
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಮಾಜಿ ಸಂಸದ ಡಿ ಕೆ ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ವಂಚನೆ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಬಂಧಿತರಾಗಿದ್ದ ಐಶ್ವರ್ಯಾ ಗೌಡ ಅಲಿಯಾಸ್ ನವ್ಯಾಶ್ರೀಗೆ ಬೆಂಗಳೂರಿನ ವಿಶೇಷ ಜಾರಿ ನಿರ್ದೇಶನಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಐಶ್ವರ್ಯಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರೂ ಆದ ವಿಶೇಷ ನ್ಯಾಯಾಧೀಶ ಬಿ ಮುರಳೀಧರ್ ಪೈ ಅವರು ಪುರಸ್ಕರಿಸಿದ್ದಾರೆ.
ಐದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತೆ ಒದಗಿಸಬೇಕು. ನ್ಯಾಯಾಲಯದ ವ್ಯಾಪ್ತಿ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಪಿಎಂಎಲ್‌ಎ ಸೆಕ್ಷನ್ 3 & 4 ಅನ್ವಯಿಸಲು ಅಪರಾಧ ಪ್ರಕ್ರಿಯೆ ಇರಬೇಕಾಗುತ್ತದೆ. ಅಪರಾಧದ ಪ್ರಕ್ರಿಯೆ ಇಲ್ಲದಿದ್ದರೂ ಐಶ್ವರ್ಯಾ ಗೌಡ ಅವರನ್ನು ಬಂಧಿಸಲಾಗಿದೆ. ಐಶ್ವರ್ಯಾ ವಿರುದ್ಧ ರಾಜ್ಯದ ಬೇರೆಬೇರೆ ಪೊಲೀಸ್ ಠಾಣೆಗಳಲ್ಲಿ ಏಳು ಪ್ರಕರಣ ದಾಖಲಾಗಿದ್ದು, ಇರಡರಲ್ಲಿ ತಡೆ ಮತ್ತು ಉಳಿದ ಪ್ರಕರಣಗಳಲ್ಲಿ ಐಶ್ವರ್ಯಾ ಗೌಡ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ತನಿಖಾಧಿಕಾರಿಗೆ ಹೈಕೋರ್ಟ್ ಆದೇಶಿಸಿದೆ. ಇದನ್ನು ರಿಮ್ಯಾಂಡ್‌ನಲ್ಲಿ ಜಾರಿ ನಿರ್ದೇಶನಾಲಯ ಬಚ್ಚಿಟ್ಟಿದೆ. ಅಲ್ಲದೇ, ಐಶ್ವರ್ಯಾ ಗೌಡಗೆ 9 ವರ್ಷದ ಮಗು ಇದ್ದು, ಅದರ ಕಾಳಜಿವಹಿಸಬೇಕಿರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಕೋರಲಾಗಿತ್ತು.
ಐಶ್ವರ್ಯಾ ಗೌಡ ಪರವಾಗಿ ವಕೀಲ ಎಸ್ ಸುನೀಲ್ ಕುಮಾರ್ ವಕಾಲತ್ತು ವಹಿಸಿದ್ದರು.