ಕಾನೂನು ಪದವೀಧರನಿಗೆ ಅದನ್ನು ಹೊಂದಲು ಅನರ್ಹತೆ ಇದೆ ಎಂಬ ಕಾರಣದಡಿ ಕೆಎಸ್‌ಬಿಸಿ ಪ್ರಶ್ನಿಸಲಾಗದು: ಹೈಕೋರ್ಟ್

ವಿಶ್ವವಿದ್ಯಾಲಯವು ಅರ್ಜಿದಾರರಿಗೆ ತಾತ್ಕಾಲಿಕ ಪದವಿ ಮತ್ತು ಘಟಿಕೋತ್ಸವ ಪ್ರಮಾಣಪತ್ರಗಳನ್ನು ನೀಡಿದ್ದರಿಂದ ಅರ್ಹತೆಯ ಊಹೆಯ ಆಧಾರವನ್ನು ನ್ಯಾಯಾಲಯ ಎತ್ತಿಹಿಡಿದಿದೆ.
Karnataka State Bar Council
Karnataka State Bar Council

ಕಾನೂನು ಪದವಿ ಪ್ರಮಾಣಪತ್ರ ಪಡೆಯಲು ಪದವಿ ಪಡೆದವರು ಅರ್ಹರಲ್ಲ ಎಂಬ ಕಾರಣಕ್ಕೆ ಅದನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಪ್ರಶ್ನಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಶೆಲ್ಹಾನ್ ವಿರುದ್ಧ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಮತ್ತು ಇತರರು].

ಅರ್ಜಿದಾರರಿಗೆ ವಿಶ್ವವಿದ್ಯಾಲಯವು ತಾತ್ಕಾಲಿಕ ಪದವಿ ಮತ್ತು ಘಟಿಕೋತ್ಸವ ಪ್ರಮಾಣಪತ್ರ ನೀಡಿರುವುದರಿಂದ ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರು ಅರ್ಹತೆಯ ಊಹೆಯನ್ನು ಎತ್ತಿಹಿಡಿದರು.

"ವಿಶ್ವವಿದ್ಯಾಲಯವು ಅರ್ಜಿದಾರರಿಗೆ ತಾತ್ಕಾಲಿಕ ಪದವಿ ಪ್ರಮಾಣಪತ್ರ ಮತ್ತು ಘಟಿಕೋತ್ಸವ ಪ್ರಮಾಣಪತ್ರವನ್ನು ನೀಡಿರುವಾಗ, ಪ್ರಮಾಣಪತ್ರವನ್ನು ನೀಡಲು ಅಭ್ಯರ್ಥಿಯು ಅರ್ಹರು ಎನ್ನುವ ಊಹೆ ಇದೆ. ಪ್ರಮಾಣಪತ್ರ ಪಡೆಯಲು ಅನರ್ಹರು ಎನ್ನುವ ಆಧಾರದಲ್ಲಿ ಸೂಕ್ತ ಪ್ರಾಧಿಕಾರ ಅಥವಾ ನ್ಯಾಯಾಲಯವು ಪ್ರಮಾಣಪತ್ರವನ್ನು ರದ್ದುಗೊಳಿಸದ ಹೊರತು ಅದನ್ನು ಪ್ರಶ್ನಿಸುವುದು ಯಾವುದೇ ಪ್ರಾಧಿಕಾರಕ್ಕೆ ಸಾಧ್ಯವಿಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

Justice Ashok S Kinagi
Justice Ashok S Kinagi

ಬೀದರ್‌ನ ಸಿವಿಲ್ ನ್ಯಾಯಾಲಯದ ಮಾಜಿ ಸಹಾಯಕ ರಿಜಿಸ್ಟ್ರಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಆರಂಭದಲ್ಲಿ ಟೈಪಿಸ್ಟ್ ಆಗಿ ನೇಮಕಗೊಂಡ ನಂತರ, ಅವರು ಎಲ್ಎಲ್‌ಬಿ ಕೋರ್ಸ್ ಮಾಡಲು ನಿರ್ಧರಿಸಿದರು ಮತ್ತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅದಕ್ಕೆ ಅನುಮತಿ ನೀಡಿದ್ದರು.

ಹೀಗಾಗಿ, ಅವರು 2000ನೇ ವರ್ಷದಲ್ಲಿ ಕೋರ್ಸ್‌ಗೆ ಸೇರಿ, ಯಶಸ್ವಿಯಾಗಿ ಪೂರ್ಣಗೊಳಿಸಿದರು. ಅದರಂತೆ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಘಟಿಕೋತ್ಸವ ಪ್ರಮಾಣಪತ್ರ ಪ್ರದಾನ ಮಾಡಲಾಗಿತ್ತು.

2018ರಲ್ಲಿ ನಿವೃತ್ತರಾದ ನಂತರ, ಅವರು ವಕೀಲರಾಗಿ ನೋಂದಾಯಿಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಸಂಪರ್ಕಿಸಿದ್ದರು. ಆದರೆ, ಅವರು ಪದವಿ ಪ್ರಮಾಣಪತ್ರ ಪಡೆಯಲು ಅರ್ಹರಲ್ಲ ಎಂಬ ಕಾರಣ ನೀಡಿ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಭಾರತೀಯ ವಕೀಲರ ಪರಿಷತ್‌ (ಬಿಸಿಐ) ನಿರ್ಣಯಕ್ಕೆ ಅನುಗುಣವಾಗಿ ಇದನ್ನು ಮಾಡಲಾಗಿದೆ ಎಂದು ಕೆಎಸ್‌ಬಿಸಿ ಹೇಳಿತ್ತು.

ವಿಶ್ವವಿದ್ಯಾಲಯಕ್ಕೆ ತನ್ನ ಅರ್ಹತೆಯ ಬಗ್ಗೆ ಯಾವುದೇ ಆತಂಕ ಇರಲಿಲ್ಲ ಮತ್ತು ಪರೀಕ್ಷೆ ಬರೆಯಲು ಹಾಗೂ ಅಂತಿಮವಾಗಿ ಪದವಿ ಪಡೆಯಲು ಅವಕಾಶ ನೀಡಿದೆ. ಕೆಎಸ್‌ಬಿಸಿ ಪದವಿ ಪ್ರಮಾಣಪತ್ರ ಪ್ರಶ್ನಿಸಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಈ ಆಧಾರದ ಮೇಲೆ, ಕೆಎಸ್‌ಬಿಸಿ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಮತ್ತೊಂದೆಡೆ, ಅರ್ಜಿದಾರರು ತಮ್ಮ ಎಲ್ಎಲ್‌ಬಿ ಕೋರ್ಸ್ ಸಮಯದಲ್ಲಿ ನ್ಯಾಯಾಲಯದಲ್ಲಿ ಉದ್ಯೋಗದಲ್ಲಿದ್ದರು ಮತ್ತು ಅವರು ಕಾಲೇಜು ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ತೋರಿಸಲು ಸಾಧ್ಯವಾಗಲಿಲ್ಲ ಎಂದು ಬಿಸಿಐ ಮತ್ತು ಕೆಎಸ್‌ಬಿಸಿ ವಾದಿಸಿದ್ದವು. ಆದ್ದರಿಂದ, ಹಾಜರಾತಿ ಕೊರತೆಯಿಂದಾಗಿ ಅರ್ಜಿದಾರರ ಅರ್ಜಿ ತಿರಸ್ಕರಿಸಲಾಗಿದೆ. ಈ ನೆಲೆಯಲ್ಲಿ ಅರ್ಜಿ ವಜಾಗೊಳಿಸುವಂತೆ ಕೋರಿದ್ದರು.

ಅರ್ಜಿದಾರರಿಗೆ ಪರೀಕ್ಷೆಗಳಿಗೆ ಹಾಜರಾಗಲು ವಿಶ್ವವಿದ್ಯಾಲಯವು ಅನುಮತಿ ನೀಡಿದೆ ಎಂದು ನ್ಯಾಯಾಲಯವು ಒತ್ತಿ ಹೇಳಿದೆ. ಅರ್ಜಿದಾರರು ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಪೂರೈಸಿದ್ದಾರೆ. ಆದ್ದರಿಂದ, ಅನರ್ಹತೆಯ ಆಧಾರದ ಮೇಲೆ ಪದವಿ ಪ್ರಮಾಣಪತ್ರವನ್ನು ಪ್ರಶ್ನಿಸುವುದು ಬೇರೆ ಯಾವುದೇ ಪ್ರಾಧಿಕಾರಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

"ಅರ್ಜಿ ತಿರಸ್ಕರಿಸುವುದು ಪ್ರಶ್ನೆಗಳ ಪೆಟ್ಟಿಗೆಯನ್ನು ತೆರೆಯುವುದಕ್ಕೆ ಅವಕಾಶ ಮಾಡಿಕೊಡಲಿದೆ. ವರ್ಷಗಳ ನಂತರ ಹಾಜರಾತಿ ಕೊರತೆ, ಆಂತರಿಕ ಪರೀಕ್ಷೆ, ಪರೀಕ್ಷೆ ಮತ್ತು ಮುಂತಾದ ಕಾರಣಗಳಿಗಾಗಿ ಪ್ರಮಾಣಪತ್ರ ಪ್ರಶ್ನಿಸಬಹುದು ಮತ್ತು ಪದವಿ ಮತ್ತು / ಅಥವಾ ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳು ಪ್ರಮಾಣಪತ್ರಗಳನ್ನು ಪ್ರಶ್ನಿಸುವವರನ್ನು ತೃಪ್ತಿಪಡಿಸಲು ಪೂರಕ ವಸ್ತುಗಳನ್ನು ಸೇರಿಸುವುದು ಅಸಾಧ್ಯ" ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, ನ್ಯಾಯಾಲಯವು ಅರ್ಜಿ ಪುರಸ್ಕರಿಸಿದೆ. ಕೆಎಸ್‌ಬಿಸಿ ಆದೇಶ ರದ್ದುಗೊಳಿಸಿದ ನ್ಯಾಯಾಲಯವು ಹೊಸದಾಗಿ ನೋಂದಣಿಗಾಗಿ ಅರ್ಜಿದಾರರ ಅರ್ಜಿಯನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುವಂತೆ ಕೆಎಸ್‌ಬಿಸಿಗೆ ನಿರ್ದೇಶನ ನೀಡಿತು.

ಅರ್ಜಿದಾರರ ಪರ ವಕೀಲ ಎಚ್ ಎಲ್ ಪ್ರದೀಪ್ ಕುಮಾರ್ ವಾದ ಮಂಡಿಸಿದ್ದರು. ಕೆಎಸ್‌ಬಿಸಿಯನ್ನು ವಕೀಲ ನಟರಾಜ್ ಜಿ. ಪ್ರತಿನಿಧಿಸಿದ್ದರು. ಬಿಸಿಐ ಪರವಾಗಿ ವಕೀಲ ಶ್ರೀಧರ್ ಪ್ರಭು ವಾದಿಸಿದ್ದರು.

[ಆದೇಶ ಓದಿ]

Attachment
PDF
Shelhan v Karnataka State Bar Council and Anr.pdf
Preview

Related Stories

No stories found.
Kannada Bar & Bench
kannada.barandbench.com