ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್) ರಾಸಾಯನಿಕ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ₹40 ಲಕ್ಷ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬಂಧಿತರಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಸೇರಿದಂತೆ ಐವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿರುವ ಪ್ರಶಾಂತ್ ಅವರು ಬೆಂಗಳೂರು ಜಲ ಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿದ್ದು, ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಇವರ ಜೊತೆಗೆ ಅವರ ಸಹಾಯಕ ಸುರೇಂದ್ರ, ಲಂಚ ನೀಡುವ ಆರೋಪದ ಮೇಲೆ ಸಿದ್ದೇಶ್, ನಿಕೋಲಸ್ ಮತ್ತು ಗಂಗಾಧರ್ ಎಂಬರನ್ನು ವಶಕ್ಕೆ ಪಡೆಯಲಾಗಿತ್ತು. ಇವೆರಲ್ಲರನ್ನೂ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಜಯಂತಕುಮಾರ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಐವರೂ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದಲ್ಲಿ ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರ ಪ್ರಶಾಂತ್ ಮಾಡಾಳ್ ಅವರ ವಿರುದ್ಧ ಭ್ರಷ್ಟಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 7(ಎ), 7ಬಿ ಅಡಿ ಪ್ರಕರಣ ದಾಖಲಿಸಲಾಗಿದ್ದು, ಶಾಸಕ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿ, ಪುತ್ರ ಪ್ರಶಾಂತ್ ಅವರನ್ನು ಎರಡನೇ ಆರೋಪಿಯನ್ನಾಗಿಸಲಾಗಿದೆ.
“ಶಾಸಕ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ. ಉಳಿದ ನಾಲ್ವರು ಆರೋಪಿಗಳ ವಿರುದ್ಧ ಪಿಸಿ ಕಾಯಿದೆ ಸೆಕ್ಷನ್ 8ರ ಅಡಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ಮತ್ತು ಚನ್ನಗಿರಿಯ ವಿರೂಪಾಕ್ಷಪ್ಪರ ಅವರ ನಿವಾಸದ ಮೇಲಿನ ದಾಳಿಯಲ್ಲಿ ಒಟ್ಟು ₹8.3 ಕೋಟಿ ಹಣ ಪತ್ತೆಯಾಗಿದ್ದು, ಇದರಲ್ಲಿ ₹40 ಲಕ್ಷ ಲಂಚದ ಹಣವೂ ಸೇರಿದೆ” ಎಂದು ಲೋಕಾಯುಕ್ತ ಕಚೇರಿ ಮೂಲಗಳು “ಬಾರ್ ಅಂಡ್ ಬೆಂಚ್”ಗೆ ತಿಳಿಸಿವೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಶ್ರೇಯಸ್ ಕಶ್ಯಪ್ ಅವರು ಕೆ ಆರ್ ರಸ್ತೆಯಲ್ಲಿ ಕೆಮಿಕಲ್ಸ್ ಕಾರ್ಪೊರೇಶನ್ ಎಂಬ ಪಾಲುದಾರಿಕೆ ಕಂಪೆನಿ ಹೊಂದಿದ್ದು, ಅವರ ಪರಿಚಯಸ್ಥರಾದ ಟಿ ಎ ಎಸ್ ಮೂರ್ತಿ ಅವರು ಚಾಮರಾಜಪೇಟೆಯಲ್ಲಿ ಡೆಲಿಸಿಯಾ ಕೆಮಿಕಲ್ಸ್ ಎಂಬ ಪಾಲುದಾರಿಕೆ ಕಂಪೆನಿ ಹೊಂದಿದ್ದಾರೆ. ಈ ಕಂಪೆನಿಗಳು ಕೆಎಸ್‌ಡಿಎಲ್‌ಗೆ ರಾಸಾಯನಿಕ ಆಯಿಲ್ ಪೂರೈಸಲು 2023ರ ಜನವರಿಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದವು. ಈ ಸಂಬಂಧ ಕಾರ್ಯಾದೇಶ ಮತ್ತು ಹಣ ಬಿಡುಗಡೆ ಮಾಡಿಸಲು ₹81 ಲಕ್ಷ ಲಂಚ ನೀಡುವಂತೆ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ಅವರು ಬೇಡಿಕೆ ಇಟ್ಟಿದ್ದಾರೆ ಎಂದು ಶ್ರೇಯಸ್ ಕಶ್ಯಪ್ ಬೆಂಗಳೂರಿನ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.
ಕುಮಾರ ಪಾರ್ಕ್‌ನ ಕ್ರೆಸೆಂಟ್ ರಸ್ತೆಯಲ್ಲಿರುವ ಖಾಸಗಿ ಕಚೇರಿಗೆ ಗುರುವಾರ ಸಂಜೆ ಗುತ್ತಿಗೆದಾರ ₹40 ಲಕ್ಷ ಲಂಚದ ಹಣ ತಲುಪಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪ್ರಶಾಂತ್ ಸೇರಿ ಐವರನ್ನು ಬಂಧಿಸಿದ್ದರು.