[ಬಿಎಸ್‌ವೈ ಡಿನೋಟಿಫಿಕೇಷನ್‌ ಪ್ರಕರಣ] ತನಿಖಾಧಿಕಾರಿಯ 'ಕಾಟಾಚಾರದ' ತನಿಖೆಯ ಬಗ್ಗೆ ನ್ಯಾಯಾಲಯ ಹೇಳಿದ್ದೇನು?

ತನಿಖಾಧಿಕಾರಿಯು ವಾಸ್ತವ ಸಂಗತಿಗಳನ್ನು ನಿರ್ಲಕ್ಷಿಸಿದ್ದಾರೆ ಹಾಗೂ ಗಂಭೀರರಹಿತ ವರ್ತನೆ ತೋರಿದ್ದಾರೆ. ತನಿಖಾಧಿಕಾರಿಯು ಕೈಗೊಂಡಿರುವ ಸಂಪೂರ್ಣ ತನಿಖೆಯು ಕಾಟಾಚಾರದಿಂದ ಕೂಡಿದ್ದು ವಿವೇಕಯುತ ವ್ಯಕ್ತಿಯ ನಡೆಯಿಂದ ಹೊರತಾಗಿದೆ ಎಂದ ನ್ಯಾಯಾಲಯ.
B.S. Yediyurappa
B.S. Yediyurappa
Published on

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಡಿನೋಟಿಫಿಕೇಷನ್ ಭ್ರಷ್ಟಾಚಾರ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ವರದಿಯನ್ನು ತಿರಸ್ಕರಿಸಿ ಮರು ತನಿಖೆಗೆ ಆದೇಶಿಸಿತ್ತು. ಪ್ರಕರಣದ ತನಿಖಾಧಿಕಾರಿಯು ಕೈಗೊಂಡಿದ್ದ ಅಸಡ್ಡೆಯಿಂದಲೂ, ಅಸಂಗತವಾಗಿಯೂ ಕೂಡಿದ್ದ ತನಿಖೆಯ ಬಗ್ಗೆ ನ್ಯಾಯಾಲಯವು ಏನು ಹೇಳಿತ್ತು ಎನ್ನುವುದು ಇದೀಗ ನ್ಯಾಯಾಲಯದ ಆದೇಶ ಲಭ್ಯವಾಗುವುದರೊಂದಿಗೆ ಹೊರಬಿದ್ದಿದೆ.

ತನಿಖೆಯ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ನ್ಯಾ.ಶ್ರೀಧರ ಗೋಪಾಲಕೃಷ್ಣ ಭಟ್‌ ಅವರಿದ್ದ ನ್ಯಾಯಾಲಯವು ಆದೇಶದಲ್ಲಿ ಹೀಗೆ ಹೇಳಿದೆ:

“ತನಿಖಾಧಿಕಾರಿಯಿಂದ ಕೈಗೊಳ್ಳಲಾದ ತನಿಖೆಯು ಅಸಮರ್ಪಕವೂ, ಅಸಂಪೂರ್ಣವೂ, ದೋಷಪೂರಿತವೂ ಆಗಿದ್ದು ಈ ನ್ಯಾಯಾಲಯದ ವಿಶ್ವಾಸವನ್ನು ಉದ್ದೀಪಿಸಿಲ್ಲ.

ತನಿಖೆಯನ್ನು ಗಮನಿಸಿದರೆ, “ಅನೇಕ ಅಸಂಗತ ಮತ್ತು ಸಂಬಂಧವಿಲ್ಲದ ವಿಷಯಗಳನ್ನು ತನಿಖಾಧಿಕಾರಿಯವರು ಪರಿಗಣಿಸಿದ್ದಾರೆ. ಅಲ್ಲದೆ, ತನಿಖಾಧಿಕಾರಿಯವರು ಕಲೆ ಹಾಕಿರುವ ಬೃಹತ್‌ ದಾಖಲೆಗಳು ಸಹ ಹೊಂದಾಣಿಕೆಯಿಲ್ಲದೆ ಒಂದಕ್ಕೊಂದು ಸಂಬಂಧವಿಲ್ಲದಂತಿವೆ.”

ಲೋಕಾಯುಕ್ತ ಪೊಲೀಸ್‌ನ ಹೆಚ್ಚುವರಿ ಡೈರೆಕ್ಟರ್‌ ಜನರಲ್‌ ಅವರು ವರದಿಯನ್ನು ಸಲ್ಲಿಸುವ ಮುನ್ನ ಸೂಕ್ತ ರೀತಿಯಲ್ಲಿ ಪರಿಗಣಿಸಿಲ್ಲ ಎಂದಿರುವ ನ್ಯಾಯಾಲಯವು ಹೀಗೆ ಹೇಳಿದೆ:

“ಇದಾಗಲೇ ಹೇಳಲಾಗಿರುವಂತೆ ತನಿಖಾಧಿಕಾರಿಯು ಸಂಗ್ರಹಿಸಿರುವ ದಾಖಲೆಗಳು ತನಿಖೆ ವೇಳೆ ತನಿಖಾಧಿಕಾರಿಯು ವಾಸ್ತವ ಸಂಗತಿಗಳನ್ನು ನಿರ್ಲಕ್ಷಿಸಿದ್ದಾರೆ ಹಾಗೂ ಗಂಭೀರರಹಿತ ವರ್ತನೆ ತೋರಿದ್ದಾರೆ ಎನ್ನುವುದನ್ನು ತಿಳಿಸುತ್ತದೆ. ತನಿಖಾಧಿಕಾರಿಯು ಕೈಗೊಂಡಿರುವ ಸಂಪೂರ್ಣ ತನಿಖೆಯು ಕಾಟಾಚಾರದಿಂದ ಕೂಡಿದ್ದು ವಿವೇಕಯುತ ವ್ಯಕ್ತಿಯ ನಡೆಯಿಂದ ಹೊರತಾಗಿದೆ.”

ಅಂತಿಮವಾಗಿ ನ್ಯಾಯಾಲಯವು ತನಿಖಾಧಿಕಾರಿಯು ಈ ಕೆಳಗಿನ ಸಂಗತಿಗಳನ್ನು ತನಿಖೆಯ ವೇಳೆ ಪರಿಗಣಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ:

ಅ) ಯಡಿಯೂರಪ್ಪ ಅವರು ಭೂಮಿಯನ್ನು ಡಿನೋಟಿಫೈ ಮಾಡುವ ವೇಳೆ ಸಾರ್ವಜನಿಕ ಸೇವಕರಾಗಿ ತಮ್ಮ ಅಧಿಕೃತ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಯೇ?

ಆ) ನಿರ್ದಿಷ್ಟ ಭೂಪ್ರದೇಶಗಳನ್ನು ಡಿನೋಟಿಫೈ ಮಾಡುವ ಮೂಲಕ ಭ್ರಷ್ಟ ಅಥವಾ ಅಕ್ರಮ ಮಾರ್ಗದಲ್ಲಿ ಯಡಿಯೂರಪ್ಪನವರು ತಮಗಾಗಲಿ ಅಥವಾ ಮತ್ತಿನಾವುದೇ ವ್ಯಕ್ತಿಗಾಗಲಿ ಆರ್ಥಿಕ ಲಾಭವನ್ನಾಗಲಿ, ಮೌಲಿಕ ವಸ್ತುಗಳನ್ನಾಗಲಿ ಪಡೆದಿದ್ದಾರೆಯೇ?

ಇ) ಜೂನ್‌ 6, 2006ರಂದು ಹೊರಡಿಸಲಾದ ಅಧಿಸೂಚನೆಯು ಯಾವುದೇ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿದೆಯೇ ಅಥವಾ ಇಲ್ಲವೇ?

ಇದೇ ವೇಳೆ, ನ್ಯಾಯಾಲಯವು ತನಿಖಾಧಿಕಾರಿಯು ‘ಬಿ’ ವರದಿ ಸಲ್ಲಿಸಿದಾಕ್ಷಣ ಅದನ್ನೇ ಒಪ್ಪಬೇಕೆಂದೇನೂ ಇಲ್ಲ. ತನಿಖೆ ಮುಗಿದ ನಂತರವೂ ಸಹ ಸೆಕ್ಷನ್‌ 173(2) ಅಡಿ ತನಿಖಾಧಿಕಾರಿಯು ಮತ್ತಷ್ಟು ತನಿಖೆ ನಡೆಸುವ ಅಧಿಕಾರ ಹೊಂದಿರುತ್ತಾರೆ ಎಂದಿದೆ.

ಪ್ರಕರಣದ ಎಲ್ಲ ಸಂಗತಿಗಳನ್ನು ಸ್ಥೂಲವಾಗಿ ಪರಿಗಣಿಸಿದ ನಂತರ ನ್ಯಾಯಾಧೀಶರು ‘ಬಿ’ ವರದಿಯು ಪುರಸ್ಕಾರ ಯೋಗ್ಯವಲ್ಲ ಎಂದು ಪರಿಗಣಿಸಿದರು. ಸತ್ಯವನ್ನು ಹೊರಗೆಡಹಲು ಮತ್ತು ನ್ಯಾಯವನ್ನು ಎತ್ತಿಹಿಡಿಯಲು ಹೆಚ್ಚಿನ ತನಿಖೆಯ ಅಗತ್ಯವಿರುವುದಾಗಿ ಅಭಿಪ್ರಾಯಪಟ್ಟರು.

ಪ್ರಕರಣದ ಸಂಬಂಧ ಆಗಸ್ಟ್‌ 21ಕ್ಕೆ ಅಂತಿಮ ವರದಿ ಸಲ್ಲಿಸಬೇಕಿದೆ.

Kannada Bar & Bench
kannada.barandbench.com