ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ: 13ನೇ ಆರೋಪಿ ಸುಜಿತ್‌ಗೆ ಜಾಮೀನು ನಿರಾಕರಿಸಿದ ಬೆಂಗಳೂರಿನ ವಿಶೇಷ ನ್ಯಾಯಾಲಯ

ರಾಜ್ಯ ಸರ್ಕಾರವು ವಿಶೇಷ ನ್ಯಾಯಾಲಯ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಜಾಮೀನು ನೀಡಲು ವಿಚಾರಣೆ ಮುಕ್ತಾಯಗೊಳ್ಳುವುದು ವಿಳಂಬವಾಗಲಿದೆ ಎಂಬ ವಾದವನ್ನು ಒಪ್ಪಲಾಗದು ಎಂದ ನ್ಯಾಯಾಲಯ.
Gauri Lankesh
Gauri Lankesheastcoast daily

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿನ 13ನೇ ಆರೋಪಿಯಾಗಿರುವ ಸುಜಿತ್‌ ಕುಮಾರ್‌ ಅಲಿಯಾಸ್‌ ಸುಜಿತ್‌ ಎಸ್‌ ಆರ್‌ ಅಲಿಯಾಸ್‌ ಸಂಜಯ್‌ ಅಲಿಯಾಸ್‌ ಮಂಜುನಾಥ್‌ಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ಈಚೆಗೆ ಜಾಮೀನು ನಿರಾಕರಿಸಿದೆ.

ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ಮೋಹನ್‌ ನಾಯಕ್‌ಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ಮಂಜೂರು ಮಾಡಿರುವುದರ ಆಧಾರದಲ್ಲಿ ಜಾಮೀನು ಕೋರಿ ಶಿವಮೊಗ್ಗದ ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿಯ ಸುಜಿತ್‌ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಮುರಳೀಧರ್‌ ಪೈ ಬಿ. ಅವರು ತಿರಸ್ಕರಿಸಿದ್ದಾರೆ.

Muralidhara Pai B.,
Prl City Civil and Sessions Judge
Muralidhara Pai B., Prl City Civil and Sessions Judge

“ಆರೋಪಿ ಸುಜಿತ್‌ ಅವರು 2010ರಿಂದಲೂ ಸಂಘಟಿತ ಅಪರಾಧ ಸಂಘದ ಸದಸ್ಯನಾಗಿದ್ದು, ಇತರೆ ಆರೋಪಿಗಳಾದ ಅಮೋಲ್‌ ಕಾಳೆ, ಅಮಿತ್‌ ದಿಗ್ವೇಕರ್‌ ಅಲಿಯಾಸ್‌ ಅಮಿತ್‌ ಅಲಿಯಾಸ್‌ ಪ್ರದೀಪ್‌ ಮಹಾಜನ್‌, ಭರತ್‌ ಕುರಾನೆ ಅಲಿಯಾಸ್‌ ಅಂಕಲ್‌ ಅಲಿಯಾಸ್‌ ಟೊಮಾಟರ್‌, ಸುಧನ್ವ ಗೊಂಡಲೇಕರ್‌ ಅಲಿಯಾಸ್‌ ಪಾಂಡೇಜಿ ಅಲಿಯಾಸ್‌ ಒಂಟೆ ಅಲಿಯಾಸ್‌ ಗುಜ್ಜರ್‌ ಅಲಿಯಾಸ್‌ ಮಹೇಶ್‌ ಪಾಟೀಲ್‌, ಶರದ್‌ ಅಲಿಯಾಸ್‌ ಶರದ್‌ ಬಾಹುಸಾಯಿಬ್‌ ಕಲಸ್ಕಾರ್‌ ಅಲಿಯಾಸ್‌ ಚೋಟು, ವಾಸುದೇವ್‌ ಭಗ್ವಾನ್‌ ಸೂರ್ಯವಂಶಿ ಅಲಿಯಾಸ್‌ ವಾಸು ಅಲಿಯಾಸ್‌ ಮೆಕಾನಿಕ್‌, ಮನೋಹರ್‌ ದುಂಡೀಪ್ಪ ಯಾದವೆ, ವಿಕಾಸ್‌ ಪಾಟೀಲ್‌ ಮತ್ತು ರಿಷಿಕೇಶ್‌ ದೇವಡೇಕರ್‌ ಅಲಿಯಾಸ್‌ ಮುರುಳಿ ಅಲಿಯಾಸ್‌ ಶಿವ ಅವರೊಂದಿಗೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಪ್ರಕರಣದ ಕಿಂಗ್‌ಪಿನ್‌ ಎನ್ನಲಾದ ವೀರೇಂದ್ರ ಥಾವಡೆ ಮೂಲಕ ಸಂಪರ್ಕದಲ್ಲಿದ್ದನೆ. 17ನೇ ಆರೋಪಿ ಹೊಟ್ಟೆ ನವೀನ ಅಲಿಯಾಸ್‌ ನವೀನ್‌ ಕುಮಾರ್‌ನಿಂದ ಗೌರಿ ಲಂಕೇಶ್‌ ಸೇರಿದಂತೆ ಪ್ರಮುಖರನ್ನು ಕೊಲೆ ಮಾಡಲು ಪಿತೂರಿಯ ಭಾಗವಾಗಿ ಲೈವ್‌ ಕಾಟ್ರಿಜ್‌ಗಳನ್ನು ಸಂಗ್ರಹಿಸಿದ್ದ. 20.08.2017ರಂದು ವಿಜಯನಗರದಲ್ಲಿ ನವೀನ್‌ ಕುಮಾರ್‌ನನ್ನು ಭೇಟಿ ಮಾಡಿ ಗೌರಿ ಕೊಲೆಗೆ ಸಹಕಾರ ಕೋರಿದ್ದನು. ಹೀಗಾಗಿ, ಆತನ ವಿರುದ್ಧ ಮೇಲ್ನೋಟಕ್ಕೆ ದಾಖಲೆಗಳು ಇವೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಇದಲ್ಲದೇ, “ಸುಜಿತ್‌ ವಿರುದ್ಧ ಉಪ್ಪಾರಪೇಟೆ, ಮಹಾರಾಷ್ಟ್ರದ ಕಾಳ ಚೌಕಿ, ದಾವಣಗೆರೆ ಲೇಔಟ್‌, ಉಡುಪಿ ನಗರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಇಲ್ಲಿನ ಕೆಲವು ಪ್ರಕರಣಗಳಲ್ಲಿ ಆತ ಸ್ಫೋಟಕಗಳ ಕಾಯಿದೆ ಮತ್ತು ಶಸ್ತ್ರಾಸ್ತ್ರ ಕಾಯಿದೆ ಅಡಿ ಆರೋಪಿಯಾಗಿದ್ದಾನೆ. ಹೀಗಾಗಿ, ಆರೋಪಿಯು ಹೈಕೋರ್ಟ್‌ನಿಂದ ಜಾಮೀನು ಪಡೆದಿರುವ ಮೋಹನ್‌ ನಾಯಕ್‌ ಪ್ರಕರಣಕ್ಕಿಂತ ಸುಜಿತ್‌ ಪ್ರಕರಣ ಭಿನ್ನವಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

Also Read
[ಗೌರಿ ಹತ್ಯೆ ಪ್ರಕರಣ] ಮೋಹನ್‌ ನಾಯಕ್‌ಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು; ಪ್ರಕರಣದಲ್ಲಿ ಜಾಮೀನು ಪಡೆದ ಮೊದಲ ಆರೋಪಿ

“04.07.2022ರಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿದ್ದು, ಇಲ್ಲಿಯವರೆಗೆ 527 ಸಾಕ್ಷಿಗಳ ಪೈಕಿ ಪ್ರಾಸಿಕ್ಯೂಷನ್‌ 119 ಸಾಕ್ಷಿಗಳ ವಿಚಾರಣೆ ನಡೆಸಿದೆ. ಹಾಲಿ ಪ್ರಕರಣವನ್ನು ತುರ್ತಾಗಿ ನಿರ್ಧರಿಸುವ ಸಂಬಂಧ ರಾಜ್ಯ ಸರ್ಕಾರವು ವಿಶೇಷ ನ್ಯಾಯಾಲಯ ಆರಂಭಿಸುವ ಪ್ರಕ್ರಿಯೆಯಲ್ಲಿದೆ. ಹೀಗಾಗಿ, ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ವಿಚಾರಣೆ ಮುಕ್ತಾಯಗೊಳ್ಳುವುದು ವಿಳಂಬವಾಗಲಿದೆ ಎನ್ನುವ ವಾದವನ್ನು ಜಾಮೀನು ನೀಡಲು ಆಧಾರವಾಗಿ ಒಪ್ಪಲಾಗದು” ಎಂದು ನ್ಯಾಯಾಲಯ ಹೇಳಿದೆ.

“ಗಂಭೀರ ಕಾಯಿಲೆಯಿಂದ ಬಳಲುತ್ತಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಅಥವಾ ಜೈಲಿನಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆರೋಪಿ ಸಲ್ಲಿಸಿಲ್ಲ. ಹೀಗಾಗಿ, ಯಾವುದೇ ಸಕಾರಣ ಇಲ್ಲದಿರುವುದರಿಂದ ಸುಜಿತ್‌ ಅರ್ಜಿಯನ್ನು ವಜಾ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Attachment
PDF
Sujith Kumar Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com