ಜಾರ್ಖಂಡ್ ವಿಧಾನಸಭೆಯಲ್ಲಿ ಚಂಪೈ ವಿಶ್ವಾಸಮತ ಯಾಚನೆ: ಮತ ಚಲಾಯಿಸಲು ಹೇಮಂತ್ ಸೊರೇನ್‌ಗೆ ಪಿಎಂಎಲ್‌ಎ ನ್ಯಾಯಾಲಯದ ಅನುಮತಿ

ಇ ಡಿ ಸೊರೇನ್‌ ಅವರನ್ನು ಬಂಧಿಸಲು ಮುಂದಾದ ಹಿನ್ನೆಲೆಯಲ್ಲಿ ಸಿಎಂ ಗಾದಿಯಿಂದ ಅವರು ಜನವರಿ 31ರಂದು ಕೆಳಗಿಳಿದಿದ್ದರು. ಬಳಿಕ ಜೆಎಂಎಂನ ಚಂಪೈ ಅವರು ನೂತನ ಮುಖ್ಯಮಂತ್ರಿಯಾಗಿದ್ದರು. ಅವರು ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಿದೆ.
ಹೇಮಂತ್ ಸೊರೆನ್ ಮತ್ತು ಇಡಿ
ಹೇಮಂತ್ ಸೊರೆನ್ ಮತ್ತು ಇಡಿಹೇಮಂತ್ ಸೊರೆನ್ (ಫೇಸ್ಬುಕ್)

ಜಾರ್ಖಂಡ್‌ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಸರ್ಕಾರದ ಪರ ವಿಶ್ವಾಸಮತ ಚಲಾಯಿಸಲು ಈಚೆಗಷ್ಟೇ ಬಂಧಿತರಾಗಿರುವ ನಿಕಟಪೂರ್ವ ಮುಖ್ಯಮಂತ್ರಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್‌ ಸೊರೇನ್‌ ಅವರಿಗೆ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸಲು ಅನುಮತಿ ಕೋರಿ ಸೊರೇನ್ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ) ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ರೈ ಈ ಆದೇಶ ನೀಡಿದ್ದಾರೆ.

ಭೂ ಹಗರಣದ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ಸೊರೇನ್‌ ಅವರನ್ನು ಬಂಧಿಸಲಿದ್ದ ಹಿನ್ನೆಲೆಯಲ್ಲಿ ಸಿಎಂ ಗಾದಿಯಿಂದ ಹೇಮಂತ್‌ ಜನವರಿ 31 ರಂದು ಕೆಳಗಿಳಿದಿದ್ದರು. ಬಳಿಕ ಜೆಎಂಎಂನ ಮತ್ತೊಬ್ಬ ನಾಯಕ ಚಂಪೈ ಅವರು ನೂತನ ಮುಖ್ಯಮಂತ್ರಿಯಾಗಿದ್ದರು. ಅವರು ಇಂದು (ಫೆ. 5) ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಿದೆ.

ಸೊರೇನ್‌ ಅವರು ವಿಶ್ವಾಸಮತ ಯಾಚನೆಗೆ ಹಾಜರಾಗುವುದಕ್ಕೆ ಜಾರಿ ನಿರ್ದೇಶನಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಇದು ಸರ್ಕಾರವನ್ನು ಉರುಳಿಸುವುದು ಇ ಡಿಯ ಉದ್ದೇಶ ಎಂಬುದಕ್ಕೆ ಸಾಕ್ಷಿ ಎಂದು ರಾಜ್ಯದ ಅಡ್ವೊಕೇಟ್ ಜನರಲ್ (ಎ ಜಿ) ರಾಜೀವ್ ರಂಜನ್ ನ್ಯಾಯಾಲಯಕ್ಕೆ ತಿಳಿಸಿದರು.

"ಜಾರಿ ನಿರ್ದೇಶನಾಲಯ (ಇ ಡಿ) ನಮ್ಮ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ (ಇ ಡಿಯ) ಬಣ್ಣ ಬಯಲಾಗಿದೆ ಎಂದು ನಾವು ನ್ಯಾಯಾಲಯಕ್ಕೆ ತಿಳಿಸಿದೆವು. ಮಾಜಿ ಮುಖ್ಯಮಂತ್ರಿ ಅವರನ್ನು ಬಂಧಿಸುವಲ್ಲಿ ಇ ಡಿ ತೋರಿದ ಅವಸರ ಪ್ರಕರಣದ ತನಿಖೆಗಾಗಿ ಅಲ್ಲ, ಬದಲಿಗೆ ಸರ್ಕಾರವನ್ನು ಉರುಳಿಸುವುದಕ್ಕಾಗಿ. ಈಗ ಹೇಮಂತ್‌ ಅವರು ವಿಶ್ವಾಸಮತ ಯಾಚನೆ ವೇಳೆ ಭಾಗವಹಿಸುವುದನ್ನು ಅದು ಬಯಸುತ್ತಿಲ್ಲ ಎಂದು ನಾವು ನ್ಯಾಯಾಲಯಕ್ಕೆ ತಿಳಿಸಿದ್ದೇವೆ" ಎಂಬುದಾಗಿ ಎಜಿ ಹೇಳಿದರು.

ವಿಶ್ವಾಸಮತ ಯಾಚನೆಯಲ್ಲಿ ಮತ ಚಲಾಯಿಸುವುದು ಅರ್ಜಿದಾರ ಸೊರೇನ್‌ ಅವರ ಮೂಲಭೂತ ಹಕ್ಕಾಗಿದ್ದು ಸುಳ್ಳು ಪ್ರಕರಣ ಹೂಡಿ ಬಂಧಿಸುವುದರಿಂದ ಆ ಹಕ್ಕನ್ನು ಸೋಲಿಸಲಾಗದು ಎಂದು ಅವರು ಹೇಳಿದ್ದಾರೆ.

"ವಿಶ್ವಾಸಮತ ಯಾಚನೆಗೂ ತನಿಖೆಗೂ ಯಾವುದೇ ಸಂಬಂಧವಿಲ್ಲ. ಇ ಡಿ ಅದನ್ನು ಆಕ್ಷೇಪಿಸಬಾರದಿತ್ತು" ಎಂದು ಅವರು ಪ್ರತಿಪಾದಿಸಿದರು

ವಾದಗಳನ್ನು ಆಲಿಸಿದ ಪಿಎಂಎಲ್‌ಎ ನ್ಯಾಯಾಲಯ ವಿಶೇಷ ಅಧಿವೇಶನದಲ್ಲಿ ಭಾಗವಹಿಸಲು ಮತ್ತು ವಿಶ್ವಾಸಮತ ಯಾಚನೆಯಲ್ಲಿ ಮತ ಚಲಾಯಿಸಲು ಸೊರೇನ್ ಅವರಿಗೆ ಅನುಮತಿ ನೀಡಿತು. 

"ಮತದಾನ ಪ್ರಕ್ರಿಯೆಯಲ್ಲಿ ಅರ್ಜಿದಾರರರು ಇರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಇ ಡಿಗೆ ಆದೇಶಿಸಿದೆ. ಅರ್ಜಿದಾರರಿಗೆ ಮಾಧ್ಯಮಗಳೊಂದಿಗೆ ಮಾತನಾಡದಂತೆ ಸೂಚಿಸಲಾಗಿದೆ" ಎಂದು ರಂಜನ್ ಮಾಹಿತಿ ನೀಡಿದರು. 

ಹೇಮಂತ್‌ ಸೊರೇನ್‌ ಐಎಎಸ್‌ ಅಧಿಕಾರಿ ಛವಿ ರಂಜನ್ ಸೇರಿದಂತೆ ಈವರೆಗೆ ಹನ್ನೆರಡು ಜನರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

Kannada Bar & Bench
kannada.barandbench.com