ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಮುಖ್ಯ ನ್ಯಾಯಮೂರ್ತಿಗೆ ಸಿಎಂ ಸಿದ್ದರಾಮಯ್ಯ ಪತ್ರ: ಎಎಬಿ ವಿರೋಧ

ಮಂಗಳೂರು ಸಂಚಾರಿ ಪೀಠ ಕಾರ್ಯಾರಂಭಿಸಲು ಅಗತ್ಯವಾದ 50,000 ಚದರ ಅಡಿ ಜಾಗವನ್ನು ಗುರುತಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರಿಗೆ ಬರೆದಿರುವ ಪತ್ರದಲ್ಲಿ ಸಿದ್ದರಾಮಯ್ಯ ವಿವರಿಸಿದ್ದಾರೆ.
Karnataka High Court
Karnataka High Court
Published on

ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್‌ ಪೀಠ ಆರಂಭಿಸಲು ಅಗತ್ಯವಾದ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಔಪಚಾರಿಕವಾಗಿ ಪತ್ರ ಬರೆದಿದ್ದಾರೆ.

ಕೆಲವು ದಿನಗಳಿಂದ ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಹಾಗೂ ಸಂಚಾರಿ ಪೀಠದ ಸಂಚಾಲಕ ಐವಾನ್‌ ಡಿಸೋಜಾ ಅವರು ಮಂಗಳೂರು ಮತ್ತು ಉಡುಪಿ ವಕೀಲರ ಜೊತೆ ಸೇರಿ ಸಾಕಷ್ಟು ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿಯವರು ಪತ್ರ ಬರೆದಿರುವುದು ಮಹತ್ವ ಪಡೆದಿದೆ.

ಮೇ 13ರಂದು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದಿರುವ ಪತ್ರದಲ್ಲಿ ಸಿದ್ದರಾಮಯ್ಯ ಅವರು ಪ್ರಸ್ತಾವನ್ನು ಪರಿಗಣಿಸುವಂತೆ ಕೋರಿದ್ದು, ಇದನ್ನು ಕಾರ್ಯಗತಗೊಳಿಸಲು ಎಲ್ಲಾ ತರಹದ ಸಹಕಾರ ನೀಡುವುದಾಗಿ ಹೇಳಿದ್ದಾರೆ.  ಆದರೆ, ಈ ಪ್ರಸ್ತಾವಕ್ಕೆ ಬೆಂಗಳೂರು ವಕೀಲರ ಸಂಘವು ತೀವ್ರ ವಿರೋಧ ವ್ಯಕ್ತಪಡಿಸಿದೆ. ಮೇ 18ರಂದು ಸಿಜೆಗೆ ಬರೆದಿರುವ ಪತ್ರದಲ್ಲಿಎಎಬಿಯು ಮಂಗಳೂರು ಸಂಚಾರಿ ಪೀಠ ಪ್ರಸ್ತಾವವನ್ನು ತಿರಸ್ಕರಿಸಬೇಕು ಎಂದು ಕೋರಿದೆ.

ಮಂಗಳೂರಿನಲ್ಲಿ ಹೈಕೋರ್ಟ್‌ನ ಸಂಚಾರಿ ಪೀಠ ಆರಂಭಿಸುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ನ್ಯಾಯದಾನ ಪಡೆಯಲು ಅನುಕೂಲವಾಗಲಿದ್ದು, ಬೆಂಗಳೂರಿನ ಪ್ರಧಾನ ಪೀಠದ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಸಿಎಂ ವಿವರಿಸಿದ್ದಾರೆ.

ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಬಲವಾದ ಕರಾವಳಿ ಕರ್ನಾಟಕವು ರಾಜ್ಯದ ಆರ್ಥಿಕತೆ, ಶಿಕ್ಷಣ, ಉದ್ಯಮ ಮತ್ತು ಸಾಂಸ್ಕೃತಿಕ ಪರಂಪರೆಗೆ ಮಹತ್ವದ ಕೊಡುಗೆ ನೀಡುತ್ತಿವೆ. ಇಷ್ಟಾಗಿಯೂ ಕರಾವಳಿ ಜಿಲ್ಲೆಗಳ ವಕೀಲರು, ದಾವೆದಾರರು ದೂರದ ಬೆಂಗಳೂರಿಗೆ ಬರಬೇಕಿದ್ದು, ಇದರಿಂದ ಅವರಿಗೆ ಆರ್ಥಿಕ ಮತ್ತಿತರ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಲಾಗಿದೆ.

ಮಂಗಳೂರಿನಲ್ಲಿ ಸಂಚಾರಿ ಪೀಠ ಆರಂಭವಾಗುವುದರಿಂದ ಕರಾವಳಿ ಕರ್ನಾಟಕ ಭಾಗದ ಲಕ್ಷಾಂತರ ಜನರು ಸಶಕ್ತರಾಗಲಿದ್ದು, ಸಂಸ್ಥೆಯ ಮೇಲೆ ನಂಬಿಕೆ ಹೆಚ್ಚಲಿದೆ. ಇದರಿಂದ ನ್ಯಾಯದಾನ ದೂರವಾಗಿದೆ ಎಂಬ ಭಾವನೆ ಹೋಗಿ, ಎಲ್ಲರಿಗೂ ತಕ್ಷಣ ನ್ಯಾಯ ದೊರೆಯಲಿದೆ ಎಂಬ ಸಂದೇಶ ರವಾನೆಯಾಗಲಿದೆ ಎಂದು ಹೇಳಲಾಗಿದೆ.

ಸಂಚಾರಿ ಪೀಠದ ಆರಂಭವು ನ್ಯಾಯಾಂಗ ಸೌಲಭ್ಯದ ವಿಕೇಂದ್ರೀಕರಣದ ನಿಟ್ಟಿನಲ್ಲಿ ಸುಧಾರಣಾ ಕ್ರಮವಾಗಲಿದ್ದು, ಕಾಲಮಿತಿಯಲ್ಲಿ ದುಬಾರಿಯಿಲ್ಲದೇ ನ್ಯಾಯದಾನಕ್ಕೆ ಅವಕಾಶ ಕಲ್ಪಿಸಿದಂತಾಗಲಿದೆ. ಮಂಗಳೂರು ಜಿಲ್ಲಾಧಿಕಾರಿಯ ಹಳೆಯ ಕಟ್ಟಡವು 50,000 ಚದರ ಅಡಿ ಇದ್ದು, ಪೀಠದ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಇಲ್ಲಿ ಎಲ್ಲಾ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ನ್ಯಾಯಮೂರ್ತಿಗಳಿಗೆ ವಸತಿ ಸೌಲಭ್ಯ, ನಾಗರಿಕ, ಆಡಳಿತಾತ್ಮಕ ಮತ್ತು ವ್ಯವಸ್ಥಾಪನಾ ಸೌಲಭ್ಯ ಸಿದ್ಧವಾಗಿದ್ದು, ಸಂಚಾರಿ ಪೀಠದ ಕಾರ್ಯನಿರ್ವಹಣೆಗೆ ಎಲ್ಲವೂ ಲಭ್ಯವಾಗಲಿದೆ ಎಂದು ವಿವರಿಸಲಾಗಿದೆ.

ಈ ನಡುವೆ, ಮಂಗಳೂರು ಸಂಚಾರಿ ಪೀಠದ ಸಂಚಾಲಕ ಐವಾನ್‌ ಡಿಸೋಜಾ ಅವರು ಈಚೆಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಹಳೆಯ ಜಿಲ್ಲಾಧಿಕಾರಿ ಕಟ್ಟಡದ ನವೀಕರಣಕ್ಕೆ ₹3 ಕೋಟಿ ಬಿಡುಗಡೆ ಮಾಡಲು ಮನವಿ ಸಲ್ಲಿಸಿದ್ದಾರೆ.

ಇದೆಲ್ಲದರ ಮಧ್ಯೆ, ಎಎಬಿಯು ಸಂಚಾರಿ ಪೀಠದ ಅಗತ್ಯತೆ ಕುರಿತು ಸೂಕ್ತ ಅಧ್ಯಯನ ಅಥವಾ ವಿಶ್ಲೇಷಣೆ, ಪೂರಕ ಅಂಶಗಳನ್ನು ಪರಿಗಣಿಸದೇ ಈ ಕ್ರಮಕ್ಕೆ ಮುಂದಾಗುವುದು ಹೈಕೋರ್ಟ್‌ ಮಹತ್ವಕ್ಕೆ ಹಾನಿ ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಇದಕ್ಕೆ ರಾಜ್ಯದ ವಕೀಲರ ಸಮೂಹವು ತೀವ್ರ ದಾಖಲಿಸಿದೆ ಎಂದು ಹೇಳಿದೆ.

ಈ ಮಧ್ಯೆ, ಮೇ 20ರಂದು ಶಿವಮೊಗ್ಗದವರೇ ಆದ ಶಿಕ್ಷಣ ಸಚಿವ ಎಸ್‌ ಮಧು ಬಂಗಾರಪ್ಪ ಅವರ ನೇತೃತ್ವದ ನಿಯೋಗವು ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್‌ ಪೀಠ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.

Kannada Bar & Bench
kannada.barandbench.com