[ಶಶಿಕಲಾ ಐಷಾರಾಮಿ ಸೆರೆವಾಸ] ಇಬ್ಬರು ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ: ಹೈಕೋರ್ಟ್‌ಗೆ ಮಾಹಿತಿ

ಪ್ರಕರಣದ ತನಿಖೆ ಪೂರ್ಣಗೊಂಡು ಸಕ್ಷಮ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರ ಪೂರ್ವಾನುಮತಿಯೂ ನೀಡಿದೆ. ಹಾಗಾಗಿ ಮಧ್ಯಂತರ ಅರ್ಜಿಯಲ್ಲಿ ಮುಂದಿನ ನಿರ್ದೇಶನ ನೀಡುವ ಅಗತ್ಯ ಇಲ್ಲ ಎಂದ ಪೀಠ.
V K Sasikala and Karnataka HC
V K Sasikala and Karnataka HC

ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜಯಲಲಿತಾ ಗೆಳತಿ ವಿ ಕೆ ಶಶಿಕಲಾ ಮತ್ತು ಇಳವರಸಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅನಧಿಕೃತವಾಗಿ ವಿಶೇಷ ಸೌಲಭ್ಯ ಕಲ್ಪಿಸಿದ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಪ್ರಕರಣದ ಮೊದಲನೇ ಆರೋಪಿ ಬೆಳಗಾವಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ್ ಮತ್ತು ಎರಡನೇ ಆರೋಪಿ ಕರ್ನಾಟಕ ಕಾರಾಗೃಹ ಅಕಾಡೆಮಿಯ ಉಪ ನಿರ್ದೇಶಕಿ ಡಾ. ಆರ್ ಅನಿತಾ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ಮಾಹಿತಿ ನೀಡಿತು.

ಪ್ರಕರಣದ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ವಿಧಿಸಲಾಗಿರುವ ಗಡುವು ವಿಸ್ತರಣೆಗೆ ಕೋರಿ ಎಸಿಬಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲೆ ಎಚ್‌ ವಾಣಿ ಅವರು “ಪ್ರಕರಣದ ಮೊದಲನೇ ಆರೋಪಿ ಕೃಷ್ಣಕುಮಾರ್ ಮತ್ತು ಎರಡನೇ ಆರೋಪಿ ಡಾ. ಆರ್ ಅನಿತಾ ವಿರುದ್ಧ ವಿಚಾರಣೆಗೆ ಎಸಿಬಿಗೆ ಪೂರ್ವಾನುಮತಿ ನೀಡಿ ರಾಜ್ಯ ಸರ್ಕಾರವು 2021ರ ಡಿಸೆಂಬರ್‌ 30ರಂದು ಆದೇಶಿಸಿದೆ” ಎಂದು ತಿಳಿಸಿದರು.

ಎಸಿಬಿ ಪರ ವಕೀಲ ಪಿ ಎನ್‌ ಮನಮೋಹನ್‌ ಅವರು “ಪ್ರಕರಣ ತನಿಖೆ ಈಗಾಗಲೇ ಪೂರ್ಣಗೊಂಡಿದೆ. ವಿಚಾರಣಾ ನ್ಯಾಯಾಲಯಕ್ಕೆ 2022ರ ಜನವರಿ 7ರಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ" ಎಂದರು.

ಈ ಹೇಳಿಕೆ ದಾಖಲಿಸಿಕೊಂಡು ಪೀಠವು ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡು ಸಕ್ಷಮ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರ ಪೂರ್ವಾನುಮತಿಯೂ ನೀಡಿದೆ. ಹಾಗಾಗಿ ಈ ಅರ್ಜಿಗೆ ಸಂಬಂಧಿಸಿದಂತೆ ಮುಂದಿನ ನಿರ್ದೇಶನ ನೀಡುವ ಅಗತ್ಯ ಇಲ್ಲ ಎಂದು ಅಭಿಪ್ರಾಯಪಟ್ಟು ಮನವಿ ಇತ್ಯರ್ಥಪಡಿಸಿತು.

ಸರ್ಕಾರದ ಆದೇಶದಲ್ಲಿ ಏನಿದೆ?

ಬೆಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿದ್ದ (ಪ್ರಸ್ತುತ ಬೆಳಗಾವಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ) ಕೃಷ್ಣ ಕುಮಾರ್ ಮತ್ತು ಅಧೀಕ್ಷಕಿ ಡಾ. ಆರ್ ಅನಿತಾ (ಪ್ರಸ್ತುತ ಬೆಂಗಳೂರಿನ ಕರ್ನಾಟಕ ಕಾರಾಗೃಹ ಅಕಾಡೆಮಿಯ ಉಪ ನಿರ್ದೇಶಕಿ) ಅವರು ಶಶಿಕಲಾ ಮತ್ತು ಇಳವರಸಿ ಅವರಿಗೆ ಅನಧಿಕೃತವಾಗಿ ವಿಶೇಷ ಸೌಲಭ್ಯ ಕಲ್ಪಿಸಿದ್ದಾರೆ. ಶಶಿಕಲಾಗೆ ಮಹಿಳಾ ಕೈದಿಗಳ ವಿಭಾಗದ ಕಾರಿಡಾರ್‌ ಅನ್ನು ಅನಧಿಕೃತವಾಗಿ ಬಳಸಿಕೊಳ್ಳಲು, ಇತರೆ ಕೈದಿಗಳಿಂದ ಸ್ವತಂತ್ರವಾಗಿ ವಾಸಿಸಲು ಅನೂಕೂಲ ಮಾಡಿಕೊಟ್ಟಿದ್ದಾರೆ. ಮಂಚ ಹಾಗೂ ಹಾಸಿಗೆ ವ್ಯವಸ್ಥೆ ಒದಗಿಸಿದ್ದಾರೆ. ಅವರ ಸಂದರ್ಶನಕ್ಕೆ ಬಂದವರಿಗೆ ಹೆಚ್ಚಿನ ಸಮಯಾವಕಾಶ ನಿಡಲಾಗಿದೆ. ಜೈಲು ಅಧಿಕಾರಿಗಳ ಕಚೇರಿಯಲ್ಲಿಯೇ ಸಂದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ದೃಢಪಟ್ಟಿರುತ್ತದೆ. ಹಾಗಾಗಿ, ಅವರ ವಿರುದ್ಧ ಐಪಿಸಿ ಕಲಂ 120(ಬಿ) ಮತ್ತು ಭ್ರಷ್ಟಾಚಾರ ನಿಗ್ರಹ ಕಾಯಿದೆ -1988ರ ಕಲಂ 13(1)(ಸಿ) ಅಡಿಯಲ್ಲಿ ವಿಚಾರಣೆ ನಡೆಸಲು ಪೂರ್ವಾನುಮತಿ ನೀಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೆ, ಶಶಿಕಲಾಗೆ ವಿಶೇಷ ಸೌಲಭ್ಯ ಕಲ್ಪಿಸಲು ಲಂಚ ಪಡೆದ ಆರೋಪ ಸಂಬಂಧ ಕಾರಾಗೃಹ ಡಿಜಿಪಿಯಾಗಿದ್ದ ಎಚ್ ಎನ್ ಸತ್ಯನಾರಾಯಣ ಅವರು ನಿರ್ದೋಷಿಯಾಗಿದ್ದಾರೆ ಎಂದು ಎಸಿಬಿ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಸರ್ಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ

ಈ ಮಧ್ಯೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಿದ ಸರ್ಕಾರದ ಆದೇಶ ರದ್ದು ಕೋರಿ ಆರೋಪಿಯಾಗಿರುವ ಡಾ.ಆರ್ ಅನಿತಾ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರ ನೇತೃತ್ವದ ಏಕ ಸದಸ್ಯ ಪೀಠವು ಅನಿತಾ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.

Also Read
ಶಶಿಕಲಾ ಐಷಾರಾಮಿ ಸೆರೆವಾಸ ಪ್ರಕರಣ: ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ಎಸಿಬಿಗೆ ಹೈಕೋರ್ಟ್‌ ನಿರ್ದೇಶನ

ಪ್ರಕರಣದ ಹಿನ್ನೆಲೆ

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಶಶಿಕಲಾ ಮತ್ತವರ ಸಂಬಂಧಿ ಇಳವರಸಿಗೆ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲು ಜೈಲಿನ ಅಧಿಕಾರಿಗಳು ಎರಡು ಕೋಟಿ ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಈ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದ ಏಕಸದಸ್ಯ ಸಮಿತಿಯು ವಿಚಾರಣೆ ನಡೆಸಿ ವರದಿ ಸಲ್ಲಿಸಿತ್ತು. ನಂತರ ಎಸಿಬಿ ಪ್ರಕರಣ ತನಿಖೆ ಆರಂಭಿಸಿತ್ತು.

ಎಸಿಬಿ ವಿಳಂಬ ಮಾಡುತ್ತಿದೆ ಎಂದು ಆಕ್ಷೇಪಿಸಿ ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತೆ ಕೆ ಎಸ್ ಗೀತಾ ಎಂಬುವರು ಹೈಕೋರ್ಟ್‌ಗೆ 2021ರ ಮಾರ್ಚ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದರು. ಎರಡು ತಿಂಗಳಲ್ಲಿ ಪ್ರಕರಣದ ತನಿಖೆ ಪುರ್ಣಗೊಳಿಸಿ ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತೆ ಎಸಿಬಿಗೆ ನಿರ್ದೇಶಿಸಿ 2021ರ ಜೂನ್‌ 11ರಂದು ಹೈಕೋರ್ಟ್ ಆದೇಶಿಸಿತ್ತು. ಹೈಕೋರ್ಟ್ ನೀಡಿದ್ದ ಗಡುವಿನಲ್ಲಿ ತನಿಖೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಎಸಿಬಿ ಮಧ್ಯಂತರ ಅರ್ಜಿ ಸಲ್ಲಿಸಿ, ಗಡುವು ವಿಸ್ತರಣೆಗೆ ಕೋರಿತ್ತು.

Related Stories

No stories found.
Kannada Bar & Bench
kannada.barandbench.com