ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಮಾಜಿ ಶಾಸಕ ಯಾವಗಲ್‌ ಸೇರಿ ಮೂವರನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ

ಸಿಆರ್‌ಪಿಸಿ ಸೆಕ್ಷನ್‌ 2(ಡಿ) ಅಡಿ ಖಾಸಗಿ ದೂರನ್ನು ಮ್ಯಾಜಿಸ್ಟ್ರೇಟ್‌ಗೆ ನೀಡಬೇಕು. ಆದರೆ, ಈ ಪ್ರಕರಣದಲ್ಲಿ ಹಾಗೆ ಮಾಡಲಾಗಿಲ್ಲ ಎಂದಿರುವ ನ್ಯಾಯಾಲಯವು ಪ್ರಕರಣವನ್ನು ರದ್ದುಪಡಿಸಿದೆ.
B R Yavagal, Ex MLA
B R Yavagal, Ex MLA
Published on

ನೀತಿ ಸಂಹಿತೆ ಉಲ್ಲಂಘಿಸಿ ಸರ್ಕಾರಿ ಕಟ್ಟಡದಲ್ಲಿ ಸಭೆ ನಡೆಸಿದ ಆರೋಪ ಎದುರಿಸುತ್ತಿದ್ದ ಗದಗ ಜಿಲ್ಲೆಯ ರೋಣದ ಮಾಜಿ ಶಾಸಕ ಬಿ ಆರ್‌ ಯಾವಗಲ್‌ ಸೇರಿದಂತೆ ಮೂವರನ್ನು ವಿಶೇಷ ನ್ಯಾಯಾಲಯವು ಈಚೆಗೆ ಖುಲಾಸೆಗೊಳಿಸಿದೆ.

ರೋಣ ಪೊಲೀಸರು 2018ರ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮಾಜಿ ಶಾಸಕ ಬಿ ಆರ್‌ ಯಾವಗಲ್‌ ಮತ್ತು ಇತರೆ ಇಬ್ಬರ ವಿರುದ್ಧ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು 62ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮತ್ತು ಹಾಲಿ, ಮಾಜಿ ಸಂಸದರ ಪ್ರಕರಣದ ವಿಚಾರಣೆಗೆ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್‌ ಅವರು ಪ್ರಕಟಿಸಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್‌ 2(ಡಿ) ಅಡಿ ಖಾಸಗಿ ದೂರನ್ನು ಮ್ಯಾಜಿಸ್ಟ್ರೇಟ್‌ಗೆ ನೀಡಬೇಕು. ಆದರೆ, ಈ ಪ್ರಕರಣದಲ್ಲಿ ಹಾಗೆ ಮಾಡಲಾಗಿಲ್ಲ ಎಂದಿರುವ ನ್ಯಾಯಾಲಯವು ಪ್ರಕರಣವನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: ರಾಜಕೀಯ ಪಕ್ಷಗಳು ಸರ್ಕಾರದ ಕಟ್ಟಡಗಳನ್ನು ಚುನಾವಣಾ ಸಭೆಗೆ ಬಳಕೆ ಮಾಡಬಾರದು ಎಂಬ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಹಿಳಾ ಎಸ್‌ಎಚ್‌ಜಿ ಕಟ್ಟಡದಲ್ಲಿ ಮಾಜಿ ಶಾಸಕ ಬಿ ಆರ್‌ ಯಾವಗಲ್‌, ಬಸವಂತಪ್ಪ ಶಿವಪ್ಪ ಶಿರೋಲಾ ಮತ್ತು ವಿಜಯಕುಮಾರ್‌ ತೋಟರ ಅವರು ಸಭೆ ನಡೆಸಿದ್ದರು. ಈ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದರು ಎಂದು ಆರೋಪಿಸಿ ರೋಣ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 188ರ ಅಡಿ ಪ್ರಕರಣ ದಾಖಲಿಸಿದ್ದರು.

Attachment
PDF
Rona PS V. B R Yavagal and others.pdf
Preview
Kannada Bar & Bench
kannada.barandbench.com