ಕೋವಿಡ್‌ ನಿಯಮಾವಳಿ ಉಲ್ಲಂಘಿಸಿ ಪುತ್ರನ ವಿವಾಹ: ಶಾಸಕ ಪರಮೇಶ್ವರ್‌ ನಾಯ್ಕಗೆ ಜಾಮೀನು ನೀಡಿದ ಜನಪ್ರತಿನಿಧಿಗಳ ನ್ಯಾಯಾಲಯ

ಆರೋಪಿಗಳಿಗೆ ತಲಾ 50 ಸಾವಿರ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಒಂದೊಂದು ಭದ್ರತೆ ನೀಡುವಂತೆ ಆದೇಶಿಸಿರುವ ನ್ಯಾಯಾಲಯವು, ತಪ್ಪದೇ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿದೆ.
Congress MLA Parameshwara Naik
Congress MLA Parameshwara NaikE sanje
Published on

ಕೋವಿಡ್‌ ನಿಯಮ ಉಲ್ಲಂಘಿಸಿ 2020ರ ಜೂನ್‌ನಲ್ಲಿ ಪುತ್ರನ ವಿವಾಹ ಮಾಡಿದ್ದ ಕಾಂಗ್ರೆಸ್‌ನ ಹೂವಿನಹಡಗಲಿ ಶಾಸಕ ಪಿ ಟಿ ಪರಮೇಶ್ವರ್‌ ನಾಯ್ಕ, ಅವರ ಪುತ್ರ ಭರತ್‌ ಪಿ ಟಿ ಹಾಗೂ ಪುನೀತ ಸಿ ಜಿ ಎಂಬುವರಿಗೆ ಈಚೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಶಾಸಕರು ಹಾಗೂ ಇತರರ ವಿರುದ್ಧದ ಕ್ರಿಮಿನಲ್‌ ಪ್ರಕರಣದ ವಿಚಾರಣೆ ನಡೆಸಿದ್ದ 62ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಹಾಗೂ ಹಾಲಿ ಮತ್ತು ಮಾಜಿ ಶಾಸಕರು/ಸಂಸದರ ವಿರುದ್ಧದ ಮ್ಯಾಜಿಸ್ಟ್ರೇಟ್‌ ವಿಚಾರಣೆ ನಡೆಸಬಹುದಾದ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶೆಯಾದ ಪ್ರೀತ್‌ ಜೆ ಅವರು ಜಾಮೀನು ಮಂಜೂರು ಮಾಡಿದ್ದಾರೆ.

Also Read
ಕೋವಿಡ್‌ ನಿಯಮಾವಳಿ ಉಲ್ಲಂಘಿಸಿ ಪುತ್ರನ ವಿವಾಹ: ಶಾಸಕ ಪರಮೇಶ್ವರ್‌ ನಾಯ್ಕಗೆ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಸಮನ್ಸ್‌

ಆರೋಪಿಗಳು ಬಳ್ಳಾರಿಯ ಜಿಲ್ಲೆಯ ನಿವಾಸಿಗಳಾಗಿದ್ದು, ಹರಪನಹಳ್ಳಿ ಜೆಎಂಎಫ್‌ಸಿ ಸಿವಿಲ್‌ ನ್ಯಾಯಾಧೀಶರು ಪ್ರಕರಣವನ್ನು ವರ್ಗಾಯಿಸಿದ್ದು, ಈಗಾಗಲೇ ಅವರಿಗೆ ಅಲ್ಲಿನ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ ಎಂದು ನ್ಯಾಯಾಲಯ ಹೇಳಿದೆ. ಆರೋಪಿಗಳಿಗೆ ತಲಾ 50 ಸಾವಿರ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಒಂದೊಂದು ಭದ್ರತೆ ನೀಡುವಂತೆ ಆದೇಶಿಸಿರುವ ನ್ಯಾಯಾಲಯವು, ತಪ್ಪದೇ ವಿಚಾರಣೆಗೆ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ನಾಶ ಮಾಡಬಾರದು ಎಂದು ಜಾಮೀನು ಆದೇಶದಲ್ಲಿ ಷರತ್ತು ವಿಧಿಸಿದೆ.

ಹರಪನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರದಲ್ಲಿ ನಡೆದಿದ್ದ ಪರಮೇಶ್ವರ್‌ ನಾಯ್ಕ ಅವರ ಪುತ್ರನ ವಿವಾಹದಲ್ಲಿ ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕೋವಿಡ್‌ ಮಾರ್ಗಸೂಚಿಯ ಪ್ರಕಾರ ಆ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Attachment
PDF
Arasikere PS Versus Bharat P T.pdf
Preview
Kannada Bar & Bench
kannada.barandbench.com