
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಪೂರ್ವ ನಗರ ಪಾಲಿಕೆ ಮತ್ತು ದಕ್ಷಿಣ ನಗರ ಪಾಲಿಕೆ ನಡುವೆ ವಿಭಜನೆ ಮಾಡಿರುವುದನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ಪಿ ಎಸ್ ಹರೀಶ್ ಮತ್ತು ಆರ್ ದಿಲೀಪ್ ಕುಮಾರ್ ಎಂಬುವರು ಸರ್ಕಾರವು ಐದು ನಗರ ಪಾಲಿಕೆಗಳನ್ನು ರೂಪಿಸಿ, ವಲಯ ವರ್ಗೀಕರಣ ಮಾಡಿ ಸೆಪ್ಟೆಂಬರ್ 2ರಂದು ಮಾಡಿರುವ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಹಿರಿಯ ವಕೀಲ ಡಿ ಆರ್ ರವಿಶಂಕರ್ ಮತ್ತು ವಕೀಲ ಎ ಪಿ ರಂಗನಾಥ್ ಅವರು “ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಸೆಕ್ಷನ್ 26(3)ಕ್ಕೆ ವಿರುದ್ಧವಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಸ್ವೇಚ್ಛೆಯಿಂದ ವಿಂಗಡಿಸಲಾಗಿದೆ. ಆಕ್ಷೇಪಣೆ ಸಲ್ಲಿಸಿದ್ದರೂ ಅಂಬಲಿಪುರ, ಹರಳೂರು, ಕೈಕೊಂಡಹಳ್ಳಿ, ಕಸವನಹಳ್ಳಿ, ಕೆಪಿಸಿಎಲ್ ಲೇಔಟ್, ಜುನ್ನಸಂದ್ರ, ದೊಡ್ಡಕನ್ನೆಲ್ಲಿ ಗ್ರಾಮಗಳನ್ನು ದಕ್ಷಿಣ ಮತ್ತು ಪೂರ್ವ ನಗರ ಪಾಲಿಕೆಗಳ ನಡುವೆ ವಿಭಜನೆ ಮಾಡಲಾಗಿದೆ. ಸೆಕ್ಷನ್ 26(3)ರ ಪ್ರಕಾರ ವಿಧಾನಸಭಾ ಕ್ಷೇತ್ರವನ್ನು ವಿವಿಧ ಪಾಲಿಕೆಗಳಲ್ಲಿ ವಿಭಜನೆಯಾಗದಂತೆ ಖಾತರಿಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಲಾಗಿದೆ” ಎಂದರು.
ವಾದ ಆಲಿಸಿದ ಪೀಠವು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಿತು.
ಮಹದೇವಪುರ ವಿಧಾನಸಭಾ ಕ್ಷೇತ್ರದ ಗಣನೀಯ ಭಾಗವನ್ನು 2025ರ ಸೆಪ್ಟೆಂಬರ್ 2ರಂದು ಹೊರಡಿಸಲಾಗಿರುವ ಅಧಿಸೂಚನೆಯ ಪ್ರಕಾರ ಪೂರ್ವ ನಗರ ಪಾಲಿಕೆದೊಳಗೆ ಸೇರ್ಪಡೆ ಮಾಡಲಾಗಿದೆ ಮತ್ತು ಒಂದು ಪುಟ್ಟ ಭಾಗವನ್ನು ದಕ್ಷಿಣ ನಗರ ಪಾಲಿಗೆ ವರ್ಗಾಯಿಸಲಾಗಿದೆ. ಇದು ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ–2024ರ ಸೆಕ್ಷನ್ 26(3) ರ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.