ಕೇವಲ ಎರಡು ಜಾತಿಗಳಿಗೆ ಮಾತ್ರವೇ ಆರ್ಥಿಕ ಅಭಿವೃದ್ಧಿ ಮಂಡಳಿಗಳ ರಚಿಸಿರುವುದು ಪಕ್ಷಪಾತವಲ್ಲವೇ?: ಹೈಕೋರ್ಟ್‌ ಪ್ರಶ್ನೆ

ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮತ್ತು ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮವನ್ನು ರಚಿಸಿರುವ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನ್ಯಾಯಪೀಠವು ತನ್ನ ಅಭಿಪ್ರಾಯ ವ್ಯಕ್ತಪಡಿಸಿತು.
ಕೇವಲ ಎರಡು ಜಾತಿಗಳಿಗೆ ಮಾತ್ರವೇ ಆರ್ಥಿಕ ಅಭಿವೃದ್ಧಿ ಮಂಡಳಿಗಳ ರಚಿಸಿರುವುದು ಪಕ್ಷಪಾತವಲ್ಲವೇ?: ಹೈಕೋರ್ಟ್‌ ಪ್ರಶ್ನೆ
Dr. BR Ambedkar and Karnataka High Court

ಕೇವಲ ಎರಡು ಜಾತಿಗಳಿಗೆ ಸೀಮಿತವಾಗಿ ಅರ್ಥಿಕ ದುರ್ಬಲವರ್ಗದವರ ಅಭಿವೃದ್ಧಿಗೆ ಮಂಡಳಿಗಳನ್ನು ರಚಿಸಿರುವುದರ ಬಗ್ಗೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರದ ಕಿವಿ ಹಿಂಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಹಾಗೂ ನ್ಯಾ. ಸೂರಜ್‌ ಗೋವಿಂದರಾಜ್‌ ಅವರಿದ್ದ ಪೀಠವು ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳು ಕೇವಲ ಎರಡು ಜಾತಿಗಳಿಗೇ ಸೀಮಿತವಾಗಿಲ್ಲ ಎನ್ನುವುದನ್ನು ರಾಜ್ಯ ಸರ್ಕಾರಕ್ಕೆ ನೆನಪು ಮಾಡಿತು. ಜಾತಿವಾರು, ಸಮುದಾಯವಾರು ಹಾಗೂ ಧರ್ಮವಾರು ಅನುಕೂಲಗಳನ್ನು ಕಲ್ಪಿಸುವ ಸಲುವಾಗಿ ಸರ್ಕಾರವು ನಿಗಮ, ಮಂಡಳಿಗಳನ್ನು ರಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ವಿಚಾರಣೆಯನ್ನು ಗುರುವಾರ ನಡೆಸುತ್ತಿದ್ದ ವೇಳೆ ನ್ಯಾಯಾಲಯವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು.

ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಮತ್ತು ಅರ್ಯವೈಶ್ಯ ಸಮುದಾಯ ಅಭಿವೃದ್ದಿ ನಿಗಮವನ್ನು ರಚಿಸಿರುವ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ಸರ್ಕಾರವು ತಂದಾಗ ಪೀಠವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು. ಮುಂದುವರೆದು, “ಕೇವಲ ಎರಡು ಜಾತಿಗಳಲ್ಲಿ ಮಾತ್ರವೇ ಆರ್ಥಿಕವಾಗಿ ದುರ್ಬಲವಾಗಿರುವವರನ್ನು ಗುರುತಿಸಲು ಜಗತ್ತಿನಲ್ಲಿ ನಿಮಗಿರುವ ಕಾರಣವಾದರೂ ಏನು? ಆರ್ಥಿಕ ದುರ್ಬಲರು ಎಲ್ಲ ಸಮುದಾಯಗಳಲ್ಲೂ ಇದ್ದಾರೆ,” ಎಂದು ಪೀಠ ಹೇಳಿತು.

ಆರ್ಥಿಕ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್‌) ಒಳಪಡುವ 144 ಜಾತಿಗಳಲ್ಲಿ ಕೇವಲ ಎರಡು ಜಾತಿಗಳಿಗೆ ಮಾತ್ರವೇ ಅಭಿವೃದ್ಧಿ ನಿಗಮ, ಮಂಡಳಿಗಳನ್ನು ರಚಿಸಿರುವುದೇಕೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ತಾನು ವಿಫಲವಾಗಿರುವುದಾಗಿ ಹೇಳುವ ಮೂಲಕ ನ್ಯಾಯಾಲಯವು ಸರ್ಕಾರದ ನಡೆಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿತು.

“ನಿಮ್ಮ ಆಕ್ಷೇಪಣೆಗಳಲ್ಲಿ ನೀವು ಆರ್ಯವೈಶ್ಯರು ವ್ಯಾಪಾರಿ ಸಮುದಾಯ ಎಂದಿದ್ದೀರಿ… ಅದೇ ರೀತಿ, ಬ್ರಾಹ್ಮಣ ಸಮುದಾಯದಲ್ಲಿ ಮಾತ್ರವೇ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಲು ಮುಂದಾಗಿರುವ ಕುರಿತಾಗಿಯೂ ಯಾವುದೇ ವಿವರಣೆಯನ್ನು ನೀಡಿಲ್ಲ,” ಎಂದು ನ್ಯಾಯಾಲಯವು ಸರ್ಕಾರದ ಕ್ರಮಕ್ಕೆ ಆಕ್ಷೇಪಿಸಿತು. ಆರ್ಥಿಕವಾಗಿ ದುರ್ಬಲವಾಗಿರುವ ಇತರ ಜಾತಿಗಳನ್ನು ಏಕೆ ಹೊರಗಿರಿಸಲಾಗಿದೆ ಎನ್ನುವುದಕ್ಕೆ ಯಾವುದೇ ವಿವರಣೆಯನ್ನು ಸರ್ಕಾರವು ನೀಡದಿರುವುದನ್ನು ಪೀಠ ಗಮನಿಸಿತು.

ಈ ಸಂಬಂಧ ನ್ಯಾಯಾಲಯಕ್ಕೆ ಉತ್ತರಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು, ಆರ್ಥಿಕವಾಗಿ ದುರ್ಬಲರನ್ನು ಗುರುತಿಸುವಾಗ ಜಾತಿಯನ್ನು ಪ್ರತ್ಯೇಕಿಸುವುದು ಅಸಾಧ್ಯವೆನ್ನುವ ಡಾ. ಅಂಬೇಡ್ಕರ್ ಅವರ ನಿಲುವನ್ನು ನ್ಯಾಯಾಲಯದ ಗಮನಕ್ಕೆ ತಂದರು.

“ಜಾತಿಯು ಕೇವಲ ಔದ್ಯೋಗಿಕ ಆದ್ಯತೆಯಾಗಿದೆ” ಎಂದು ಸುಪ್ರೀಂ ಕೋರ್ಟ್‌ ಹೇಳಿಕೆಗಳನ್ನು ಅವರು ಉಲ್ಲೇಖಿಸಿದರು. ಯಾವುದೇ ಆದ್ಯತೆಯನ್ನು ಈ ಎರಡು ಜಾತಿಗಳಿಗೆ ನೀಡಿಲ್ಲ, ಬದಲಿಗೆ ಅವು ಆರ್ಥಿಕವಾಗಿ ದುರ್ಬಲವಾಗಿರುವುದರಿಂದ ಅವುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಅಲ್ಲದೆ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳ ಅಡಿ ಬರುವ 144 ಜಾತಿಗಳಲ್ಲಿ ಕೆಲವು ಜಾತಿಗಳು ಕರ್ನಾಟಕದಲ್ಲಿ ಇಲ್ಲ ಮತ್ತೆ ಹಲವು ಜಾತಿಗಳು ಇದಾಗಲೇ ಹಿಂದುಳಿದ ವರ್ಗಗಳಡಿ ಗುರುತಿಸಲ್ಪಟ್ಟಿವೆ ಎಂದು ವಿವರಿಸಿದರು. ಆರ್ಥಿಕ ಅಭಿವೃದ್ಧಿ ಸಂಸ್ಥೆಗಳು ಬಡ ಮತ್ತು ಹಿಂದುಳಿದವರ ಏಳಿಗೆಗಾಗಿ ಶ್ರಮಿಸುತ್ತಿವೆ ಎನ್ನುವ ಮಾಹಿತಿ ನೀಡಿದರು.

ಈ ವೇಳೆ ನ್ಯಾಯಪೀಠವು, “ಆರ್ಥಿಕವಾಗಿ ದುರ್ಬಲವಾಗಿರುವ ಒಂದು ಜಾತಿಯು ಆರ್ಥಿಕವಾಗಿ ದುರ್ಬಲವಾಗಿರುವ ಮತ್ತೊಂದು ಜಾತಿಗಿಂತ ಹೆಚ್ಚು ದುರ್ಬಲ ಎಂದು ನೀವು ಹೇಳಬಹುದೇ?” ಎಂದು ನ್ಯಾಯಾಲಯವು ಪ್ರಶ್ನಿಸಿತು. ಇದಕ್ಕೆ ಅಡ್ವೊಕೇಟ್‌ ಜನರಲ್‌ ಅವರು ಶುಕ್ರವಾರದ ವಿಚಾರಣೆ ವೇಳೆ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.

ಪ್ರಕರಣದ ವಿಚಾರಣೆ ಇಂದು (ಶುಕ್ರವಾರ, ಜುಲೈ 2) ನಡೆಯಲಿದೆ.

No stories found.
Kannada Bar & Bench
kannada.barandbench.com