ವರ್ಚುವಲ್ ವಿಚಾರಣೆಯ ವೇಳೆ ಶ್ರೀಧರ್ ಭಟ್ ಎಸ್‌ಡಿಎಂಸಿ ಉಜಿರೆ ಹೆಸರಿನಲ್ಲಿ ಲಾಗಿನ್ ಆಗಿದ್ದ ವ್ಯಕ್ತಿಯೊಬ್ಬರು ಅರೆನಗ್ನವಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಮಂಗಳವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ ಡಿ ಪ್ರಕರಣದ ವರ್ಚುವಲ್ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಕೋರ್ಟ್ ಹಾಲ್ 1ರಲ್ಲಿ ನಡೆಯುತ್ತಿತ್ತು. ವರ್ಚುವಲ್ ವೇದಿಕೆಯಲ್ಲಿ ಶ್ರೀಧರ್ ಭಟ್ ಎಸ್‌ಡಿಎಂಸಿ ಉಜಿರೆ ಎಂಬ ಹೆಸರಿನಲ್ಲಿ ಲಾಗಿನ್ ಆಗಿದ್ದ ವ್ಯಕ್ತಿಯೊಬ್ಬರು ಅರೆನಗ್ನವಾಗಿ ಕಾಣಿಸಿಕೊಂಡಿದ್ದರು.
ಪೀಠವು ಆದೇಶ ದಾಖಲಿಸಿಕೊಂಡ ಕೊನೆಯ ಹಂತದಲ್ಲಿ ಈ ವಿಚಾರವನ್ನು ಜೈಸಿಂಗ್ ಅವರು ಮುಖ್ಯ ನ್ಯಾಯಮೂರ್ತಿ ಅವರ ಗಮನಕ್ಕೆ ತಂದರು. “ಅರೆನಗ್ನ ವ್ಯಕ್ತಿಯೊಬ್ಬರು ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ವರ್ಚುವಲ್ ವಿಚಾರಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಾನು ಮಹಿಳಾ ವಕೀಲೆಯಾಗಿದ್ದು, ಅದನ್ನು ನೋಡಿಕೊಂಡು ನನಗೆ ಸರಿಯಾಗಿ ವಾದಿಸಲು ಸಮಸ್ಯೆಯಾಗಿತ್ತು. ಹಲವು ತಿಂಗಳುಗಳಿಂದ ನಾನು ವರ್ಚುವಲ್ ವಿಚಾರಣೆಯಲ್ಲಿ ಭಾಗಿಯಾಗಿದ್ದೇನೆ. ಈ ರೀತಿ ಎಂದಿಗೂ ಆಗಿಲ್ಲ. ಹೈಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಹೀಗಾಗುತ್ತದೆ ಎಂದರೆ ಹೇಗೆ? ಹೈಕೋರ್ಟ್ ಘನತೆ ಏನಾಗಬೇಕು? ಅರೆ ನಗ್ನವಾಗಿ ಕಾಣಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ದಾಖಲೆ ಇದೆ. ಅದನ್ನು ಕಳುಹಿಸಿಕೊಡುತ್ತೇನೆ. ಇದು ನ್ಯಾಯಾಂಗ ನಿಂದನೆಯಾಗಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು” ಎಂದು ಮನವಿ ಮಾಡಿದರು.
ಇದನ್ನು ಪರಿಗಣಿಸಿದ ಪೀಠವು “ಅರೆ ನಗ್ನವಾಗಿ ಕಾಣಿಸಿಕೊಂಡಿದ್ದನ್ನು ನಾವು ನೋಡಿಲ್ಲ. ಆದರೂ ಆ ವ್ಯಕ್ತಿಯ ಮಾಹಿತಿಯನ್ನು ದತ್ತಾಂಶದಲ್ಲಿ ಪರಿಶೀಲಿಸಿ ಅವರಿಗೆ ನೋಟಿಸ್ ನೀಡಬೇಕು” ಎಂದು ನ್ಯಾಯಾಲಯದ ಅಧಿಕಾರಿಗಳಿಗೆ ಆದೇಶ ಮಾಡಿತು.
ಇದಕ್ಕೂ ಮುನ್ನ ಹಲವು ಬಾರಿ ಇಂದಿರಾ ಜೈಸಿಂಗ್ ಅವರು, ವ್ಯಕ್ತಿಯೊಬ್ಬ ಆಗಷ್ಟೇ ಸ್ನಾನ ಮಾಡಿಕೊಂಡು ಬಂದು ಟವೆಲ್‌ನಲ್ಲಿ ಮೈ ಒರೆಸಿಕೊಳ್ಳುತ್ತಾ ಅತ್ತಿಂದಿತ್ತ ಓಡಾಡುತ್ತಿರುವುದು ಪರದೆಯಲ್ಲಿ ಕಾಣಿಸುತ್ತಿರುವ ಬಗ್ಗೆ ಗಮನಸೆಳೆದಿದ್ದರು. “ಹೈಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಏನಾಗುತ್ತಿದೆ. ಅರೆನಗ್ನ ವ್ಯಕ್ತಿಯೊಬ್ಬರು ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ನನಗೆ ಸಮಸ್ಯೆಯಾಗುತ್ತಿದೆ” ಎಂದು ಪ್ರತಿಭಟನೆ ದಾಖಲಿಸಿದ್ದರು. ಆದರೆ, ಪೀಠವು ಪ್ರಕರಣದಲ್ಲಿ ತಲ್ಲೀನವಾಗಿದ್ದರಿಂದ ಅದರತ್ತ ಗಮನಹರಿಸಲಿಲ್ಲ. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಶ್ರೀಧರ್ ಭಟ್ ಎಸ್‌ಡಿಎಂಸಿ ಉಜಿರೆ ಎಂದು ಲಾಗಿನ್ ಆಗಿದ್ದ ವ್ಯಕ್ತಿ ವರ್ಚುವಲ್ ವಿಚಾರಣೆಯಿಂದ ನಿರ್ಗಮಿಸಿದರು. ಇಂದಿರಾ ಜೈಸಿಂಗ್ ಅವರ ಆಕ್ಷೇಪಕ್ಕೆ ವಕೀಲ ಎಸ್ ಎ ಅಹ್ಮದ್ ಅವರು ಧ್ವನಿಗೂಡಿಸಿದರು.