತೆ ಅದು ಸೂಚಿಸಿತ್ತು.

ಬಿಕೆಟಿಸಿ ಸುಪರ್ದಿಗೆ ಬಂದ ಬಳಿಕ ದೇವಸ್ಥಾನದ ಆದಾಯದಲ್ಲಿ ಹೆಚ್ಚಲವಾಗಿದ್ದು ಅತಿಕ್ರಮಣ ತೆರವುಗೊಳಿಸಲಾಗಿದೆ ಎಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ನವೀಕೃತ ವರದಿ ಕೇಳಿದ ಹೈಕೋರ್ಟ್‌ ತನಿKಏಗೆ ಸಹಕರಿಸದಿದ್ದರೆ ಅರ್ಚಕ ಗಿರಿಗೆ ನೀಡಿರುವ ಮಧ್ಯಂತರ ರಕ್ಷಣೆಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿತು.

Kannada Bar & Bench
kannada.barandbench.com