ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಆತಿಥ್ಯ ಪ್ರಕರಣ: ಕೈದಿ ಶ್ರೀನಿವಾಸ್ ವಿರುದ್ದದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ಜೈಲುಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂದು ಒಂದು ಕಡೆ ಹೇಳಿದರೆ ಮತ್ತೊಂದೆಡೆ ಧೂಮಪಾನಕ್ಕೆ ಪ್ರತ್ಯೇಕ ಜಾಗದ ಅವಕಾಶ ಕಲ್ಪಿಸಲಾಗಿದೆ ಎಂಬ ತದ್ವಿರುದ್ಧ ನಿಯಮ ಜಾರಿಯಲ್ಲಿವೆ ಎಂದು ಆಕ್ಷೇಪಿಸಿದ ಹಿರಿಯ ವಕೀಲ ಸಂದೇಶ್‌ ಚೌಟ.
Darshan and Karnataka HC
Darshan and Karnataka HC
Published on

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ ಜೊತೆ ಹರಟುತ್ತಾ ಕುಳಿತಿದ್ದ ಆರೋಪದಡಿ ಸಹ ಕೈದಿ ಶ್ರೀನಿವಾಸ್ ವಿರುದ್ಧ ಕ್ರಿಮಿನಲ್‌ ಪ್ರಕರಣದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ತಡೆ ನೀಡಿದೆ.

ಬೆಂಗಳೂರಿನ ಶ್ರೀನಿವಾಸ್‌ ಅಲಿಯಾಸ್ ಕುಳ್ಳ ಸೀನ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಶ್ರೀನಿವಾಸ್‌ ಪರ ವಾದಿಸಿದ ಹಿರಿಯ ವಕೀಲ ಸಂದೇಶ್ ಚೌಟ ಅವರು “ಆರೋಪಗಳಿಗೂ ಮತ್ತು ದೂರಿನಲ್ಲಿ ದಾಖಲಿಸಿರುವ ಸೆಕ್ಷನ್‌ಗಳಿಗೂ ತಾಳೆಯಾಗುವುದಿಲ್ಲ. ಅಂತೆಯೇ, ಜೈಲುಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂದು ಒಂದು ಕಡೆ ಹೇಳಿದರೆ ಮತ್ತೊಂದೆಡೆ ಧೂಮಪಾನಕ್ಕೆ ಪ್ರತ್ಯೇಕ ಜಾಗದ ಅವಕಾಶ ಕಲ್ಪಿಸಲಾಗಿದೆ ಎಂಬ ತದ್ವಿರುದ್ಧ ನಿಯಮ ಜಾರಿಯಲ್ಲಿವೆ. ಈ ಪ್ರಕರಣದಲ್ಲಿ ಅರ್ಜಿದಾರರು ಯಾವುದೇ ಧೂಮಪಾನ ಮಾಡುತ್ತಿರಲಿಲ್ಲ. ಹೀಗಾಗಿ, ಇವರ ವಿರುದ್ಧದ ಎಫ್‌ಐಆರ್‌ ಮತ್ತು ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಬೇಕು” ಎಂದು ಮನವಿ ಮಾಡಿದರು.

ಇದನ್ನು ಪುರಸ್ಕರಿಸಿದ ಪೀಠವು ಪ್ರಕರಣಕ್ಕೆ ತಡೆ ನೀಡಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಜಿ ಲಕ್ಷ್ಮಿಕಾಂತ್‌ ವಕಾಲತ್ತು ವಹಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಭಾಗಿಯಾಗಿದ್ದರು.

ಪರಪ್ಪನ ಅಗ್ರಹಾರ ಪೊಲೀಸರು 2024ರ ಆಗಸ್ಟ್‌ 26ರಂದು ಕರ್ನಾಟಕ ಕಾರಾಗೃಹಗಳ ತಿದ್ದುಪಡಿ ಕಾಯಿದೆ–2022ರ ಅನುಸಾರ ದಾಖಲಿಸಿದ್ದ ಎಫ್‌ಐಆರ್‌ ಮತ್ತು ಈ ಸಂಬಂಧ 9ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿನ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಶ್ರೀನಿವಾಸ್ ಅರ್ಜಿ ಸಲ್ಲಿದ್ದಾರೆ.

Also Read
ಜಾಮೀನು ಕೋರಿದ ನಟ ದರ್ಶನ್ ಹಾಗೂ ಪವಿತ್ರಾ ಗೌಡ: ಸರ್ಕಾರಕ್ಕೆ ಬೆಂಗಳೂರು ನ್ಯಾಯಾಲಯ ನೋಟಿಸ್

ಪ್ರಕರಣದ ಹಿನ್ನೆಲೆ: ದರ್ಶನ್‌, ಸಹ ಕೈದಿಗಳಾದ ಶ್ರೀನಿವಾಸ್‌, ವಿಲ್ಸನ್‌ ಗಾರ್ಡನ್‌ ನಾಗ ಹಾಗೂ ನಾಗರಾಜ್‌ ಜೊತೆಗೆ, ಪರಪ್ಪನ ಅಗ್ರಹಾರ ಜೈಲಿನ ಒಳಾವರಣದಲ್ಲಿ ಕುರ್ಚಿಯಲ್ಲಿ ಕುಳಿತಿರುವ ಮತ್ತು ದರ್ಶನ್‌ ಒಂದು ಕೈಯಲ್ಲಿ ಸಿಗರೇಟು ಸೇದುತ್ತಿರುವ ಹಾಗೂ ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದುಕೊಂಡಿರುವ ಚಿತ್ರಗಳು ಬಹಿರಂಗಗೊಂಡಿದ್ದವು. ಈ ಕಾರಣಕ್ಕಾಗಿ ಇವರೆಲ್ಲರ ವಿರುದ್ಧ ಜೈಲಿನ ಅಧಿಕಾರಿಗಳು ದೂರು ದಾಖಲಿಸಿದ್ದರು.

Kannada Bar & Bench
kannada.barandbench.com