[ಮುಡಾ ಪ್ರಕರಣ] ವಿಶೇಷ ನ್ಯಾಯಾಲಯ ವಿಚಾರಣೆ ಮುಂದೂಡಬೇಕು, ಆತುರದ ನಿರ್ಧಾರ ಕೈಗೊಳ್ಳಬಾರದು: ಹೈಕೋರ್ಟ್‌

“ಮುಂದಿನ ವಿಚಾರಣೆವರೆಗೆ ಸಂಬಂಧಿತ ನ್ಯಾಯಾಲಯ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ತನ್ನ ಪ್ರಕ್ರಿಯೆಯನ್ನು ಮುಂದೂಡಬೇಕು. ಯಾವುದೇ ಆತುರದ ನಿರ್ಧಾರ ಕೈಗೊಳ್ಳಬಾರದು” ಎಂದು ಆದೇಶಿಸಿರುವ ಹೈಕೋರ್ಟ್‌.
CM Siddaramaiah and Gov Thawar Chand Gehlot
CM Siddaramaiah and Gov Thawar Chand Gehlot
Published on

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಶೇಷ ನ್ಯಾಯಾಲಯವು ವಿಚಾರಣೆ ಮುಂದೂಡಬೇಕು, ಆತುರದ ಕ್ರಮಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ದೂರುದಾರ ಸಾಮಾಜಿಕ ಕಾರ್ಯಕರ್ತರಾದ ಟಿ ಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಜೆಡಿಎಸ್‌ ಕಾನೂನು ಘಟಕದ ಪ್ರದೀಪ್‌ ಕುಮಾರ್‌ ಅವರ ಅರ್ಜಿ ಆಧರಿಸಿ ರಾಜ್ಯಪಾಲರು ನೀಡಿರುವ ಅಭಿಯೋಜನಾ ಮಂಜೂರಾತಿ ವಜಾ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

“ಈ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ವಾದ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ಮುಂದಿನ ವಿಚಾರಣೆವರೆಗೆ ಸಂಬಂಧಿತ ನ್ಯಾಯಾಲಯ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ತನ್ನ ಪ್ರಕ್ರಿಯೆಯನ್ನು ಮುಂದೂಡಬೇಕು. ಮುಂದಿನ ವಿಚಾರಣೆವರೆಗೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳಬಾರದು” ಎಂದು ಹೈಕೋರ್ಟ್‌ ಆದೇಶಿಸಿದೆ.

“ಸಿಎಂ ಸಿದ್ದರಾಮಯ್ಯ ಪರವಾಗಿ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 17ಎ ಮತ್ತು ಬಿಎನ್‌ಎಸ್‌ಎಸ್‌ ಸೆಕ್ಷನ್‌ 218ರ ಅಡಿ ಅಭಿಯೋಜನಾ ಮಂಜೂರಾತಿಯ ಬಗ್ಗೆ ಗಮನಸೆಳೆದಿದ್ದಾರೆ. ಮೇಲ್ನೋಟಕ್ಕೆ ರಾಜ್ಯಪಾಲರ ಆದೇಶವು ವಿವೇಚನಾರಹಿತವಾಗಿದೆ ಎಂದು ವಾದಿಸಿದ್ದಾರೆ. ಶರವೇಗದಲ್ಲಿ ರಾಜ್ಯಪಾಲರು ಆದೇಶಗಳನ್ನು ಮಾಡಿದ್ದಾರೆ. ಜುಲೈ 26ರಂದು ಅಬ್ರಹಾಂ ದೂರು ನೀಡಿದ್ದಾರೆ. ಅಂದೇ ಮುಖ್ಯಮಂತ್ರಿಗೆ ರಾಜ್ಯಪಾಲರು ಶೋಕಾಸ್‌ ನೋಟಿಸ್‌ ನೀಡಿದ್ದಾರೆ ಎಂದು ವಿವರಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಂಪುಟ ವಿಸ್ತೃತವಾದ ಸಲಹೆ ಮತ್ತು ಉತ್ತರವನ್ನು ಸಲ್ಲಿಸಿದೆ. ಮುಖ್ಯಮಂತ್ರಿಯವರೂ ಪ್ರತ್ಯೇಕವಾಗಿ ರಾಜ್ಯಪಾಲರ ಶೋಕಾಸ್‌ ನೋಟಿಸ್‌ಗೆ ಉತ್ತರಿಸಿದ್ದಾರೆ. ಹಲವು ರಾಜಕೀಯ ನಾಯಕರ ವಿರುದ್ಧ ಪೂರ್ವಾನುಮತಿ ಕೋರಿರುವ ಅರ್ಜಿಗಳು ಹಾಗೆ ಉಳಿದಿದ್ದು, ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವಾದಿಸಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಿತು.

Also Read
ರಾಜ್ಯಪಾಲರಿಂದ ಅಭಿಯೋಜನಾ ಮಂಜೂರಾತಿ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಸಿಎಂ; ಮಧ್ಯಾಹ್ನ 2.30ಕ್ಕೆ ವಿಚಾರಣೆ

“ರಾಜ್ಯಪಾಲರ ಕಚೇರಿಯ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ರಾಜ್ಯಪಾಲರ ಮುಂದೆ ಅಭಿಯೋಜನಾ ಮಂಜೂರಾತಿ ಕೋರಿರುವ ಯಾವುದೇ ಅರ್ಜಿ ಬಾಕಿ ಉಳಿದಿಲ್ಲ. ಈ ಸಂಬಂಧ ಎಲ್ಲಾ ದಾಖಲೆಗಳು ಹಾಗೂ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದ ನೋಟಿಂಗ್‌ ಮತ್ತು ಕಡತಗಳನ್ನು ಸಲ್ಲಿಸಲಾಗುವುದು. ಆರೋಪಿತ ಅಪರಾಧಗಳನ್ನು ತನಿಖೆ ನಡೆಸಲು ಅನುಮತಿಸಲಾಗಿದೆ. ಹೀಗಾಗಿ, ರಾಜ್ಯಪಾಲರ ಆದೇಶಕ್ಕೆ ತಡೆ ನೀಡಬಾರದು ಎಂದು ಕೋರಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿತು.

ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ “ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ರಾಜ್ಯಪಾಲರ ಅಭಿಯೋಜನಾ ಮಂಜೂರಾತಿಗೆ ನಿಷೇಧ ಅಥವಾ ಪ್ರತಿಬಂಧಕಾದೇಶ ಮಾಡಬಾರದು ಎಂದಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ, ಟಿ ಜೆ ಅಬ್ರಹಾಂ ಪರವಾಗಿ ವಕೀಲ ರಂಗನಾಥ್‌, ಸ್ನೇಹಮಯಿ ಕೃಷ್ಣ ಪರವಾಗಿ ವಕೀಲ ವಸಂತ್‌ ಕುಮಾರ್‌ ಇದ್ದರು ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಆ.29ರಂದು ನಡೆಸಲಿದೆ. ಪ್ರತಿವಾದಿಗಳು ವಾದವನ್ನು ಅಂದು ನ್ಯಾಯಾಲಯವು ಆಲಿಸಲಿದೆ.

Also Read
[ಮುಡಾ ಪ್ರಕರಣ] ರಾಜ್ಯಪಾಲರಿಂದ ಅಭಿಯೋಜನಾ ಮಂಜೂರಾತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಾದಗಳೇನು?

ವಿಶೇಷ ನ್ಯಾಯಾಲಯದ ವಿಚಾರಣೆ ಮುಂದೂಡಿಕೆ

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮುಡಾ ಪ್ರಕರಣದ ವಿಚಾರಣೆ ಮುಂದೂಡಬೇಕು ಮತ್ತು ಆತುರದ ನಿರ್ಧಾರ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಆದೇಶ ಮಾಡಿರುವುದರಿಂದ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ದೂರನ್ನು ವಿಚಾರಣೆಗೆ ಪರಿಗಣಿಸಬೇಕೆ ಅಥವಾ ಬೇಡವೇ ಎಂಬ ವಿಚಾರದ ಕುರಿತು ಕಾಯ್ದಿರಿಸಿರುವ ಆದೇಶ ಮತ್ತು ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರು ಅಭಿಯೋಜನಾ ಮಂಜೂರಾತಿ ಕುರಿತು ವಾದಿಸಲು ಕೋರಿದ್ದ ವಿಚಾರಣೆಯೂ (ಆಗಸ್ಟ್‌ 21) ಮುಂದೂಡಲ್ಪಡಲಿದೆ.

Kannada Bar & Bench
kannada.barandbench.com