ಚುನಾವಣಾ ಬಾಂಡ್‌ ವಿವರ ಸಲ್ಲಿಕೆ: ಗಡುವು ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಎಸ್‌ಬಿಐ

ಏಪ್ರಿಲ್ 19ರಿಂದ ವಿತರಿಸಲಾದ ಚುನಾವಣಾ ಬಾಂಡ್‌ಗಳ ವಿವರವನ್ನು ಮಾರ್ಚ್ 6ರೊಳಗೆ (ನಾಳೆ) ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎಸ್‌ಬಿಐಗೆ ಈ ಹಿಂದೆ ನ್ಯಾಯಾಲಯ ನಿರ್ದೇಶನ ನೀಡಿತ್ತು.
ಚುನಾವಣಾ ಬಾಂಡ್‌, ಎಸ್‌ಬಿಐ ಹಾಗೂ ಸುಪ್ರೀಂ ಕೋರ್ಟ್
ಚುನಾವಣಾ ಬಾಂಡ್‌, ಎಸ್‌ಬಿಐ ಹಾಗೂ ಸುಪ್ರೀಂ ಕೋರ್ಟ್

ಏಪ್ರಿಲ್‌ 2019ರಿಂದ ಇಲ್ಲಿಯವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಒದಗಿಸಲು ವಿಧಿಸಲಾಗಿರುವ ಗಡುವನ್ನು ಜೂನ್ 30ರವರೆಗೆ ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಮಾರ್ಚ್ 6ರೊಳಗೆ (ನಾಳೆ) ವಿವರಗಳನ್ನು ಒದಗಿಸುವಂತೆ ನ್ಯಾಯಾಲಯ ಸೂಚಿಸಿದ್ದ ಹಿನ್ನೆಲೆಯಲ್ಲಿ ವಕೀಲ ಸಂಜಯ್ ಕಪೂರ್ ಅವರ ಮೂಲಕ ಅರ್ಜಿ ಸಲ್ಲಿಸಿರುವ ಎಸ್‌ಬಿಐ ಗಡುವಿನೊಳಗೆ ಮಾಹಿತಿ ಒದಗಿಸಲು ಕೆಲ ಪ್ರಾಯೋಗಿಕ ತೊಂದರೆಗಳಿವೆ ಎಂದಿದೆ.

ದಾನಿಗಳ ಗುರುತನ್ನು ಅನಾಮಧೇಯವಾಗಿಡುವುದಕ್ಕಾಗಿ ಕೈಗೊಂಡ ಕಠಿಣ ಕ್ರಮಗಳಿಂದಾಗಿ, ಚುನಾವಣಾ ಬಾಂಡ್‌ಗಳ ವಿವರ ಬಹಿರಂಗಪಡಿಸುವ ಪ್ರಕ್ರಿಯೆ ಸಂಕೀರ್ಣಮಯವಾಗಿದೆ. ವಿವಿಧ ಬ್ಯಾಂಕ್‌ ಶಾಖೆಗಳಲ್ಲಿ ಬಾಂಡ್‌ಗಳನ್ನು ಖರೀದಿಸಲಾಗಿದ್ದು ಅವುಗಳ ವಿವರಗಳನ್ನು ಒಂದು ಸ್ಥಳದಲ್ಲಿ ಕೇಂದ್ರೀಯವಾಗಿ ನಿರ್ವಹಿಸಿಲ್ಲ. ದಾನಿಗಳ ಅನಾಮಧೇಯತೆ ಕಾಪಾಡುವುದಕ್ಕಾಗಿ ಎರಡು ಭಿನ್ನ ಸಿಲೋಗಳಲ್ಲಿ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ಬಿ ಆರ್‌ ಗವಾಯಿ ಜೆ ಬಿ ಪರ್ದಿವಾಲಾ ಹಾಗೂ ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಐವರು ಸದಸ್ಯರ ಸಾಂವಿಧಾನಿಕ ಪೀಠ ಕಳೆದ ತಿಂಗಳು ಚುನಾವಣಾ ಬಾಂಡ್ ಯೋಜನೆಯನ್ನು ಸರ್ವಾನುಮತದಿಂದ ರದ್ದುಗೊಳಿಸಿತ್ತು.

ಚುನಾವಣಾ ಬಾಂಡ್‌ಗಳ ವಿತರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಎಸ್‌ಬಿಐಗೆ ಸೂಚಿಸಿದ್ದ ಅದು ವಿವಿಧ ನಿರ್ದೇಶನಗಳನ್ನು ನೀಡಿತ್ತು:

  1. ಚುನಾವಣಾ ಬಾಂಡ್‌ ವಿತರಣಾ ಬ್ಯಾಂಕ್, ಅಂದರೆ ಎಸ್‌ಬಿಐ ತಕ್ಷಣವೇ ಬಾಂಡ್‌ಗಳ ವಿತರಣೆಯನ್ನು ನಿಲ್ಲಿಸಬೇಕು;

  2. ಏಪ್ರಿಲ್ 12, 2019 ರಿಂದ ಇಲ್ಲಿಯವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಎಸ್‌ಬಿಐ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಬೇಕು.

  3. ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿಯೊಂದು ಚುನಾವಣಾ ಬಾಂಡ್‌ ವಿವರಗಳನ್ನು ಎಸ್‌ಬಿಐ (ಇಸಿಐಗೆ ನೀಡಿದ ಮಾಹಿತಿಯಲ್ಲಿ) ಬಹಿರಂಗಪಡಿಸಬೇಕು, ಇದರಲ್ಲಿ ನಗದೀಕರಣದ ದಿನಾಂಕ ಮತ್ತು ಚುನಾವಣಾ ಬಾಂಡ್‌ ಮೌಲ್ಯವನ್ನು ಸೇರಿಸಿರಬೇಕು. ಈ ಮಾಹಿತಿಯನ್ನು ಮಾರ್ಚ್ 6, 2024 ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.

  4. ಎಸ್‌ಬಿಐನಿಂದ ಈ ಮಾಹಿತಿ ಪಡೆದ ಒಂದು ವಾರದೊಳಗೆ, ಅಂದರೆ ಮಾರ್ಚ್ 13ರೊಳಗೆ ಇಸಿಐ ತನ್ನ ಅಧಿಕೃತ ಜಾಲತಾಣದಲ್ಲಿ ಆ ಮಾಹಿತಿಯನ್ನು ಪ್ರಕಟಿಸಬೇಕು.

  5. 15 ದಿನಗಳ ಸಿಂಧುತ್ವದ ಅವಧಿಯೊಳಗೆ ಇರುವ ಆದರೆ ರಾಜಕೀಯ ಪಕ್ಷಗಳು ಇನ್ನೂ ನಗದೀಕರಿಸದೆ ಇರುವ ಬಾಂಡ್‌ಗಳನ್ನು ಅವುಗಳನ್ನು ಖರೀದಿಸಿದ್ದವರಿಗೆ ರಾಜಕೀಯ ಪಕ್ಷಗಳು ಹಿಂತಿರುಗಿಸಬೇಕು.  ಬಾಂಡ್‌ ಹಿಂಪಡೆದ ಬಳಿಕ ಬಾಂಡ್‌ ವಿತರಿಸಿದ್ದ ‌ ಖರೀದಿದಾರರ ಖಾತೆಗೆ ಬ್ಯಾಂಕ್ ಹಣ ಹಿಂತಿರುಗಿಸಬೇಕು.

ದತ್ತಾಂಶವನ್ನು ಮರು ಹೊಂದಿಸಲು ಸಾಕಷ್ಟು ಯತ್ನ ಮಾಡಬೇಕಿದೆ ಎಂದಿರುವ ಎಸ್‌ಬಿಐ ದಾನಿಗಳ ಮಾಹಿತಿಯನ್ನು ಲಭ್ಯವಾಗಿಸಲು, ಪ್ರತಿ ಬಾಂಡ್ ವಿತರಣೆಯ ದಿನಾಂಕವನ್ನು ಪರಿಶೀಲಿಸಬೇಕಾಗುತ್ತದೆ ಮತ್ತು ನಿರ್ದಿಷ್ಟ ದಾನಿ ಖರೀದಿಸಿದ ದಿನಾಂಕದೊಂದಿಗೆ ಹೊಂದಿಸಬೇಕಾಗುತ್ತದೆ. ಈ ಪ್ರಕ್ರಿಯೆಯು ಮೊದಲ ಸಿಲೋ ಹೊಂದಿರುವ ಮಾಹಿತಿಯೊಂದಿಗೆ ಮಾತ್ರ ವ್ಯವಹರಿಸುತ್ತದೆ. ಈ ಬಾಂಡ್ ಗಳನ್ನು ರಾಜಕೀಯ ಪಕ್ಷಗಳು ತಮ್ಮ ಗೊತ್ತುಪಡಿಸಿದ ಬ್ಯಾಂಕ್ ಖಾತೆಗಳಲ್ಲಿ ರಿಡೀಮ್ ಮಾಡಿವೆ. ಅದರಂತೆ ಈ ಮಾಹಿತಿಯನ್ನು ಎರಡನೇ ಸಿಲೋವನ್ನು ರೂಪಿಸುವ ಬಾಂಡ್ ವಿಮೋಚನಾ ಮಾಹಿತಿಯೊಂದಿಗೆ ಹೊಂದಿಸಬೇಕಾಗುತ್ತದೆ" ಎಂದು ಹೆಚ್ಚಿನ ಸಮಯಾವಕಾಶ ಅಗತ್ಯವಿರುವುದಕ್ಕೆ ವಿವರಣೆ ನೀಡಿದೆ.

ಚುನಾವಣಾ ಬಾಂಡ್‌ ಎಂಬುದು ಭರವಸೆಯ ಪತ್ರದ ರೂಪದಲ್ಲಿದ್ದು, ಅದನ್ನು ಯಾವುದೇ ವ್ಯಕ್ತಿ, ಕಂಪೆನಿ, ಸಂಸ್ಥೆ ಅಥವಾ ಸಂಘಟನೆಯ ವ್ಯಕ್ತಿಗಳು ಖರೀದಿಸಬಹುದಾಗಿತ್ತು. ಆ ವ್ಯಕ್ತಿ ಅಥವಾ ಸಂಸ್ಥೆಯು ಭಾರತೀಯತೆಯನ್ನು ಹೊಂದಿರಬೇಕು ಎಂಬುದಷ್ಟೇ ಪ್ರಧಾನ ನಿಯಮವಾಗಿತ್ತು. ಚುನಾವಣಾ ಬಾಂಡ್‌ ವಿಭಿನ್ನ ಬಗೆಯಲ್ಲಿದ್ದು, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ಅವುಗಳನ್ನು ನೀಡಲಾಗುತ್ತಿತ್ತು.

Kannada Bar & Bench
kannada.barandbench.com