ಜಾಮೀನು ಮನವಿಗಳನ್ನು ಶೀಘ್ರ ಇತ್ಯರ್ಥ ಪಡಿಸಲು ಸಾಧ್ಯವಾಗದೆ ಇರುವುದಕ್ಕೆ ರಾಜ್ಯ ಸರ್ಕಾರದ 'ಹೇಗೋ ನಡೆಯುತ್ತೆ' ಎನ್ನುವ ಉದಾಸೀನ ಧೋರಣೆಯೇ ದೊಡ್ಡ ಅಡ್ಡಿಯಾಗಿದೆ ಎಂದು ಇತ್ತೀಚೆಗೆ ಉತ್ತರಾ ಖಂಡ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ [ಮಹಬೂಬ್ ಅಲಿ ವರ್ಸಸ್ ಉತ್ತರಾ ಖಂಡ ಸರ್ಕಾರ].
ಅನೇಕ ಬಾರಿ ಎಚ್ಚರಿಸಿದ ನಂತರವೂ ಜಾಮೀನು ಅರ್ಜಿ ವಿಚಾರಣೆಯನ್ನು ಇತ್ಯರ್ಥಪಡಿಸಲು ಸಹಕರಿಸಿದ ರಾಜ್ಯ ಸರ್ಕಾರದ ನಡೆಯ ವಿರುದ್ಧ ನ್ಯಾ. ರವೀಂದ್ರ ಮೈಥಾನಿ ಅವರು ತಮ್ಮ ತೀವ್ರ ಅಸಮಾಧಾನ ಹೊರಹಾಕಿದರು.
"ಪ್ರಸಕ್ತ ಪ್ರಕರಣದಲ್ಲಿ ರಾಜ್ಯ ಸರ್ಕಾರವು ತೋರಿರುವ ವರ್ತನೆಯು 'ಹೇಗೋ ನಡೆಯುತ್ತದೆ' ಎನ್ನುವ ಧೋರಣೆಯನ್ನು ತೋರಿಸುತ್ತದೆ. ಇದು ಕಾನೂನಾತ್ಮಕ ಆಡಳಿತಕ್ಕೆ ಅಪಾಯಕಾರಿಯಾದದ್ದು," ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಜಾಮೀನು ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡುವಲ್ಲಿ ರಾಜ್ಯ ಸರ್ಕಾರವೇ ದೊಡ್ಡ ತಡೆಯಾಗಿದೆ ಎಂದು ಸಹ ಏಕಸದಸ್ಯ ಪೀಠವು ತಿಳಿಸಿತು.
ಸುಳ್ಳು ಲೈಂಗಿಕ ದೌರ್ಜನ್ಯದ ದೂರು ನೀಡಿರುವ, ಸ್ವಯಂಪ್ರೇರಿತವಾಗಿ ಘಾಸಿ ಮಾಡಿರುವ, ಹಣಕ್ಕೆ ಬೇಡಿಕೆ ಇರಿಸಿರುವ ಆರೋಪವನ್ನು ಹೊತ್ತಿದ್ದ ವ್ಯಕ್ತಿಯೊಬ್ಬರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಪೊಲೀಸರು ತಮ್ಮ ಪ್ರತಿ-ಅಫಿಡವಿಟ್‌ನಲ್ಲಿ ಹಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸದಿರುವುದನ್ನು ನ್ಯಾಯಾಲಯವು ಗಮನಿಸಿತ್ತು. ಹಾಗಾಗಿ, ಕೆಲವು ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರಿಸಿ ಮತ್ತೊಂದು ಅಫಿಡವಿಟ್ ಸಲ್ಲಿಸಲು ನ್ಯಾಯಾಲಯ ಸೂಚಿಸಿತ್ತು.
ವಿಪರ್ಯಾಸವೆಂದರೆ, ಹಲವು ಬಾರಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದ ನಂತರವೂ ಚಿಕ್ಕದೊಂದು ಅಫಿಡವಿಟ್‌ಅನ್ನು ಸಲ್ಲಿಸಲು ರಾಜ್ಯ ಸರ್ಕಾರದಿಂದ ಸಾಧ್ಯವಾಗಲಿಲ್ಲ. ಅಲ್ಲದೆ, ಪ್ರತಿಬಾರಿಯೂ ಸರ್ಕಾರವನ್ನು ಬೇರೆ ಬೇರೆ ವಕೀಲರು ಪ್ರತಿನಿಧಿಸಿದ್ದರು.
ಇದರಿಂದ ಬೇಸತ್ತ ನ್ಯಾಯಾಲಯವು ತನ್ನ ಆದೇಶದಲ್ಲಿ, "ನಾಲ್ಕು ಬಾರಿ ದಿನಾಂಕವನ್ನು ನೀಡಿದ ನಂತರವೂ, ರಾಜ್ಯ ಸರ್ಕಾರವು ಸಣ್ಣದೊಂದು ಕೌಂಟರ್ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಏಕೆ ಸಲ್ಲಿಸಲಾಗಿಲ್ಲ ಎನ್ನುವ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ಇಲ್ಲ," ಎಂದು ದಾಖಲಿಸಿತು. ಸರ್ಕಾರದ ಉದಾಸೀನ ಧೋರಣೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿತು.