ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳ ವ್ಯವಹಾರಗಳ ತನಿಖೆ: ವಿಚಾರಣಾ ಸಮಿತಿ ರಚನೆಯ ಸುಳಿವು ನೀಡಿದ ಸುಪ್ರೀಂ ಕೋರ್ಟ್

ಭಾರತದ ಕ್ರೀಡಾ ಸಂಸ್ಥೆಗಳ ಸ್ಥಿತಿಯ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ದೇಶದ ಕ್ರೀಡಾ ಸಂಸ್ಥೆಗಳು ರೋಗಗ್ರಸ್ತವಾಗಿವೆ ಎಂದು ಮಾರ್ಚ್ 17ರಂದು ಅದು ಹೇಳಿತ್ತು.
ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳ ವ್ಯವಹಾರಗಳ ತನಿಖೆ: ವಿಚಾರಣಾ ಸಮಿತಿ ರಚನೆಯ ಸುಳಿವು ನೀಡಿದ ಸುಪ್ರೀಂ ಕೋರ್ಟ್
Published on

ದೇಶದಕ್ರೀಡಾ ಸಂಘಗಳ ಕಾರ್ಯನಿರ್ವಹಣೆಯ ಬಗ್ಗೆ ತನಿಖೆ ನಡೆಸಲು ಮತ್ತು ಅಗತ್ಯವಿದ್ದರೆ ಅವುಗಳನ್ನು ವಿಸರ್ಜಿಸಲು ವಿಚಾರಣಾ ಆಯೋಗವನ್ನು ರಚಿಸಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ [ಪ್ರಿಯಾಂಕಾ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಆದರೆ ತಾನು ಕ್ರೀಡಾಪಟುಗಳನ್ನು ಗುರಿಯಾಗಿಸಿಕೊಂಡಿಲ್ಲ. ಅವರು ಇಂತಹ ವಿಚಾರಗಳಿಂದ ದೂರ ಇದ್ದು ತಮ್ಮ ಕ್ರೀಡಾ ಚಟುವಟಿಕೆ ಮೇಲೆ ಮಾತ್ರ ಗಮನಹರಿಸಬೇಕು ಎಂದು ಇದೇ ವೇಳೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ತಿಳಿಸಿತು.

Also Read
ದೇಶದ ಕ್ರೀಡಾ ಸಂಸ್ಥೆಗಳು ರೋಗಗ್ರಸ್ತವಾಗಿವೆ: ಸುಪ್ರೀಂ ಕೋರ್ಟ್

"ಕಬಡ್ಡಿ ಸಂಘಗಳ ವ್ಯವಹಾರಗಳ ಬಗ್ಗೆ ಆಳವಾದ ತನಿಖೆ ನಡೆಸಲು ನಾವು ತನಿಖಾ ಆಯೋಗ  ನೇಮಿಸಲು ಒಲವು ತೋರುತ್ತಿದ್ದೇವೆ ... ನಮಗೆ ಸ್ವಲ್ಪ ಸಮಯ ನೀಡಿ, ನಾವು ಈ ಎಲ್ಲಾ ಸಂಘಗಳನ್ನು ವಿಸರ್ಜಿಸುತ್ತೇವೆ. ಕ್ರೀಡಾಪಟುಗಳಿಗೆ ಸಂಬಂಧಿಸಿದಂತೆ, ಯಾರೂ ಅವರನ್ನು ಮುಟ್ಟುವುದಿಲ್ಲ. ಅವರು ತಮ್ಮನ್ನು ತಾವು ಸಂಪೂರ್ಣವಾಗಿ ದೂರವಿರಿಸಿಕೊಳ್ಳಬೇಕು ... ಅವರು ಕ್ರೀಡೆಗಳತ್ತ ಗಮನ ಹರಿಸಬೇಕು" ಎಂದು ನ್ಯಾಯಾಲಯ ವಿವರಿಸಿತು.

ಫೆಬ್ರವರಿ 20 ರಿಂದ 25 ರವರೆಗೆ ಇರಾನ್‌ನಲ್ಲಿ ನಡೆಯಲಿರುವ  ಹಿರಿಯರ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2025ರಲ್ಲಿ ಸ್ಪರ್ಧಿಸಲು ಅನುಮತಿ ಕೋರಿ ಪ್ರಿಯಾಂಕಾ ಮತ್ತು ಪೂಜಾ ಎಂಬ ಇಬ್ಬರು ಕ್ರೀಡಾಪಟುಗಳು ಅರ್ಜಿ ಸಲ್ಲಿಸಿದ್ದರು. ಅಂತರರಾಷ್ಟ್ರೀಯ ಕಬಡ್ಡಿ ಒಕ್ಕೂಟ, ಚುನಾಯಿತ ಆಡಳಿತ ಮಂಡಳಿಯ ಅನುಪಸ್ಥಿತಿಯನ್ನು ಉಲ್ಲೇಖಿಸಿ, ಭಾರತೀಯ ಹವ್ಯಾಸಿ ಕಬಡ್ಡಿ ಒಕ್ಕೂಟವನ್ನು (ಎಕೆಎಫ್‌ಐ) ಅಮಾನತುಗೊಳಿಸಿದ್ದರಿಂದ ಅವರ ಭಾಗವಹಿಸುವಿಕೆಗೆ ಅಡೆತಡೆಗಳು ಎದುರಾಗಿದ್ದವು.

ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಕೆ. ಪರಮೇಶ್ವರ್, ಆಟಗಾರರನ್ನು ಅವಮಾನಿಸಿದ ರೀತಿಯಿಂದ ನಿರಾಶೆಗೊಂಡಿರುವುದಾಗಿ ತಿಳಿಸಿದರು. ಈಗ ಪರ್ಯಾಯ ಸಂಘ ರಚಿಸಲಾಗಿದೆ ಎಂದು ಅವರು ಹೇಳಿದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಸೂಚನೆಗಳನ್ನು ಪಡೆಯಲು ಎರಡು ವಾರಗಳ ಕಾಲಾವಕಾಶ ಕೋರಿದರು, ಪ್ರಕರಣವನ್ನು ಎರಡು ವಾರಗಳ ಬಳಿಕ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿತು.

Also Read
ಆರೋಪ ಗಂಭೀರ ಎಂದ ಸುಪ್ರೀಂ: ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧದ ಲೈಂಗಿಕ ಕಿರುಕುಳದ ದೂರು ಆಲಿಸಲು ಒಪ್ಪಿಗೆ

ಭಾರತದ ಕ್ರೀಡಾ ಸಂಸ್ಥೆಗಳ ಸ್ಥಿತಿಯ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ದೇಶದ ಕ್ರೀಡಾ ಸಂಸ್ಥೆಗಳು ರೋಗಗ್ರಸ್ತವಾಗಿವೆ ಎಂದು ಮಾರ್ಚ್ 17ರಂದು ಅದು ಹೇಳಿತ್ತು. 

"ಈ ಎಲ್ಲಾ ಕ್ರೀಡಾ ಸಂಘಗಳಲ್ಲಿ ಕ್ರೀಡೆಗೆ ಸಂಬಂಧಿಸಿದ್ದೇನೂ ಉಳಿದಿಲ್ಲ. ಎಲ್ಲವೂ ಅನಾರೋಗ್ಯ ಪೀಡಿತ ಸಂಸ್ಥೆಗಳು, ಅವು ಯಾವುದಕ್ಕಾಗಿ ಹೋರಾಡುತ್ತಿವೆ ಎಂದು ನಮಗೆ ತಿಳಿದಿಲ್ಲ" ಎಂಬುದಾಗಿ ಹೇಳಿತ್ತು.

Kannada Bar & Bench
kannada.barandbench.com