ಆರ್‌ಎಸ್‌ಎಸ್‌, ಬಜರಂಗದಳದವರಿಂದ ಅಪರಾಧ ಕೃತ್ಯ ಹೇಳಿಕೆ: ಸಿಎಂ ಸಿದ್ದರಾಮಯ್ಯ ವಿರುದ್ಧದ ಖಾಸಗಿ ದೂರು ವಜಾ

ಸಿದ್ದರಾಮಯ್ಯ ಅವರು 2025ರ ಮಾರ್ಚ್ 17ರಂದು ವಿಧಾನಸೌಧದಲ್ಲಿ ಮಾತನಾಡುತ್ತಾ “ಅಪರಾಧಗಳನ್ನು ಮಾಡತಕ್ಕಂಥವರೇ ನೀವು, ಜಾಸ್ತಿಯಾಗಿ ಆರ್‌ಎಸ್‌ಎಸ್‌ನವರು, ಬಜರಂಗದಳದವರು” ಎಂಬ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿತ್ತು.
Siddaramaia̧h RSS, Bajarang Dal
Siddaramaia̧h RSS, Bajarang Dal
Published on

ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧಗಳಿಗೆ ಆರ್‌ಎಸ್‌ಎಸ್ ಹಾಗೂ ಬಜರಂಗದಳದವರೇ ಕಾರಣ ಎಂಬರ್ಥದ ಹೇಳಿಕೆ ನೀಡಿದ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ಖಾಸಗಿ ದೂರನ್ನು ಬೆಂಗಳೂರಿನ ಹೆಚ್ಚುವರಿ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಈಚೆಗೆ ವಜಾಗೊಳಿಸಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೂ ಆಗಿರುವ ಬೆಂಗಳೂರಿನ ವಕೀಲ ಎನ್ ಕಿರಣ್ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನಗರದ 42ನೇ ಹೆಚ್ಚುವರಿ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ ಅವರು ಸೆಪ್ಟೆಂಬರ್ 17ರಂದು ದೂರು ವಜಾಗೊಳಿಸಿ ಆದೇಶಿಸಿದ್ದಾರೆ.

K N Shivakumar, Magistrate MP/MLA Special court
K N Shivakumar, Magistrate MP/MLA Special court

ಮಾನನಷ್ಟ ಅಪರಾಧ ಪ್ರಕರಣಗಳಲ್ಲಿ ದೂರುದಾರರ ಮಾನಹಾನಿ ಮಾಡುವ ಆರೋಪಿಯ ಉದ್ದೇಶವೇ ಪ್ರಮುಖ ಅಂಶವಾಗಿರುತ್ತದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಹಾಗೂ ವಿವಿಧ ಹೈಕೋರ್ಟ್‌ಗಳು ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ಪ್ರಕರಣದಲ್ಲಿ ಆರೋಪಿತರು (ಸಿದ್ದರಾಮಯ್ಯ) ನೀಡಿದ್ದಾರೆನ್ನಲಾದ ಹೇಳಿಕೆಗಳು, ದೂರಿನಲ್ಲಿ ಮಾಡಲಾಗಿರುವ ಆರೋಪಗಳು ಹಾಗೂ ಮಾಧ್ಯಮ ವರದಿಗಳನ್ನು ಪರಿಶೀಲಿಸಿದರೆ, ದೂರುದಾರರು ಆರೋಪಿಸಿರುವಂತೆ ಆರ್‌ಎಸ್‌ಎಸ್ ಸಂಘಟನೆಯ ಘನತೆಗೆ ಹಾನಿ ಮಾಡುವ ಯಾವುದೇ ಉದ್ದೇಶ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಆರೋಪಿತರ ಭಾಷಣ ಅಥವಾ ಹೇಳಿಕೆಗಳು ದೂರುದಾರರ ಮಾನಹಾನಿ ಮಾಡುವ ಉದ್ದೇಶ ಹೊಂದಿರಲಿಲ್ಲ. ಬದಲಿಗೆ, ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಕುರಿತಂತೆ ವಿರೋಧ ಪಕ್ಷದವರ ಆರೋಪಗಳನ್ನು ತಳ್ಳಿಹಾಕುವ ಉದ್ದೇಶದಿಂದ ಹಾಗೂ ಶಾಸಕಾಂಗದ ಕಲಾಪಗಳಲ್ಲಿ ಕಾನೂನು ಜಾರಿ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ವಿಷಯಗಳ ಕುರಿತ ಚರ್ಚೆಯ ಸಂದರ್ಭದಲ್ಲಿ ನೀಡಿರುವ ಹೇಳಿಕೆಯಾಗಿದೆ ಎಂಬ ತೀರ್ಮಾನಕ್ಕೆ ಬರಬಹುದಾಗಿದೆ. ಹೀಗಿರುವಾಗ, ದೂರಿನಲ್ಲಿ ಮಾಡಲಾಗಿರುವ ಆರೋಪಗಳು ಹಾಗೂ ಆ ಸಂಬಂಧ ಒದಗಿಸಲಾಗಿರುವ ದಾಖಲೆಗಳು ಆರೋಪಿತರ ವಿರುದ್ಧದ ಅಪರಾಧಗಳನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಖಾಸಗಿ ದೂರು ವಜಾಗೊಳಿಸಿ ಆದೇಶಿಸಿದೆ.

ದೂರುದಾರರ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ರ ಮಾರ್ಚ್ 17ರಂದು ವಿಧಾನಸೌಧದಲ್ಲಿ ಮಾತನಾಡುವಾಗ, ರಾಜ್ಯದಲ್ಲಿ ಅಪರಾಧ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ತಮ್ಮ ಆಡಳಿತವನ್ನು ಹೊಗಳಿಕೊಳ್ಳುತ್ತ, “ಅಪರಾಧಗಳನ್ನು ಮಾಡತಕ್ಕಂಥವರೇ ನೀವು, ಜಾಸ್ತಿಯಾಗಿ ಆರ್‌ಎಸ್‌ಎಸ್‌ನವರು, ಬಜರಂಗದಳದವರು” ಎಂಬ ಹೇಳಿಕೆ ನೀಡಿದ್ದಾರೆ. ಇದು ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ‌ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದ್ದು ಮಾರ್ಚ್ 18ರಂದು ಯೂಟ್ಯೂಬ್ ಚಾನಲ್ ಒಂದರಲ್ಲಿ ಅದನ್ನು ವೀಕ್ಷಿಸಿದ್ದೇನೆ. ಆರ್‌ಎಸ್‌ಎಸ್ ಹಾಗೂ ಬಜರಂಗದಳ ವಿರುದ್ಧ ನೀಡಿರುವ ಹೇಳಿಕೆಗಳು ನನ್ನ ಭಾವನೆಗಳಿಗೆ ಧಕ್ಕೆ ತಂದಿರುವುದು ಮಾತ್ರವಲ್ಲದೆ, ಆರ್‌ಎಸ್‌ಎಸ್ ಅನ್ನು ಅಪರಾಧ ಸಂಘಟನೆ ಎಂದೂ ಕಾರ್ಯಕರ್ತರನ್ನು ಅಪರಾಧಿಗಳೆಂದೂ ಬಿಂಬಿಸಲಾಗಿದೆ ಎಂದು ದೂರುದಾರ ಕಿರಣ್ ಆರೋಪಿಸಿದ್ದರು.

ಮುಖ್ಯಮಂತ್ರಿಗಳು ಅನವಶ್ಯಕವಾಗಿ ಆರ್‌ಎಸ್‌ಎಸ್ ಹೆಸರನ್ನು ಎಳೆದು ತಂದಿದ್ದಾರೆ. ಅವರ ಹೇಳಿಕೆಗಳು ಅವಹೇಳನಕಾರಿ, ನಿಂದನಾತ್ಮಕ ಹಾಗೂ ಮಾನಹಾನಿಕರವಷ್ಟೇ ಅಲ್ಲ. ಆರ್‌ಎಸ್ಎಸ್‌ನ ಘನತೆಯ ಕಗ್ಗೊಲೆಯಾಗಿದೆ. ಆರ್‌ಎಸ್‌ಎಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದರಿಂದ ಅದರ ಕಾರ್ಯಕರ್ತನಾದ ನನ್ನ ಧಾರ್ಮಿಕ ಭಾವನೆಗಳಿಗೆ ಹಾಗೂ ಮನಸ್ಸಿಗೆ ನೋವುಂಟಾಗಿದೆ. ಆದ್ದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 299 (ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಮೂಲಕ ಧಾರ್ಮಿಕ ಭಾವನೆ ಕೆರಳಿಸುವುದು) 352 (ಶಾಂತಿ ಭಂಗ ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ) 356(2) (ಮಾನಹಾನಿ) ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವಂತೆ ಕೋರಿ ಖಾಸಗಿ ದೂರು ದಾಖಲಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ವಕೀಲ ಶತಭಿಷ್‌ ಶಿವಣ್ಣ ವಾದಿಸಿದ್ದರು.

Attachment
PDF
N Kiran Vs Siddaramaiah
Preview
Kannada Bar & Bench
kannada.barandbench.com