ಮನೆಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣ: ಪ್ರಜ್ವಲ್‌ ವಿರುದ್ಧ ವಿಚಾರಣೆಗೆ ಹೈಕೋರ್ಟ್‌ ಅಸ್ತು; ರೇವಣ್ಣಗೆ ರಕ್ಷಣೆ

ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವಿದ್ದರೆ ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.
Prajwal Revanna and HD Revanna
Prajwal Revanna and HD Revanna
Published on

ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್‌ ರೇವಣ್ಣ ವಿರುದ್ಧ ವಿಚಾರಣೆ ಮುಂದುವರಿಸಬಹುದು ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ.

ಮನೆಕೆಲಸದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಸಂಬಂಧ ದಾಖಲಾಗಿರುವ ಎಫ್‌ಐಆರ್‌, ಆನಂತರ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ಹಾಗೂ ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಜೆಡಿಎಸ್‌ ಶಾಸಕ ಹಾಗೂ ಪ್ರಜ್ವಲ್‌ ತಂದೆ ಎಚ್‌ ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ರೇವಣ್ಣ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ರೇವಣ್ಣ ಅವರಿಗೆ ಸೀಮಿತವಾಗಿ ಈ ನ್ಯಾಯಾಲಯ ಮಧ್ಯಂತರ ಆದೇಶ ಮಾಡಿದೆ. ಪ್ರಜ್ವಲ್‌ ವಿರುದ್ಧ ವಿಚಾರಣೆ ಮುಂದುವರಿಸಲು ಯಾವುದೇ ಅಡ್ಡಿಯಿಲ್ಲ” ಎಂದರು. ಇದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಧ್ವನಿಗೂಡಿಸಿದರು.

ಇದನ್ನು ಆಲಿಸಿದ ಪೀಠವು “ರೇವಣ್ಣ ವಿರುದ್ಧದ ನ್ಯಾಯಾಂಗ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗಿದೆ. ಹೀಗಾಗಿ, ಪ್ರಜ್ವಲ್‌ ವಿರುದ್ಧ ವಿಚಾರಣಾಧೀನ ನ್ಯಾಯಾಲಯವು ವಿಚಾರಣೆ ಮುಂದುವರಿಸಲು ಈ ಆದೇಶ ಅಡ್ಡಿಯಾಗದು” ಎಂದು ಸ್ಪಷ್ಟಪಡಿಸಿ, ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿತು.

ಪ್ರಜ್ವಲ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಪ್ರಜ್ವಲ್‌ ಜಾಮೀನು ಅರ್ಜಿಗೆ ಪ್ರೊ. ರವಿವರ್ಮ ಕುಮಾರ್‌ ಆಕ್ಷೇಪಿಸಿದರು. ಇದೇ ರೀತಿಯ ಆರೋಪಗಳನ್ನು ಒಳಗೊಂಡಿರುವ ಇನ್ನೊಂದು ಪ್ರಕರಣದಲ್ಲಿ ವಿಚಾರಣೆ ಬಹುತೇಕ ಮುಗಿದಿದೆ. ಆ ಪ್ರಕರಣ ಮುಗಿದ ತಕ್ಷಣ ಈ ಪ್ರಕರಣ ಕೈಗೆತ್ತಿಕೊಳ್ಳುವಂತೆ ವಿಚಾರಣಾಧೀನ ನ್ಯಾಯಾಲಯವನ್ನು ಕೋರಿದ್ದೇವೆ. ಇದು ಮುಂದಿನ ವಾರ ಅಥವಾ 15 ದಿನಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದರು.

ಇದಕ್ಕೆ ಆಕ್ಷೇಪಿಸಿದ ಪ್ರಜ್ವಲ್‌ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಪ್ರಜ್ವಲ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. 157 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಮೊದಲ ಜಾಮೀನು ಅರ್ಜಿ ತಿರಸ್ಕೃತವಾದಾಗಿನಿಂದ ಒಂದೇ ಒಂದು ಇಂಚೂ ಪ್ರಕರಣ ಮುಂದುವರಿದಿಲ್ಲ. ದೂರುದಾರೆಯ ಘನತೆಗೆ ಹಾನಿ ಮಾಡಿದ್ದೇವೆ ಎಂಬ ಆರೋಪವಿದೆ. ಸಂವಿಧಾನ 21ನೇ ವಿಧಿಯಡಿಯೂ ವಾದಿಸುತ್ತೇನೆ. ಪ್ರಜ್ವಲ್‌ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗದು” ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಜೂನ್‌ 24ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಎಚ್‌ ಡಿ ರೇವಣ್ಣ ಮತ್ತು ಪ್ರಜ್ವಲ್‌ ವಿರುದ್ಧ ಮೊದಲಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಆನಂತರ ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆ ಆಧರಿಸಿ ಪ್ರಜ್ವಲ್‌ ವಿರುದ್ಧ ಮಾತ್ರ ಅತ್ಯಾಚಾರ ಆರೋಪ ಸೇರಿಸಿ, ಸಕ್ಷಮ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡವು ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಿದೆ. ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾತ್ರ ಇದೆ. ಈ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು ದೊರೆತಿದ್ದು, ಅವರ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ನೀಡಿದೆ. ಇದೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್‌ ಜಾಮೀನು ಕೋರಿದ್ದಾರೆ.

Kannada Bar & Bench
kannada.barandbench.com