ರಾಜ್ಯ ಸರ್ಕಾರವು ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ಎ ಗುಂಪಿಗೆ ಒಳಪಡುವ ಪಶು ಅಧಿಕಾರಿ ಹುದ್ದೆಗಳ ನೇಮಕಕ್ಕೆ ಚಾಲನೆ ನೀಡಿರುವ ಪ್ರಕ್ರಿಯೆಗೆ ತಡೆಯೊಡ್ಡಿದ 35 ಅರ್ಜಿದಾರರಿಗೆ ಈಚೆಗೆ ತಲಾ ₹25 ಸಾವಿರದಂತೆ ಒಟ್ಟು ₹8.75 ಲಕ್ಷವನ್ನು ಕರ್ನಾಟಕ ಹೈಕೋರ್ಟ್ ದಂಡವಾಗಿ ವಿಧಿಸಿದೆ.
ಮಂಡ್ಯದ ಸುನಿಲ್ ಜಿ ಸೇರಿದಂತೆ 35 ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ರಾಜೇಶ್ ರೈ ಕೆ ಅವರ ನೇತೃತ್ವದ ವಿಭಾಗೀಯ ಪೀಠವು ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಅರ್ಜಿದಾರರು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಒಂದು ತಿಂಗಳ ಒಳಗೆ ದಂಡದ ಮೊತ್ತ ಪಾವತಿಸಬೇಕು ಎಂದು ನಿರ್ದೇಶಿಸಿದೆ.
ಕರ್ನಾಟಕ ಪಶು ಸಂಗೋಪನಾ ಮತ್ತು ಪಶು ಸೇವೆಗಳು (ಪಶು ಅಧಿಕಾರಿಗಳ ನೇಮಕಾತಿ) (ವಿಶೇಷ) ನಿಯಮಗಳು 2022 ಅನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣದ (ಕೆಎಸ್‌ಎಟಿ) ಮುಂದೆ ಅರ್ಜಿ ಸಲ್ಲಿಸಿದ್ದರು. ಇದನ್ನು ಕೆಎಸ್‌ಎಟಿ ವಜಾ ಮಾಡಿತ್ತು. ಇದನ್ನು ಪರಿಶೀಲಿಸುವಂತೆ ಕೋರಿದ್ದ ಅರ್ಜಿಯನ್ನೂ 2023ರ ಜೂನ್‌ನಲ್ಲಿ ಕೆಎಸ್‌ಎಟಿ ವಜಾ ಮಾಡಿತ್ತು. ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ಅನ್ವಯ ನೇಮಕಾತಿ ಮಾಡಬೇಕು ಎಂದು ಕೆಎಸ್‌ಎಟಿ ಹೇಳಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಇದರ ವಿಚಾರಣೆ ನಡೆಸಿದ್ದ ಪೀಠವು ಕೆಎಸ್‌ಎಟಿ ನಿರ್ದೇಶನದ ಹಿನ್ನೆಲೆಯಲ್ಲಿ 2021ರ ನಿಯಮಗಳ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡುವ ಸರ್ಕಾರದ ಪ್ರಕ್ರಿಯೆಗೆ 2023ರ ಆಗಸ್ಟ್‌ನಲ್ಲಿ ಮಧ್ಯಂತರ ತಡೆ ವಿಧಿಸಿತ್ತು.
ಹುದ್ದೆಯ ಇತರೆ ಆಕಾಂಕ್ಷಿಗಳು ವಿಶೇಷ ನಿಯಮಗಳು 2022ರ ಕಾನೂನು ಸಿಂಧುತ್ವ ಪ್ರಶ್ನಿಸಿದಾಗ ಅರ್ಜಿದಾರರಾಗಿರುವ 35 ಮಂದಿ ಅದನ್ನು ಕೆಎಸ್‌ಎಟಿಯಲ್ಲಿ ಪ್ರಶ್ನಿಸಿಲ್ಲ. ಆದರೆ, ವಿಶೇಷ ನಿಯಮಗಳು 2022 ಅನ್ನು ಕೆಎಸ್‌ಎಟಿ ವಜಾ ಮಾಡಿದ ಹಿನ್ನೆಲೆಯಲ್ಲಿ ನೇರವಾಗಿ ಹೈಕೋರ್ಟ್ ಕದತಟ್ಟಿದ್ದಾರೆ ಎಂದು ಹೈಕೋರ್ಟ್ ಅಂತಿಮ ಆದೇಶದಲ್ಲಿ ಹೇಳಿದೆ.
ಕೆಎಸ್‌ಎಟಿ ಸಂಪರ್ಕಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿದ ನಂತರ ಅವರು ಕಾನೂನಿನ ಪ್ರಕಾರ ಆಯ್ಕೆ ಪ್ರಕ್ರಿಯೆ ಪ್ರಶ್ನಿಸುವುದಕ್ಕೆ ಬದಲಾಗಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ನೇಮಕಾತಿ ಪ್ರಕ್ರಿಯೆ ವಿಳಂಬಿಸುವ ಅರ್ಜಿದಾರರ ನಡತೆ ಮತ್ತು ಕ್ರಮವನ್ನು ಒಪ್ಪಲಾಗದು ಎಂದು ಹೈಕೋರ್ಟ್ ಹೇಳಿದ್ದು, ಅರ್ಜಿದಾರರ ಮರುಪರಿಶೀಲನಾ ಅರ್ಜಿ ತಿರಸ್ಕರಿಸಿರುವ ಕೆಎಸ್‌ಎಟಿ ಆದೇಶವನ್ನು ಎತ್ತಿ ಹಿಡಿದಿದೆ.