ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ 2021ಕ್ಕೆ ಮಾಡಲಾದ ಇತ್ತೀಚಿನ ತಿದ್ದುಪಡಿಗಳನ್ನು ಪ್ರಶ್ನಿಸಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದ ಯಾವುದೇ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತನಗೆ ಸುಳ್ಳು ಅಥವಾ ನಕಲಿ ಆನ್‌ಲೈನ್ ಸುದ್ದಿ ಎನಿಸುವುದನ್ನು ಪತ್ತೆ ಹಚ್ಚಿ ಟ್ಯಾಗ್ ಮಾಡುವ ಅಧಿಕಾರ ಉಳ್ಳ ಸತ್ಯ ಪರಿಶೀಲನಾ ಸಮಿತಿಯ ರಚನೆಗೆ ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಬಹುದು ಎಂದು ನಿಯಮಾವಳಿ 3ಕ್ಕೆ ಮಾಡಲಾದ ತಿದ್ದುಪಡಿಗಳನ್ನು ಅವರು ವಿಶೇಷವಾಗಿ ಪ್ರಶ್ನಿಸಿದ್ದಾರೆ.
ಹಾಗೆ ಪತ್ತೆ ಹಚ್ಚಲಾದ ಸುದ್ದಿಗಳಿಗೆ ಸಂಬಂಧಿಸಿದಂತೆ ಟೆಲಿಕಾಂ ಸೇವಾ ಪೂರೈಕೆದಾರರು ಮತ್ತು ಸಾಮಾಜಿಕ ಮಾಧ್ಯಮ ಮಧ್ಯಸ್ಥ ವೇದಿಕೆಗಳು ಕ್ರಮ ಕೈಗೊಳ್ಳಬೇಕು. ವಿಫಲವಾದರೆ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 79ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಪರಿಷ್ಕೃತ ನಿಯಮ 3(1)(b)(v) ಯನ್ನು ಪ್ರಶ್ನಿಸಿ ಕಮ್ರಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ತಿದ್ದುಪಡಿ ತರಲು ಅಗತ್ಯವಾದ ಯಾವುದಾದರೂ ವಾಸ್ತವಿಕ ಹಿನ್ನೆಲೆ ಅಥವಾ ತಾರ್ಕಿಕತೆ ಇತ್ತೆ ಎಂಬ ಕುರಿತು ಪ್ರತಿಕ್ರಿಯಿಸುವಂತೆ ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠ ಕೇಂದ್ರಕ್ಕೆ ಸೂಚಿಸಿದೆ.
ಕಮ್ರಾ ಅವರ ಅರ್ಜಿಯ ಪ್ರಮುಖಾಂಶಗಳು
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ತಿದ್ದುಪಡಿ ನಿಯಮಾವಳಿ 2023ರ ನಿಯಮ 3(i)(II)(ಎ)ಯು ಮಾಹಿತಿ ತಂತ್ರಜ್ಞಾನ ಕಾಯಿದೆಯ 79 ನೇ ವಿಧಿ ಮತ್ತು ಸಂವಿಧಾನದ 14 ಹಾಗೂ 19(1)(ಎ), (ಜಿ)ಯನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಘೋಷಿಸಬೇಕು.
ನಮ್ಮ ಸಂವಿಧಾನದ ಆಧಾರ ಸ್ತಂಭಗಳಲ್ಲಿ ಒಂದೆಂದು ಸುಪ್ರೀಂ ಕೋರ್ಟ್ ಪರಿಗಣಿಸಿರುವ ಯೋಚಿಸುವ ಹಕ್ಕು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರತಿವಾದಿ ನೇರ ಆಕ್ರಮಣ ಮಾಡುವುದರಿಂದ ಅವರು ನ್ಯಾಯಿಕ ಆಡಳಿತ ಮತ್ತು ಪ್ರಜಾಪ್ರಭುತ್ವದ ರಾಜತಾಂತ್ರಿಕತೆ ಮೇಲೆ ನೇರ ದಾಳಿ ಮಾಡಿದ್ದಾರೆ.
ಸಂವಿಧಾನದ 19ನೇ ವಿಧಿಯಡಿ ಒದಗಿಸಲಾದ ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದರಿಂದ ನಿಯಮಾವಳಿಗೆ ತಡೆ ನೀಡಬೇಕು.
ಈ ನಿಯಮಾವಳಿ ಜಾರಿಗೆ ತಂದ ಬಳಿಕ ಜನ ಸತ್ಯ ಪರಿಶೀಲನಾ ಸಮಿತಿಗೆ ಉತ್ತರದಾಯಿಗಳಾಗುತ್ತಾರೆ. ಅದನ್ನು ಯಾವಾಗ ಪೂರ್ವಾನ್ವಯ ಮಾಡಾಲಾಗುತ್ತದೆ ಎಂದು ಹೇಳಲಾಗದು.
ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ವಿವಿಧ ತೀರ್ಪುಗಳ ಪ್ರಕಾರ ಸಂವಿಧಾನದ 14 ಮತ್ತು 19(2)ನೇ ವಿಧಿಯನ್ನು ಇದು ಉಲ್ಲಂಘಿಸುತ್ತದೆ.
ಯಾವುದೇ ಶೋಕಾಸ್ ನೋಟಿಸ್, ನೋಟಿಸ್ ನೀಡದೆಯೂ ಕ್ರಮ ಕೈಗೊಳ್ಳಬಹುದಾದ್ದರಿಂದ ಈ ನಿಯಮಾವಳಿ ಸಾರ್ವಜನಿಕ ಹಿತಾಸಕ್ತಿ ಹಾಗೂ ಸ್ವಾಭಾವಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ.
ನಕಲಿ ಸುದ್ದಿಗಳನ್ನು ಎದುರಿಸಲು ಸಾಮಾಜಿಕ ಮಾಧ್ಯಮ ಜಾಲತಾಣಗಳು ನಿಯಮಗಳನ್ನು ಹೊಂದಿದ್ದು ಅವು ವಿವಿಧ ರಕ್ಷಣೆಗಳನ್ನು ನೀಡುತ್ತವೆ. ಆ ಸುರಕ್ಷತಾ ಕ್ರಮಗಳನ್ನು ತೆಗೆದುಹಾಕಿದರೆ, ಸಾಮಾಜಿಕ ಮಾಧ್ಯಮವನ್ನು ಅವಲಂಬಿಸಿರುವ ಅನೇಕರ ವೃತ್ತಿಜೀವನ ಕೊನೆಗೊಳ್ಳುತ್ತದೆ.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ತಿದ್ದುಪಡಿಗಳು ಇನ್ನೂ ಜಾರಿಗೆ ಬಂದಿಲ್ಲ ಹಾಗಾಗಿ ಮಧ್ಯಂತರ ಆದೇಶದ ಅಗತ್ಯವಿಲ್ಲ ಎಂದು ಹೇಳಿದರು. ಯಾವುದೇ ಮಧ್ಯಂತರ ಆದೇಶ ನೀಡದ ನ್ಯಾಯಾಲಯ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ಏಪ್ರಿಲ್ 21ಕ್ಕೆ ವಿಚಾರಣೆ ಮುಂದೂಡಿತು.