ಐಸಿಯುನಲ್ಲಿರುವ ಸಹೋದರಿ ಭೇಟಿ ಮಾಡಲು ವಿನಯ್‌ ಕುಲಕರ್ಣಿಗೆ ಷರತ್ತುಬದ್ಧ ಅನುಮತಿ ನೀಡಿದ ವಿಶೇಷ ನ್ಯಾಯಾಲಯ

ವಿಚಾರಣಾಧೀನ ನ್ಯಾಯಾಲಯವು ಆದೇಶ ಮಾಡುವವರೆಗೆ ವಿನಯ್‌ ಕುಲಕರ್ಣಿ ಅವರು ಧಾರವಾಡ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಎಂಬ ಷರತ್ತನ್ನು ವಿಧಿಸಿತ್ತು. ಹೀಗಾಗಿ, ವಿನಾಯಿತಿ ಕೋರಿ ವಿನಯ್‌ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಇದನ್ನು ಪೀಠ ಮಾನ್ಯ ಮಾಡಿದೆ.
Vinay Kulkarni
Vinay KulkarniPTI

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ಕಾಂಗ್ರೆಸ್‌ ಮುಖಂಡ ವಿನಯ್‌ ಕುಲಕರ್ಣಿ ಅವರು ಅನಾರೋಗ್ಯದಿಂದ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಹೋದರಿಯ ಕ್ಷೇಮ ವಿಚಾರಿಸಲು ಮೂರು ತಾಸುಗಳ ಕಾಲಾವಕಾಶವನ್ನು ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶನಿವಾರ ಆದೇಶಿಸಿದೆ.

ಸಹೋದರಿ ವಿಜಯಲಕ್ಷ್ಮಿ ಪಾಟೀಲ್‌ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದು, ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಜಯಂತ್‌ ಕುಮಾರ್‌ ಅವರು ಮಾನ್ಯ ಮಾಡಿದ್ದಾರೆ.

“ಬೆಂಗಳೂರಿನಲ್ಲಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಮಾಹಿತಿ ನೀಡಿ ಧಾರವಾಡ ಜಿಲ್ಲೆಯ ವ್ಯಾಪ್ತಿಗೆ ಬರುವ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಲಕ್ಷ್ಮಿ ಅವರನ್ನು ಕೇವಲ ಮೂರು ತಾಸುಗಳ ಕಾಲ ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಮೂರು ಗಂಟೆಗೂ ಹೆಚ್ಚು ಕಾಲ ಧಾರವಾಡ ವ್ಯಾಪ್ತಿಯಲ್ಲಿ ಉಳಿಯುವಂತಿಲ್ಲ. ಪ್ರಾಸಿಕ್ಯೂಷನ್‌ ಸಾಕ್ಷ್ಯಗಳಿಗೆ ಬೆದರಿಕೆ ಹಾಕುವ ಯಾವುದೇ ಕೃತ್ಯದಲ್ಲಿ ತೊಡಗುವಂತಿಲ್ಲ. ಆಸ್ಪತ್ರೆಗೆ ಭೇಟಿ ಮಾಡುವುದನ್ನು ಹೊರತುಪಡಿಸಿ ಅಲ್ಲಿ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಪ್ರಾಸಿಕ್ಯೂಷನ್‌ನ ಯಾವುದೇ ಸಾಕ್ಷ್ಯಗಳನ್ನು ಭೇಟಿ ಮಾಡುವಂತಿಲ್ಲ” ಎಂಬ ಷರತ್ತನ್ನು ಪೀಠ ವಿಧಿಸಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕಠಿಣ ಷರತ್ತುಗಳನ್ನು ವಿಧಿಸಿ ವಿನಯ್‌ ಕುಲಕರ್ಣಿ ಅವರನ್ನು ವಿಶೇಷ ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು. ಈ ಪೈಕಿ, ವಿಚಾರಣಾಧೀನ ನ್ಯಾಯಾಲಯವು ಆದೇಶ ಮಾಡುವವರೆಗೆ ವಿನಯ್‌ ಕುಲಕರ್ಣಿ ಅವರು ಧಾರವಾಡ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಎಂಬ ಷರತ್ತನ್ನು ವಿಧಿಸಿತ್ತು. ಹೀಗಾಗಿ, ವಿನಾಯಿತಿ ಕೋರಿ ವಿನಯ್‌ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು.

Also Read
[ಯೋಗೀಶ್‌ ಗೌಡ ಕೊಲೆ ಪ್ರಕರಣ] ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ಜಾಮೀನು ನೀಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

2016ರ ಜೂನ್‌ 15ರಂದು ಧಾರವಾಡದ ಸಪ್ತಾಪುರದ ಉದಯ್‌ ಜಿಮ್‌ನಲ್ಲಿ ದುಷ್ಕರ್ಮಿಗಳು ಯೋಗೀಶ್‌ ಗೌಡ ಅವರನ್ನು ಮಚ್ಚು,ಲಾಂಗ್‌ಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು. ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಆರೋಪಿಯಾಗಿದ್ದು, ಅವರೂ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. 2019ರಲ್ಲಿ ರಾಜ್ಯ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. 2020ರ ನವೆಂಬರ್‌ 5ರಂದು ಸಿಬಿಐ ಅಧಿಕಾರಿಗಳು ವಿನಯ್‌ ಕುಲಕರ್ಣಿ ಅವರನ್ನು ಬಂಧಿಸಿದ್ದರು. 2021ರ ಆಗಸ್ಟ್‌ 19ರಂದು ವಿಶೇಷ ನ್ಯಾಯಾಲಯವು ವಿನಯ್‌ ಕುಲಕರ್ಣಿಗೆ ಜಾಮೀನು ಮಂಜೂರು ಮಾಡಿತ್ತು.

Kannada Bar & Bench
kannada.barandbench.com