ಅಕ್ರಮ ಅದಿರು ಸಾಗಣೆ ಪ್ರಕರಣ: ಬಿಜೆಪಿ ಶಾಸಕ ಆನಂದ್‌ ಸಿಂಗ್‌ರನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ

“ಎಸ್ ಬಿ ಮಿನರಲ್ಸ್ ಗೆ ಸೇರಿದ ಗಣಿಯಿಂದ 16,987 ಮೆಟ್ರಿಕ್ ಟನ್ ಅದಿರನ್ನು ಆರೋಪಿಗಳು ಅಕ್ರಮವಾಗಿ ಸಾಗಣೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ₹1.53 ಕೋಟಿ ನಷ್ಟ ಉಂಟುಮಾಡಿದ್ದಾರೆ" ಎಂದು ಆರೋಪಿಸಲಾಗಿತ್ತು.
BJP MLA Anand Singh & Bengaluru city civil court
BJP MLA Anand Singh & Bengaluru city civil court
Published on

ಬಳ್ಳಾರಿಯ ವ್ಯಾಸನಕೆರೆ ಗಣಿಯಿಂದ ಬೇಲೇಕೇರಿ ಬಂದರಿಗೆ ಅಕ್ರಮ ಅದಿರು ಸಾಗಣೆ ಮಾಡಿ, ಅಲ್ಲಿಂದ ಪರವಾನಗಿ ಇಲ್ಲದೇ ವಿದೇಶಗಳಿಗೆ ರಫ್ತು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಆನಂದ ಸಿಂಗ್ ಮತ್ತು ಗೋವಾದ ಹಾಲಿ ಸಚಿವ ರೋಹನ್ ಅಶೋಕ್ ಖಾವುಂತೆ ಸೇರಿದಂತೆ ಇತರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ರದ್ದುಪಡಿಸಿದೆ.

ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ದಳವು (ಎಸ್‌ಐಟಿ) ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಇಂದು ಪ್ರಕಟಿಸಿದರು.

Santhosh Gajanan Bhat Judge, MP/MLA Special Court
Santhosh Gajanan Bhat Judge, MP/MLA Special Court

“ಬಿಜೆಪಿ ಶಾಸಕ ಆನಂದ್ ಸಿಂಗ್, ಬಿ ಎಸ್‌ ಗೋಪಾಲ ಸಿಂಗ್, ಬಿ ಎಸ್‌ ಪಾಂಡುರಂಗ ಸಿಂಗ್, ಮೆಸರ್ಸ್‌ ನೈವೇದ್ಯ ಲಾಜಿಸ್ಟಿಕ್ಸ್, ರಾಜೇಶ್ ಅಶೋಕ್‌ ಖಾವುಂತೆ, ರೋಹನ್ ಖಾವುಂತೆ, ಶಾಜು ನಾಯರ್, ರಿಯಾ ನಾಯರ್, ಮೊಹಮ್ಮದ್ ಮುನೀರ್, ಕ್ಲಾರಿಯಾ ಮಾರ್ಕೆಟಿಂಗ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌, ಆನಂದ್‌ ಸಿಂಗ್‌ ಮಾಲೀಕತ್ವದ ಎಸ್‌ ಬಿ ಮಿನರಲ್ಸ್‌ ಅನ್ನು ದೋಷಮುಕ್ತಗೊಳಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿರುವ ನ್ಯಾಯಾಧೀಶರು, ಆನಂದ್ ಸಿಂಗ್ ಸೇರಿದಂತೆ ಎಲ್ಲಾ ಆರೋಪಿಗಳನ್ನೂ ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದ್ದಾರೆ. “ಆರೋಪಿಗಳು, ಎಸ್ ಬಿ ಮಿನರಲ್ಸ್‌ಗೆ ಸೇರಿದ ಗಣಿಯಿಂದ 16,987 ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ₹1.53 ಕೋಟಿ ನಷ್ಟ ಉಂಟುಮಾಡಿದ್ದಾರೆ" ಎಂದು ಆರೋಪಿಸಲಾಗಿತ್ತು.

ಸರ್ಕಾರಿ ಅಧಿಕಾರಿಗಳು, ಗಣಿ ಉದ್ಯಮಿಗಳು ಮತ್ತು ಇತರೆ ಖಾಸಗಿ ವ್ಯಕ್ತಿಗಳು ಅಕ್ರಮ ಮತ್ತು ಕಾನೂನುಬಾಹಿರವಾಗಿ ಅಕ್ರಮ ಕೂಟ ರಚಿಸಿಕೊಂಡು ಬೇಲೇಕೇರಿ ಬಂದರಿಗೆ ಅದಿರು ಸಾಗಿಸಿ, ಅಲ್ಲಿಂದ ಪರವಾನಗಿ ಪಡೆಯದೇ ವಿದೇಶಗಳಿಗೆ ಅದಿರು ರಫ್ತು ಮಾಡಿದ್ದರು. ಈ ಮೂಲಕ ಸರ್ಕಾರಕ್ಕೆ ಸೇರಿದ ಅದಿರನ್ನು ಕಳುವು ಮಾಡಿ, ವಂಚಿಸಿ, ಲಾಭ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಬಿಜೆಪಿ ಶಾಸಕ ಆನಂದ್ ಸಿಂಗ್, ಸೌಮಿತ್‌ ರಂಜನ್‌ ಜೇನಾ, ಬಿ ಎಸ್‌ ಗೋಪಾಲ ಸಿಂಗ್, ಬಿ ಎಸ್‌ ಪಾಂಡುರಂಗ ಸಿಂಗ್, ಬಿ ಎಸ್‌ ಶ್ರೀನಿವಾಸ ಸಿಂಗ್‌, ಮೆಸರ್ಸ್‌ ನೈವೇದ್ಯ ಲಾಜಿಸ್ಟಿಕ್ಸ್, ರಾಜೇಶ್ ಅಶೋಕ್‌ ಖಾವುಂತೆ, ರೋಹನ್ ಖಾವುಂತೆ, ವಿಜಯ್, ಶಾಜು ನಾಯರ್, ರಿಯಾ ನಾಯರ್, ಮೊಹಮ್ಮದ್ ಮುನೀರ್, ಕ್ಲಾರಿಯಾ ಮಾರ್ಕೆಟಿಂಗ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌, ಎಸ್‌ ಬಿ ಮಿನರಲ್ಸ್‌ ಸೇರಿ 14 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಸೆಕ್ಷನ್‌ 409 (ನಂಬಿಕೆ ದ್ರೋಹ), 420 (ವಂಚನೆ), 120 ಬಿ (ಒಳಸಂಚು), ಎಂಎಂಆರ್‌ಡಿ ಕಾಯಿದೆ ಸೆಕ್ಷನ್‌ 21, 23 ಜೊತೆಗೆ 4(1) ಮತ್ತು 4(1A), ಕರ್ನಾಟಕ ಅರಣ್ಯ ನಿಯಮ 165 ಜೊತೆಗೆ ಸೆಕ್ಷನ್‌ 144 ಅಡಿ ಆರೋಪ ನಿಗದಿಗೊಳಿಸಲಾಗಿತ್ತು.

Kannada Bar & Bench
kannada.barandbench.com