ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ನಿವೃತ್ತ ನ್ಯಾ. ಶಿವರಾಜ್‌ ಪಾಟೀಲ್‌ ನೇಮಿಸಿದ ಸರ್ಕಾರ

ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ ಎಲ್‌ ಮಂಜುನಾಥ್‌ ಅವರು ಈಚೆಗೆ ತೀರಿಕೊಂಡಿದ್ದ ಹಿನ್ನೆಲೆಯಲ್ಲಿ ಖಾಲಿಯಿದ್ದ ಹುದ್ದೆ.
Justice (Rtd) Shivraj V. Patil
Justice (Rtd) Shivraj V. Patil
Published on

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ವಿ. ಪಾಟೀಲ್‌ ಅವರನ್ನು ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ರಾಜ್ಯ ಸರ್ಕಾರವು ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಶಿವರಾಜ್‌ ಪಾಟೀಲ್‌ ಅವರು 1940ರ ಜನವರಿ 12ರಂದು ಜನಿಸಿದರು. 1962ರ ಜುಲೈ 25ರಂದು ವಕೀಲರಾಗಿ ನೋಂದಾಯಿಸಿಕೊಂಡು ವೃತ್ತಿ ಜೀವನ ಆರಂಭಿಸಿದರು. ಕಲಬುರ್ಗಿಯಲ್ಲಿ ಪ್ರಾಕ್ಟೀಸ್‌ ಆರಂಭಿಸಿದ ಅವರು 1979ರಂದು ಬೆಂಗಳೂರಿಗೆ ಸ್ಥಳಾಂತರಗೊಂಡು, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಸದಸ್ಯರಾದರು. 1990ರ ಮಾರ್ಚ್‌ 29ರಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾದ ಶಿವರಾಜ್‌ ಪಾಟೀಲ್‌ ಅವರು, 29-04-1994ರಂದು ಮದ್ರಾಸ್‌ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದರು. 29-12-1998ರಿಂದ 19-01-1999ರ ವರೆಗೆ ಮದ್ರಾಸ್‌ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಾಟೀಲ್‌ ಅವರು 22-01-1999ರಂದು ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 15-03-2000ರಂದು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದಿದ್ದ ನ್ಯಾ. ಪಾಟೀಲ್‌ ಅವರು ಹಾಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿದ್ದಾರೆ. ನ್ಯಾ. ಪಾಟೀಲ್‌ ಅವರಿಗೆ ಕಾನೂನು ವಿಭಾಗದಲ್ಲಿ ಗೌರವ ಡಾಕ್ಟರೇಟ್‌ ಸಹ ಪ್ರಧಾನವಾಗಿದೆ.

ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ ಎಲ್‌ ಮಂಜುನಾಥ್‌ ಅವರು ಈಚೆಗೆ ತೀರಿಕೊಂಡ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷರ ಸ್ಥಾನ ಖಾಲಿಯಾಗಿತ್ತು.

Kannada Bar & Bench
kannada.barandbench.com