ಲಂಚ ಪ್ರಕರಣ: ಐಎಎಸ್‌ ಅಧಿಕಾರಿ ಮಂಜುನಾಥ್‌ ಜಾಮೀನು ಮನವಿ ವಜಾ ಮಾಡಿದ ವಿಶೇಷ ನ್ಯಾಯಾಲಯ

ಜುಲೈ 6ರಂದು ಕಾಯ್ದಿರಿಸಿದ್ದ ತೀರ್ಪನ್ನು 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಲಕ್ಷ್ಮಿನಾರಾಯಣ್‌ ಭಟ್‌ ಅವರು ಪ್ರಕಟಿಸಿದರು.
Arrested IAS Officer J Manjunath
Arrested IAS Officer J Manjunath
Published on

ಲಂಚ ಆರೋಪದಲ್ಲಿ ಬಂಧಿತರಾಗಿರುವ ಅಮಾನತುಗೊಂಡಿರುವ ಹಿರಿಯ ಐಎಎಸ್‌ ಅಧಿಕಾರಿ, ಬೆಂಗಳೂರು ನಗರದ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಜೆ ಮಂಜುನಾಥ್‌ ಅವರ ಜಾಮೀನು ಮನವಿಯನ್ನು ಸೋಮವಾರ ವಿಶೇಷ ನ್ಯಾಯಾಲಯವು ತಿರಸ್ಕರಿಸಿದೆ.

ಮಂಜುನಾಥ್‌ ಅವರ ಜಾಮೀನು ಮನವಿ ವಿಚಾರಣೆ ನಡೆಸಿ ಜುಲೈ 6ರಂದು ಕಾಯ್ದಿರಿಸಿದ್ದ ತೀರ್ಪನ್ನು 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಲಕ್ಷ್ಮಿನಾರಾಯಣ್‌ ಭಟ್‌ ಅವರು ಪ್ರಕಟಿಸಿದರು.

ಬೆಂಗಳೂರಿನ ಯಶವಂತಪುರದಲ್ಲಿ ಎಸಿಬಿ ಡಿವೈಎಸ್‌ಪಿ ಕೆ ರವಿಶಂಕರ್‌ ಅವರ ತಂಡವು ಜುಲೈ 4ರ ಮಧ್ಯಾಹ್ನ ಮಂಜುನಾಥ್‌ ಅವರನ್ನು ಬಂಧಿಸಿತ್ತು. ಕೆಲ ದಿನಗಳ ಹಿಂದಷ್ಟೇ ಮಂಜುನಾಥ್‌ ಅವರನ್ನು ಬೆಂಗಳೂರು ಜಿಲ್ಲಾಧಿಕಾರಿ ಹುದ್ದೆಯಿಂದ ಐಸಿಡಿಎಸ್‌ ನಿರ್ದೇಶಕರ ಹುದ್ದೆಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.

ಪಿ ನಾರಾಯಣ ಸ್ವಾಮಿ ಅವರನ್ನು ಹಿರಿಯ ವಕೀಲ ಎಚ್‌ ಎಸ್‌ ಚಂದ್ರಮೌಳಿ ಪ್ರತಿನಿಧಿಸಿದ್ದರು. ಅರ್ಜಿದಾರರನ್ನು ವಕೀಲರಾದ ಪ್ರತೀಕ್‌ ಚಂದ್ರಮೌಳಿ ಮತ್ತು ಕೀರ್ತನಾ ನಾಗರಾಜ್‌ ಅವರು ಪ್ರತಿನಿಧಿಸಿದ್ದರು.

ಪ್ರಕರಣದ ಹಿನ್ನೆಲೆ: ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಅಜಂ ಪಾಷಾ ಅವರಿಂದ ₹5 ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್‌ ಅವರ ಸಹಾಯಕರಾಗಿದ್ದ ಉಪ ತಹಶೀಲ್ದಾರ್‌ ಮಹೇಶ್‌ ಮತ್ತು ಮೇಲ್ಮನವಿ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರ ಅವರನ್ನು ಮೇ 21ರಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿತ್ತು. ಈ ಪ್ರಕರಣದಲ್ಲಿ ಮಂಜುನಾಥ್‌ ಅವರು ಮೂರನೇ ಆರೋಪಿಯಾಗಿದ್ದಾರೆ.

Also Read
ಲಂಚ ಪ್ರಕರಣ: ಐಎಎಸ್‌ ಅಧಿಕಾರಿ ಮಂಜುನಾಥ್‌ ಬಂಧನ

ಭೂವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ ಅವರು ವಿಚಾರಣೆ ನಡೆಸಿ 2022ರ ಮಾರ್ಚ್‌ 30ರಂದು ತೀರ್ಪು ಕಾಯ್ದಿರಿಸಿದ್ದರು. ತಮ್ಮ ಪರವಾಗಿ ಆದೇಶ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಹಾಗೂ ಒಂದೂವರೆ ತಿಂಗಳಿಂದ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ದೂರುದಾರ ಅಜಂ ಪಾಷಾ ಅವರು ಮೇ 18ರಂದು ಜಿಲ್ಲಾಧಿಕಾರಿ ಮಂಜುನಾಥ್‌ ಅವರನ್ನು ಭೇಟಿ ಮಾಡಿದ್ದರು. ಅಂದು ಮಂಜುನಾಥ್‌ ಅವರು ಬೈರೇಶ್‌ ಮತ್ತು ಅವರ ಸಹೋದರ ಕೃಷ್ಣಪ್ಪ ಅವರ ಹೆಸರನ್ನು ಉಲ್ಲೇಖಿಸಿದ್ದರು. ಇನ್ನೊಮ್ಮೆ, ಉಪ ತಹಶೀಲ್ದಾರ್‌ ಮಹೇಶ್‌ ಅವರ ಜೊತೆ ಮಂಜುನಾಥ್‌ ಅವರನ್ನು ಅಜಂ ಪಾಷಾ ಭೇಟಿ ಮಾಡಿದ್ದು, ಆಗ ಮಂಜುನಾಥ್‌ ಅವರು ತಮ್ಮ ಸಹಾಯಕರಾದ ಮಹೇಶ್‌ ಅವರನ್ನು ಭೇಟಿ ಮಾಡಿ, ನಾಳೆ ಬಂದು ತನ್ನನ್ನು ನೋಡುವಂತೆ ಹೇಳಿ ಅಲ್ಲಿಂದ ಹೊರಟಿದ್ದರು. ಇದರ ಬೆನ್ನಿಗೇ, ಮೊದಲು ₹15 ಲಕ್ಷ, ಆನಂತರ ₹8 ಲಕ್ಷ ಅಂತಿಮವಾಗಿ ₹5 ಲಕ್ಷ ಲಂಚ ಪಾವತಿಸಲು ಅಜಂ ಪಾಷಾ ಅವರಿಗೆ ಮಹೇಶ್‌ ಅವರು ಸೂಚಿಸಿದ್ದರು. ಇದನ್ನು ಆಧರಿಸಿ ಅಜಂ ಪಾಷಾ ಎಸಿಬಿಗೆ ದೂರು ನೀಡಿದ್ದರು. ಇದಾದ ಬಳಿಕ ಮಹೇಶ್‌ ಅವರನ್ನು ಅಜಂ ಪಾಷಾ ಭೇಟಿ ಮಾಡಿದ್ದು, ಮಹೇಶ್‌ ಅವರು ಪ್ರಕರಣದ ಎರಡನೇ ಆರೋಪಿ ಚೇತನ್‌ಗೆ ಲಂಚದ ಹಣ ನೀಡುವಂತೆ ಸೂಚಿಸಿದ್ದರು. ಈ ವೇಳೆ ಎಸಿಬಿ ದಾಳಿ ನಡೆಸಿತ್ತು.

Kannada Bar & Bench
kannada.barandbench.com