ಅಸಾಧಾರಣ ಸಂದರ್ಭಗಳಲ್ಲಿ ವಿದ್ಯುತ್‌ ಉತ್ಪಾದಕರಿಗೆ ನಿರ್ದೇಶಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೂ ಉಂಟು: ಹೈಕೋರ್ಟ್‌

2023ರಲ್ಲಿ ಮಾನ್ಸೂನ್‌ ವೈಫಲ್ಯದಿಂದ ಜಲಾಶಯಗಳು ಭರ್ತಿಯಾಗದೇ ವಿದ್ಯುತ್‌ ಉತ್ಪಾದನೆಯಲ್ಲಿ ಕುಂಠಿತವಾಗಿ ರಾಜ್ಯ ಸರ್ಕಾರಕ್ಕೆ 3,000- 3,500 ಮೆಗಾ ವ್ಯಾಟ್‌ನಷ್ಟು ವಿದ್ಯುತ್‌ ಕೊರತೆಯಾಗಿತ್ತು. ಹೀಗಾಗಿ, ಸರ್ಕಾರವು ಕಂಪನಿಗಳಿಗೆ ಆದೇಶಿಸಿತ್ತು.
Justices Anu Sivaraman & K Rajesh Rai
Justices Anu Sivaraman & K Rajesh Rai
Published on

ಎರಡು ವರ್ಷಗಳ ಹಿಂದೆ ಬರಗಾಲದ ಹಿನ್ನೆಲೆಯಲ್ಲಿ ಉಂಟಾಗಿದ್ದ ವಿದ್ಯುತ್‌ ಬೇಡಿಕೆ ಸರಿದೂಗಿಸಲು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್‌ ಉತ್ಪಾದಕ ಕಂಪನಿಗಳಿಗೆ ಗರಿಷ್ಠ ಪ್ರಮಾಣದ ವಿದ್ಯುತ್‌ ಅನ್ನು ಸರ್ಕಾರದ ಗ್ರಿಡ್‌ಗೆ ಪೂರೈಸಬೇಕು ಎಂದು ಆದೇಶಿಸಿದ್ದ ರಾಜ್ಯ ಸರ್ಕಾದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದೆ. ಅಸಾಧಾರಣ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರಕ್ಕೆ ಇರುವಂತೆ ರಾಜ್ಯ ಸರ್ಕಾರಕ್ಕೂ ಆ ಅಧಿಕಾರ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

2024ರ ಮಾರ್ಚ್‌ 11ರಂದು ಏಕಸದಸ್ಯ ಪೀಠ ಮಾಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ಕೆ ರಾಜೇಶ್‌ ರೈ ಅವರ ವಿಭಾಗೀಯ ಪೀಠ ಈಚೆಗೆ ಪುರಸ್ಕರಿಸಿದೆ.

ವಿದ್ಯುತ್‌ ಕೊರತೆಯಂಥ ಅಸಾಧಾರಣ ಸಂದರ್ಭಗಳಲ್ಲಿ ರಾಜ್ಯದ ವ್ಯಾಪ್ತಿಯಲ್ಲಿರುವ ವಿದ್ಯುತ್‌ ಉತ್ಪಾದಕ ಕಂಪನಿಗಳಿಗೆ ರಾಜ್ಯದ ಗ್ರಿಡ್‌ಗೆ ವಿದ್ಯುತ್‌ ಪೂರೈಸುವಂತೆ ಆದೇಶಿಸಲು ಕೇಂದ್ರ ಸರ್ಕಾರಕ್ಕೆ ಇರುವಂತೆ ವಿದ್ಯುತ್‌ ಕಾಯಿದೆ ಸೆಕ್ಷನ್‌ 11ರ ಅಡಿ ರಾಜ್ಯ ಸರ್ಕಾರಕ್ಕೂ ಅಧಿಕಾರವಿದೆ ಎಂದು ಹೈಕೋರ್ಟ್‌ ಹೇಳಿದೆ.

“ರಾಜ್ಯದಲ್ಲಿ ವಿದ್ಯುತ್‌ ಉತ್ಪಾದಿಸಿ ಬೇರೆ ರಾಜ್ಯಗಳಿಗೆ ಕಂಪನಿಗಳು ವಿದ್ಯುತ್‌ ಪೂರೈಸಿದರೂ ಕೆಲವು ಸಂದರ್ಭದಲ್ಲಿ ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗದ ಅಡಿ ಸೂಕ್ತ ನಿರ್ದೇಶನ ಮತ್ತು ಪರಿಹಾರ ಖಾತರಿಪಡಿಸಲು ರಾಜ್ಯ ಸರ್ಕಾರವೇ ಸೂಕ್ತ ಸರ್ಕಾರವಾಗಿದೆ ಎಂಬುದು ಕಾಯಿದೆಯ ಸೆಕ್ಷನ್‌ 11ರ ಸುಸಂಬದ್ಧ ವ್ಯಾಖ್ಯಾನವಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಕಾಯಿದೆಯ ಸೆಕ್ಷನ್ 11ರ ಪ್ರಕಾರ ಅಸಾಧಾರಣ ಸಂದರ್ಭ, ಸನ್ನಿವೇಶಗಳು ಪ್ರಾದೇಶಿಕ ಸ್ವರೂಪದ್ದಾಗಿದ್ದು, ರಾಜ್ಯ ನಿರ್ದಿಷ್ಟ ಬಿಕ್ಕಟ್ಟುಗಳ ಸಮಯದಲ್ಲಿ ರಾಜ್ಯದೊಳಗೆ ಭೌತಿಕವಾಗಿ ನೆಲೆಗೊಂಡಿರುವ ವಿದ್ಯುತ್‌ ಉತ್ಪಾದಕ ಕಂಪನಿಗಳ ಮೇಲೆ ರಾಜ್ಯ ಸರ್ಕಾರಕ್ಕೆ ನಿಯಂತ್ರಣ ನೀಡುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಇದಕ್ಕೂ ಮುನ್ನ, ಏಕಸದಸ್ಯ ಪೀಠವು “ಕಾಯಿದೆಯ ಸೆಕ್ಷನ್‌ 1ರ ಅಡಿ ಅಸಾಧಾರಣ ಸಂದರ್ಭಗಳಲ್ಲಿ ಅಂತರ ರಾಜ್ಯ ವಿದ್ಯುತ್‌ ಪ್ರಸರಣದಲ್ಲಿ ತೊಡಗಿರುವ ವಿದ್ಯುತ್‌ ಉತ್ಪಾದನಾ ಕಂಪನಿಗಳಿಗೆ ನಿರ್ದೇಶನ ನೀಡಲು ಕೇಂದ್ರ ಸರ್ಕಾರ ಸೂಕ್ತ ಸರ್ಕಾರವಾಗಿದೆ ಎಂದು ಎನ್‌ಎಸ್‌ ಷುಗರ್ಸ್‌ ಲಿಮಿಟೆಡ್‌, ಚಾಮುಂಡೇಶ್ವರಿ ಷುಗರ್ಸ್‌ ಲಿಮಿಟೆಡ್‌ ಮತ್ತು ಅಲ್ಟಿಲಿಯಮ್‌ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತ್ತು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗ್ರಿಡ್‌ಗಳು ಷರತ್ತಿಗೆ ಒಳಪಟ್ಟು ರಫ್ತು ಮಾಡುವ ಗರಿಷ್ಠ ಪ್ರಮಾಣದ ವಿದ್ಯುತ್‌ ಅನ್ನು ರಾಜ್ಯದ ಗ್ರಿಡ್‌ಗಳಿಗೆ ಪೂರೈಸಬೇಕು ಎಂದು 2023ರ ಅಕ್ಟೋಬರ್‌ 16 ರಂದು ಮಾಡಿದ್ದ ಸರ್ಕಾರದ ಆದೇಶವನ್ನು ಏಕಸದಸ್ಯ ಪೀಠ ವಜಾಗೊಳಿಸಿತ್ತು. ಇದನ್ನು ರಾಜ್ಯ ಸರ್ಕಾರ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು.

ಪ್ರಕರಣದ ಹಿನ್ನೆಲೆ: ಮಾನ್ಸೂನ್‌ ವೈಫಲ್ಯದಿಂದ ಜಲಾಶಯಗಳು ಭರ್ತಿಯಾಗದೇ ವಿದ್ಯುತ್‌ ಉತ್ಪಾದನೆಯಲ್ಲಿ ಕುಂಠಿತವಾಗಿ ರಾಜ್ಯ ಸರ್ಕಾರಕ್ಕೆ 3,000- 3,500 ಮೆಗಾ ವ್ಯಾಟ್‌ನಷ್ಟು ವಿದ್ಯುತ್‌ ಕೊರತೆಯಾಗಿತ್ತು. ಇದರಿಂದ ರಾಜ್ಯ ಸರ್ಕಾರವು ಪ್ರತಿ ಯೂನಿಟ್‌ಗೆ ₹4.86 ನಂತೆ ತಾತ್ಕಾಲಿಕ ಟಾರಿಫ್‌ ಭಾಗವಾಗಿ ಗರಿಷ್ಠ ಪ್ರಮಾಣದ ವಿದ್ಯುತ್‌ ಅನ್ನು ಸರ್ಕಾರದ ಗ್ರಿಡ್‌ಗೆ ಪೂರೈಸುವಂತೆ ಎಲ್ಲಾ ವಿದ್ಯುತ್‌ ಉತ್ಪಾದಕ ಕಂಪನಿಗಳಿಗೆ 2023ರ ಅಕ್ಟೋಬರ್‌ 16 ರಂದು ಕಾಯಿದೆ ಸೆಕ್ಷನ್‌ 11 ರ ಅಡಿ ಆದೇಶ ಮಾಡಿತ್ತು.

Attachment
PDF
State of Karnataka Vs Altilium Energie Pvt Ltd & others
Preview
Kannada Bar & Bench
kannada.barandbench.com