ತೃತೀಯ ಭಾಷೆಗೆ ಗ್ರೇಡ್‌ ಬದಲು ಅಂಕ: ಆದೇಶದ ಮರುಪರಿಶೀಲನೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ರಾಜ್ಯ ಸರ್ಕಾರ

2025-26ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ನಿಯಮದಂತೆ ಮೌಲ್ಯಮಾಪನ ನಡೆಸಬೇಕು. ಹಿಂದಿ ಸೇರಿ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲು ಅಂಕ ನೀಡಬೇಕು ಎಂದು ನ್ಯಾ. ಇಂದಿರೇಶ್‌ ನಿರ್ದೇಶಿಸಿದ್ದರು.
ತೃತೀಯ ಭಾಷೆಗೆ ಗ್ರೇಡ್‌ ಬದಲು ಅಂಕ: ಆದೇಶದ ಮರುಪರಿಶೀಲನೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ರಾಜ್ಯ ಸರ್ಕಾರ
Published on

ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ಬದಲಿಗೆ ಅಂಕ ನೀಡಲು ನಿರ್ದೇಶಿಸಿ ಹೊರಡಿಸಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ರಾಜ್ಯ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದು, ತುರ್ತಾಗಿ ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ಇ ಎಸ್‌ ಇಂದಿರೇಶ್‌ ಅವರ ಏಕಸದಸ್ಯ ಪೀಠಕ್ಕೆ ಕೋರಲು ಸಿದ್ಧತೆ ನಡೆಸಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಮತ್ತು ಎನ್ಎಸ್‌ಕ್ಯೂಎಫ್ (ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು)ವಿಷಯಗಳಿಗೆ ಅಂಕದ ಬದಲು ಗ್ರೇಡ್ ನೀಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ (ಮಾರ್ಚ್‌ 28) ಪ್ರಕಟಿಸಿದ್ದರು. ಆ ಕ್ರಮ‌ ಪ್ರಶ್ನಿಸಿ ಚಿಕ್ಕಮಗಳೂರಿನ ಸಹನಾ ಆರ್ ನಾಯ್ಕ್, ಉಡುಪಿಯ ಅನುಷಾ ಮತ್ತು ಸುಧೀಕ್ಷಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಏಪ್ರಿಲ್‌ 15ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಇ ಎಸ್ ಇಂದಿರೇಶ್ ಅವರ ಪೀಠವು 2025-26ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ನಿಯಮದಂತೆ ಮೌಲ್ಯಮಾಪನ ನಡೆಸಬೇಕು. ಹಿಂದಿ ಸೇರಿ ತೃತೀಯ ಭಾಷೆಗಳ ವಿಷಯಗಳಿಗೆ ಗ್ರೇಡ್ ಬದಲಾಗಿ ಅಂಕ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ಅರ್ಜಿ ಇತ್ಯರ್ಥ ಮಾಡಿತ್ತು.‌

Justice E S Indiresh
Justice E S Indiresh

ಈ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಹೈಕೋರ್ಟ್‌ಗೆ ಸರ್ಕಾರವು ಶುಕ್ರವಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್ಇಎಬಿ)  ನಿಯಮಗಳಿಗೆ ತಿದ್ದುಪಡಿ ತರಲು ಈಗಾಗಲೇ ಕರಡು ಅಧಿಸೂಚನೆಯನ್ನು ಏಪ್ರಿಲ್‌ 10ರಂದು ರಾಜ್ಯ ಸರ್ಕಾರ ತನ್ನ ವಿಶೇಷ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಈ ಅಂಶವನ್ನು  ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತರದೇ ಆದೇಶ ಪಡೆದುಕೊಂಡಿದ್ದಾರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ನ ವಿಭಾಗೀಯ ಪೀಠ ಈಗಾಗಲೇ ವಜಾಗೊಳಿಸಿ,  ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಈ ವಿಷಯವನ್ನು ಪ್ರಸ್ತುತ ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತರದೆ ಸತ್ಯಾಂಶ ಮರೆಮಾಚಿದ್ದಾರೆ ಎಂದು ಸರ್ಕಾರ ತನ್ನ ಮರು ಪರಿಶೀಲನಾ ಅರ್ಜಿಯಲ್ಲಿ ಪ್ರತಿಪಾದಿಸಿದೆ.

ಹಾಗೆಯೇ, ಮೂಲ ಅರ್ಜಿ ಸಂಬಂಧ‌  ನ್ಯಾಯಾಲಯಕ್ಕೆ ತನ್ನ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ  ಅವಕಾಶವನ್ನೇ ನೀಡಿಲ್ಲ. ಅರ್ಜಿದಾರರು ಕರಡು ಅಧಿಸೂಚನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ ಎಂದು  ಸರ್ಕಾರ ಆಕ್ಷೇಪಿಸಿದೆ.

ಹಿಂದಿ ಸೇರಿ ಎಲ್ಲಾ ತೃತೀಯ ಭಾಷೆ ಮತ್ತು ಎನ್ಎಸ್‌ಕ್ಯೂಎಫ್ ವಿಷಯಗಳಲ್ಲಿ 80ಕ್ಕಿಂತ ಅಧಿಕ ಅಂಕ ಪಡೆದರೆ ಎ ಶ್ರೇಣಿ, 50ರಿಂದ 79 ಅಂಕ ಪಡೆದರೆ ಬಿ ಶ್ರೇಣಿ, 49 ಕ್ಕಿಂತ ಕಡಿಮೆ ಅಂಕ ಪಡೆದರೆ ಸಿ ಶ್ರೇಣಿ ಎಂದು ಗ್ರೇಡ್ ನೀಡಲಾಗುತ್ತದೆ. ಆದರೆ, ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವುದಿಲ್ಲ ಎಂದು ಅರ್ಜಿಯಲ್ಲಿ  ಸರ್ಕಾರ ವಿವರಿಸಿದೆ.

ಅಲ್ಲದೇ, ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ನಡುವೆ ಸಮಾನ ಅವಕಾಶ ಕಲ್ಪಿಸಲು ಹಾಗೂ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲು ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್  ವಿಷಯಗಳಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡಲು ಉದ್ದೇಶಿಸಲಾಗಿದೆ. ಅಂಕದ ಬದಲು ಗ್ರೇಡ್ ನೀಡುವುದು ಸುಧಾರಣಾ ಕ್ರಮವಾಗಿದೆ. ಇದು ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ. ಸರ್ಕಾರದ ನಡೆಯಿಂದ ತೃತೀಯ ಭಾಷೆ ತಿರಸ್ಕಾರಕ್ಕೆ ಒಳಗಾಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ. ಆದ್ದರಿಂದ ಏಪ್ರಿಲ್‌ 15ರಂದು ಹೊರಡಿಸಿರುವ ಆದೇಶವನ್ನು ಮರು ಪರಿಶೀಲಿಸಬೇಕು ಎಂದು   ಸರ್ಕಾರ ತನ್ನ ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಿದೆ.

Kannada Bar & Bench
kannada.barandbench.com