ಅತ್ಯಾಚಾರ ಪ್ರಕರಣ: ಸತತ ಎರಡನೇ ಬಾರಿಗೆ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಮೊದಲ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿದ್ದ ಪ್ರಜ್ವಲ್‌ ಅರ್ಜಿಯನ್ನು ನ್ಯಾಯಾಧೀಶರಾದ ಸಂತೋಷ್‌ ಗಜಾನನ್‌ ಭಟ್‌ ಅವರು ಇಂದು ವಜಾಗೊಳಿಸಿದ್ದಾರೆ. ವಿಸ್ತೃತ ಆದೇಶ ಇನ್ನಷ್ಟೇ ಬರಬೇಕಿದೆ.
Prajwal Revanna
Prajwal Revanna
Published on

ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸತತ ಎರಡನೇ ಬಾರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಮೊದಲ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿದ್ದ ಪ್ರಜ್ವಲ್‌ ಅರ್ಜಿಯನ್ನು ವಿಶೇಷ ನ್ಯಾಯಾಧೀಶರಾದ ಸಂತೋಷ್‌ ಗಜಾನನ್‌ ಭಟ್‌ ಅವರು ಇಂದು ವಜಾಗೊಳಿಸಿದ್ದಾರೆ. ವಿಸ್ತೃತ ಆದೇಶ ಇನ್ನಷ್ಟೇ ಬರಬೇಕಿದೆ.

ಬದಲಾದ ಪರಿಸ್ಥಿತಿಯ ಆಧಾರದಲ್ಲಿ ಜಾಮೀನು ಕೋರುತ್ತಿರುವುದರಿಂದ ಈ ಹಿಂದೆ ಪ್ರಜ್ವಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯವು ಮೊದಲಿಗೆ ವಿಚಾರಣಾಧೀನ ನ್ಯಾಯಾಲಯದಲ್ಲಿನ ಅವಕಾಶ ಮುಗಿದ ಬಳಿಕ ಹೈಕೋರ್ಟ್‌ಗೆ ಬರುವಂತೆ ಹಾಗೂ ಹತ್ತು ದಿನಗಳಲ್ಲಿ ಪ್ರಜ್ವಲ್‌ ಜಾಮೀನು ಅರ್ಜಿ ನಿರ್ಧರಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.

ಪ್ರಜ್ವಲ್‌ ವಿರುದ್ಧ ಒಟ್ಟು ನಾಲ್ಕು ಅತ್ಯಾಚಾರ ಪ್ರಕರಣ ದಾಖಲಾಗಿವೆ. 2024ರ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ ಪ್ರಜ್ವಲ್‌ ಅವರ ಜಾಮೀನು ಮತ್ತು ಮೂರು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಪ್ರಜ್ವಲ್‌ಗೆ ಅಲ್ಲೂ ಪರಿಹಾರ ದೊರೆತಿರಲಿಲ್ಲ. ಇದಕ್ಕೂ ಮುನ್ನ, ವಿಶೇಷ ನ್ಯಾಯಾಲಯವು ಜಾಮೀನು ಮತ್ತು ನಿರೀಕ್ಷಣಾ ಜಾಮೀನುಗಳನ್ನು ವಜಾಗೊಳಿಸಿತ್ತು. ವಕೀಲ ಜಿ ಅರುಣ್‌ ಅವರು ಪ್ರಜ್ವಲ್‌ ಪರವಾಗಿ ವಕಾಲತ್ತು ವಹಿಸಿದ್ದರು.

Also Read
ಅತ್ಯಾಚಾರ ಪ್ರಕರಣ: ಜಾಮೀನು ಕೋರಿ ಎರಡನೇ ಬಾರಿಗೆ ವಿಶೇಷ ನ್ಯಾಯಾಲಯದ ಮೊರೆ ಹೋದ ಪ್ರಜ್ವಲ್‌ ರೇವಣ್ಣ

ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376, 376(2)(ಕೆ), 354, 354(ಎ), 354(ಬಿ), 354 (ಡಿ), 506, 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66(ಈ) ಅಡಿ ಅಪರಾಧಗಳಿಗೆ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಪ್ರಜ್ವಲ್‌ ತಂದೆ ಎಚ್‌ ಡಿ ರೇವಣ್ಣ ಮೊದಲ ಆರೋಪಿಯಾಗಿದ್ದು, ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿದೆ.

Kannada Bar & Bench
kannada.barandbench.com