[ಶಶಿಕಲಾಗೆ ಸೌಲಭ್ಯ] ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಕೋರಿ ಗೃಹ ಸಚಿವರ ಕಚೇರಿಗೆ ಕಡತ ರವಾನೆ

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಗೃಹ ಸಚಿವರು ಅಲ್ಲಿಯೇ ಇದ್ದಾರೆ. 10 ದಿನಗಳ ಬಳಿಕ ವಾಪಸ್ಸಾಗಲಿದ್ದು, ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದ ಸರ್ಕಾರದ ಪರ ವಕೀಲರು.
[ಶಶಿಕಲಾಗೆ ಸೌಲಭ್ಯ] ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಕೋರಿ ಗೃಹ ಸಚಿವರ ಕಚೇರಿಗೆ ಕಡತ ರವಾನೆ
V K Sasikala and Karnataka HC

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಗೆಳತಿ ವಿ ಕೆ ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ನೀಡಲು ಲಂಚ ಪಡೆದ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ಕ್ರಮ ಕೈಗೊಳ್ಳಲು ಪೂರ್ವಾನುಮತಿ ಕೋರಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಲ್ಲಿಸಿರುವ ಮನವಿ ಬಗ್ಗೆ ಎರಡು ವಾರದಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.

ಪ್ರಕರಣದ ತನಿಖೆ ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ತಮಿಳುನಾಡಿನ ಶಿಕ್ಷಣ ತಜ್ಞೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಕೆ ಎಸ್ ಗೀತಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು “ತನಿಖೆಯನ್ನು ಎಸಿಬಿ ಪೂರ್ಣಗೊಳಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಪೂರ್ವಾನುಮತಿ ಕೋರಿ ತನಿಖಾ ವರದಿಯನ್ನು ಸಕ್ಷಮ ಪ್ರಾಧಿಕಾರವಾದ ಗೃಹ ಇಲಾಖೆ ಕಾರ್ಯದರ್ಶಿಗೆ 2021ರ ಜುಲೈನಲ್ಲಿ ರವಾನಿಸಿದೆ. 20 ದಿನಗಳ ಹಿಂದೆ ಆ ವರದಿಯನ್ನು ಗೃಹ ಕಾರ್ಯದರ್ಶಿ ಅವರು ಪರಿಶೀಲಿಸಿ ಅನುಮೋದನೆಗಾಗಿ ಕಡತವನ್ನು ಗೃಹ ಸಚಿವರ ಕಚೇರಿಗೆ ಕಳುಹಿಸಿದ್ದಾರೆ. ಗೃಹ ಸಚಿವರು ವರದಿಗೆ ಸಹಿ ಹಾಕಿ ಅನುಮೋದನೆ ನೀಡಬೇಕಿದೆ. ಪೂರ್ವಾನುಮತಿ ದೊರೆಯದೆ ದೋಷಾರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವುದು ಸಾಧ್ಯವಾಗುವುದಿಲ್ಲ” ಎಂದು ಪೀಠದ ಗಮನಕ್ಕೆ ತಂದರು.

Also Read
ಶಶಿಕಲಾ ಐಷಾರಾಮಿ ಸೆರೆವಾಸ ಪ್ರಕರಣ: ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ಎಸಿಬಿಗೆ ಹೈಕೋರ್ಟ್‌ ನಿರ್ದೇಶನ

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು “ಸದರಿ ಅರ್ಜಿಯನ್ನು 2021 ಜನವರಿ 11ರಂದು ಹೈಕೋರ್ಟ್ ಇತ್ಯರ್ಥಪಡಿಸಿತ್ತು. ಅಂತಿಮ ವರದಿಯನ್ನು ಎರಡು ತಿಂಗಳಲ್ಲಿ ಸಲ್ಲಿಸುವಂತೆ ತನಿಖಾಧಿಕಾರಿಗೆ ಸೂಚಿಸಿತ್ತು. ತನಿಖಾ ವರದಿ ಸಲ್ಲಿಸಲು ಸೆಪ್ಟೆಂಬರ್‌ 7ರಂದು ಮತ್ತೆ 30 ದಿನ ಕಾಲಾವಕಾಶ ನೀಡಿತ್ತು. ವರದಿ ಸಲ್ಲಿಸಲು ವಿಫಲವಾದರೆ ಗೃಹ ಇಲಾಖೆ ಕಾರ್ಯದರ್ಶಿ ವಿಚಾರಣೆಗೆ ಹಾಜರಾಗಿ ವಿವರಣೆ ನೀಡುವಂತೆಯೂ ನಿರ್ದೇಶಿಸಿತ್ತು. ಆದರೆ, ಈವರೆಗೂ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ” ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಪೂರ್ವಾನುಮತಿ ಕೋರಿದ ಮನವಿ ಮೇಲೆ ನಿರ್ಧಾರ ಕೈಗೊಳ್ಳಲು ಎಷ್ಟು ಸಮಯ ಬೇಕಿದೆ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು.

ಅದಕ್ಕೆ ಸರ್ಕಾರಿ ವಕೀಲರು “ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಗೃಹ ಸಚಿವರು ಅಲ್ಲಿಯೇ ಇದ್ದಾರೆ. 10 ದಿನಗಳ ಬಳಿಕ ವಾಪಸ್ಸಾಗಲಿದ್ದು, ಎರಡು ವಾರ ಕಾಲಾವಕಾಶ ನೀಡಬೇಕು” ಎಂದು ಕೋರಿದರು.

Related Stories

No stories found.
Kannada Bar & Bench
kannada.barandbench.com