ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಕ್ರಿಯೆ ದಾಖಲಿಸದಂತೆ ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶನ

“ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಅಲ್ಲಿಗೆ ನಿಲ್ಲಲಿ. (ರೇವಣ್ಣಗೆ) ಸಮನ್ಸ್‌ ಜಾರಿ ಮಾಡುವುದು ಬೇಡ. ನ್ಯಾಯಾಲಯದಲ್ಲಿ ಹಾಜರಾಗುವಂತೆ ಸೂಚಿಸುವುದು ಬೇಡ” ಎಂದು ಕೋರಿದ ಹಿರಿಯ ವಕೀಲ ಸಿ ವಿ ನಾಗೇಶ್‌.
H D Revanna and Karnataka HC
H D Revanna and Karnataka HC
Published on

ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಆರೋಪಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಂದಿನ ವಿಚಾರಣೆವರೆಗೆ ವಿಚಾರಣಾಧೀನ ನ್ಯಾಯಾಲಯವು ಯಾವುದೇ ವಿಚಾರಣಾ ಪ್ರಕ್ರಿಯೆ ದಾಖಲಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಎಚ್‌ ಡಿ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ರೇವಣ್ಣರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ದೂರಿನಲ್ಲಿ ಆಕ್ಷೇಪಿಸಿರುವ ಅಪರಾಧಕ್ಕೆ ಪ್ರಕರಣ ದಾಖಲಿಸಲಾಗುತ್ತದೆಯೇ ಹೊರತು ತನಿಖೆಯ ವೇಳೆ ಬಹಿರಂಗಗೊಳ್ಳುವಂತಹ ಅಪರಾಧಗಳಿಗೆ ಅಲ್ಲ ಎಂಬುದನ್ನು ನ್ಯಾಯಾಲಯ ಒಪ್ಪುತ್ತದೆ ಎಂದುಕೊಳ್ಳುತ್ತೇನೆ. ರೇವಣ್ಣ ವಿರುದ್ಧ ದಾಖಲಿಸಿರುವ ಐಪಿಸಿ 354ಎ ಅಡಿ ಅಪರಾಧಕ್ಕೆ ಗರಿಷ್ಠ ಶಿಕ್ಷೆ ಮೂರು ವರ್ಷ” ಎಂದರು.

ಮುಂದುವರಿದು, “ನಾಲ್ಕು ವರ್ಷಗಳ ಹಿಂದೆ ಸಂತ್ರಸ್ತೆಯು ರೇವಣ್ಣ ಅವರ ಮನೆಯನ್ನು ತೊರೆದಿದ್ದಾರೆ. ಆದರೆ, 2024ರ ಏಪ್ರಿಲ್‌ 28ರಂದು ಐಪಿಸಿ ಸೆಕ್ಷನ್‌ 354ಎ ಮತ್ತು 354ಡಿ (ಹಿಂಬಾಲಿಸುವುದು) ಅಡಿ ಪ್ರಕರಣ ದಾಖಲಿಸಲಾಗಿದೆ. ಹಿಂಬಾಲಿಸುವ ಆರೋಪ ಎಲ್ಲಿದೆ? ಈ ಎರಡೂ ಅಪರಾಧಗಳಿಗೆ ಗರಿಷ್ಠ 3 ವರ್ಷ ಶಿಕ್ಷೆ ಇದೆ. ಐಪಿಸಿ ಸೆಕ್ಷನ್‌ಗಳನ್ನು ಅನ್ವಯಿಸಿದರೆ ಸಾಲದು, ಆರೋಪ ಇರಬೇಕಾಗುತ್ತದೆ” ಎಂದರು. ಅಪರಾಧ ಪ್ರಕ್ರಿಯಾ ಸಂಹಿತೆಯ 468ಅನ್ನು ಉಲ್ಲೇಖಿಸಿ ಕಾಲಮಿತಿಯೊಳಗೆ ದೂರುದಾಖಲಾಗಿಲ್ಲ ಎನ್ನುವ ವಾದವನ್ನು ಪೀಠದ ಮುಂದಿರಿಸಿದರು.

ಸಹಮತಿಸಿದ ಪೀಠವು “468 ಸಂಜ್ಞೇ ತೆಗೆದುಕೊಳ್ಳಲು ಅನ್ವಯಿಸಲ್ಲ. ಬದಲಿಗೆ ದೂರು ದಾಖಲಿಸಲು ಮಾತ್ರವೇ ಅನ್ವಯಿಸುತ್ತದೆ. ಹತ್ತು ವರ್ಷದ ಬಳಿಕ ಬೇಕಾದರೆ ನ್ಯಾಯಾಲಯ ಸಂಜ್ಞೇ ಪರಿಗಣಿಸಬಹುದು. ಆದರೆ, ದೂರು ದಾಖಲಿಗೆ ಕಾಲಮಿತಿ ಇದೆ” ಎಂದು ಸ್ಪಷ್ಟಪಡಿಸಿತು.

ಈ ವೇಳೆ ಮಧ್ಯಪ್ರವೇಶಿಸಿದ, ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್‌ ಅವರು “ಆಗಸ್ಟ್‌ 23ರಂದು ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪ ಪಟ್ಟಿಯನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ಐಪಿಸಿ ಸೆಕ್ಷನ್‌ 354ಎ ಮಾತ್ರವೇ ಅಲ್ಲ, ಸೆಕ್ಷನ್‌ 506 (ಕ್ರಿಮಿನಲ್‌ ಬೆದರಿಕೆ), 509 (ಮಹಿಳೆಯ ಘನತೆಗೆ ಚ್ಯುತಿ) ಅಡಿಯೂ ಅಪರಾಧ ದಾಖಲಾಗಿದೆ. ಇಲ್ಲಿ ಎಸಗಿರುವ ಅಪರಾಧವು ಹೀನ ಕೃತ್ಯವಾಗಿದೆ” ಎಂದು ವಿವರಿಸಿದರು.

ಸಿ ವಿ ನಾಗೇಶ್‌ ಅವರು ಪ್ರಕರಣದ ವಿಚಾರಣಾರ್ಹತೆಯ ಮೇಲೆ ಚರ್ಚಿಸದೆ ಸೆಕ್ಷನ್‌ 354 (ಡಿ) ಪ್ರಕರಣದಲ್ಲಿ ಅನ್ವಯಿಸದೇ ಇರುವುದು, ದೂರು ದಾಖಲಿಸುವ ವಿಚಾರದಲ್ಲಿ ಕಾಲಮಿತಿ ಮೀರಿರುವುದು, ದೂರಿನಲ್ಲಿ ಅಡಕವಾಗಿಲ್ಲದೆ ಇರುವ ಆರೋಪಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಿರುವ ಅಂಶಗಳಿಗೆ ಸೀಮಿತಗೊಳಿಸಿ ತಮ್ಮ ವಾದ ಮಂಡಿಸಿದರು. ಎಫ್‌ಐಆರ್‌ ರದ್ದುಪಡಿಸಲು ಈ ಅಂಶಗಳು ಸಾಕು ಎಂದರು.

ವ್ಯಾಪ್ತಿಯ ವಿಚಾರಕ್ಕೆ ಸಂಬಂಧಿಸಿದ ವಾದ ಒಪ್ಪದ ಪೀಠವು “ವ್ಯಾಪ್ತಿಯ ವಿಚಾರಕ್ಕೆ ಹೋಗುವುದು ಬೇಡ. ದೂರಿನಲ್ಲಿ ಮೆರಿಟ್‌ ಇದೆಯೋ ಇಲ್ಲವೋ ಎಂಬುದನ್ನು ನೋಡೋಣ. ಈಗಾಗಲೇ ಆರೋಪ ಪಟ್ಟಿ ಸಲ್ಲಿಕೆಯಾಗಿರುವುದರಿಂದ ಅದನ್ನು ಪರಿಶೀಲಿಸಲಾಗುವುದು” ಎಂದಿತು.

ಈ ವೇಳೆ, 2023ರಲ್ಲಿ ಅಭಿಷೇಕ್‌ ವರ್ಸಸ್‌ ಉತ್ತರ ಪ್ರದೇಶ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಉಲ್ಲೇಖಿಸಿದ ನ್ಯಾಯಾಲಯವು “ನ್ಯಾಯಾಲಯದಲ್ಲಿ ಎಫ್‌ಐಆರ್‌ ಪ್ರಶ್ನಿಸಿದಾಗ ಅದು ನ್ಯಾಯಾಲಯದ ಪರಿಗಣನೆಗೆ ಒಳಪಟ್ಟಿರುವ ಸಂದರ್ಭದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದರೆ, ಮಧ್ಯಂತರ ಆದೇಶ ಚಾಲ್ತಿಯಲ್ಲಿದ್ದರೆ, ಆರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದು ಅರ್ಜಿದಾರ/ಆರೋಪಿಯನ್ನು ನ್ಯಾಯಾಲಯ ಹೊರಹಾಕುವುದಿಲ್ಲ. ಬದಲಿಗೆ ಆರೋಪ ಪಟ್ಟಿಯನ್ನೂ ಪರಿಶೀಲಿಸಿ, ಪ್ರಕರಣದ ಊರ್ಜಿತತ್ವ ನಿರ್ಧರಿಸಲಿದೆ. ಹೀಗಾಗಿ, ಆರೋಪ ಪಟ್ಟಿಯನ್ನೂ ಓದಿ ತೀರ್ಮಾನಿಸುತ್ತೇನೆ” ಎಂದಿತು.

Also Read
ಅತ್ಯಾಚಾರ ಪ್ರಕರಣ: ರೇವಣ್ಣ ವಿರುದ್ಧ ಒಂದು, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಮೂರು ಆರೋಪ ಪಟ್ಟಿ ಸಲ್ಲಿಕೆ

ಆಗ ನಾಗೇಶ್‌ ಅವರು “ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಸದ್ಯಕ್ಕೆ ಆ ಪ್ರಕ್ರಿಯೆ ಅಲ್ಲಿಗೆ ನಿಲ್ಲಲಿ. ಸಮನ್ಸ್‌ ಜಾರಿ ಮಾಡುವುದು ಬೇಡ. (ರೇವಣ್ಣ) ಹಾಜರಾಗುವಂತೆ ಸೂಚಿಸುವುದು ಬೇಡ” ಎಂದರು.

ಆಗ ಎಸ್‌ಪಿಪಿ ಅವರು “ವಿಚಾರಣಾಧೀನ ನ್ಯಾಯಾಲಯವು ಆರೋಪ ಪಟ್ಟಿಗೆ ಸಂಬಂಧಿಸಿದಂತೆ ಸಂಜ್ಞೇ ಪರಿಗಣಿಸಿಲ್ಲ” ಎಂದರು.

ಅಂತಿಮವಾಗಿ ಪೀಠವು “ಮುಂದಿನ ವಿಚಾರಣೆವರೆಗೆ ಸಂಬಂಧಿತ ನ್ಯಾಯಾಲಯವು ಯಾವುದೇ ಪ್ರಕ್ರಿಯೆ ದಾಖಲಿಸಬಾರದು” ಎಂದು ಆದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 19ಕ್ಕೆ ಮುಂದೂಡಿತು.

ಸಂತ್ರಸ್ತೆ ಅಪಹರಣ ಪ್ರಕರಣ ಮುಂದೂಡಿಕೆ

ಸಂತ್ರಸ್ತೆ ಅಪಹರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ ಆರ್‌ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಸೆಪ್ಟೆಂಬರ್‌ 19ಕ್ಕೆ ಮುಂದೂಡಿದೆ.

ರೇವಣ್ಣ ಪರ ವಕೀಲರು “ಪ್ರಮಾಣೀಕೃತ ಆರೋಪ ಪಟ್ಟಿ ಈಗಷ್ಟೇ ದೊರೆತಿದೆ. ಅದನ್ನು ಅಧ್ಯಯನ ಮಾಡಿ, ವಾದಿಸಲು ಅವಕಾಶ ನೀಡಬೇಕು” ಎಂದು ಕೋರಿದರು.

Also Read
ಸಂತ್ರಸ್ತೆ ಅಪಹರಣ ಪ್ರಕರಣ: ಶಾಸಕ ರೇವಣ್ಣ ಜಾಮೀನು ಆದೇಶ ಎತ್ತಿ ಹಿಡಿದ ಹೈಕೋರ್ಟ್‌; ಆರು ಆರೋಪಿಗಳಿಗೂ ಜಾಮೀನು ಮಂಜೂರು

ಆಗ ಪೀಠವು ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರನ್ನು ಕುರಿತು “ಅಧೀನ ನ್ಯಾಯಾಲಯ ಆರೋಪ ಪಟ್ಟಿಗೆ ಸಂಬಂಧಿಸಿದಂತೆ ಸಂಜ್ಞೇ ಪರಿಗಣಿಸಿರುವ ಆದೇಶ ಎಲ್ಲಿ” ಎಂದಿತು.

ಆಗ ಎಸ್‌ಪಿಪಿ ಅವರು “ಅಧೀನ ನ್ಯಾಯಾಲಯ ಸಂಜ್ಞೇ ತೆಗೆದುಕೊಂಡಿಲ್ಲದಿರುವ ಆದೇಶವನ್ನು ಪ್ರಶ್ನಿಸಲಾಗುವುದು” ಎಂದರು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯವು ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com