ಲೋಕಾಯುಕ್ತರು ಸಲ್ಲಿಸಿರುವ ತನಿಖಾ ವರದಿಗೆ ಸಂಬಂಧಿಸಿದಂತೆ ಕ್ರಮಕೈಗೊಂಡಿರುವ ಮಾಹಿತಿ ನೀಡಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಸೋಮವಾರ ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ತಿಳಿಸಿದೆ. ಕರ್ನಾಟಕ ಲೋಕಾಯುಕ್ತ ಕಾಯಿದೆಯ ನಿಬಂಧನೆಯ ಅನ್ವಯ 14 ಇಲಾಖೆಗಳು ಕ್ರಮಕೈಗೊಂಡಿರುವ ಕುರಿತು ವರದಿ ಸಲ್ಲಿಸಿವೆ ಎಂದು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠಕ್ಕೆ ಸಲ್ಲಿಸಿರುವ ಮೆಮೊದಲ್ಲಿ ರಾಜ್ಯ ಸರ್ಕಾರವು ವಿವರಿಸಿದೆ.
ನಿರ್ದಿಷ್ಟ ಕಾಲಾವಧಿಯಲ್ಲಿ ಕ್ರಮಕೈಗೊಂಡಿರುವುದರ ಕುರಿತು ಲೋಕಾಯುಕ್ತ ಕಾಯಿದೆಯ ನಿಬಂಧನೆಯ ಅನುಸಾರ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿಲ್ಲ ಎಂದು ಪಿಐಎಲ್ ಸಲ್ಲಿಸಿರುವ ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತ ಸಾಯಿ ದತ್ತ ಹೇಳಿದ್ದಾರೆ. ಲೋಕಾಯುಕ್ತ ಕಾಯಿದೆಯ ಸೆಕ್ಷನ್ 12 (1) ರ ಅಡಿ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರು ಕ್ರಮಕೈಗೊಳ್ಳುವಂತೆ ಶಿಫಾರಸ್ಸು ಮಾಡುತ್ತಾರೆ. ಕಾಯಿದೆಯ 12 (2)ರ ಪ್ರಕಾರ ಸಕ್ಷಮ ಪ್ರಾಧಿಕಾರವು ವಿಚಾರಣಾ ವರದಿಯಲ್ಲಿ ನಿರ್ದಿಷ್ಟಪಡಿಸಿದ ಸಮಯದಲ್ಲಿ ತೆಗೆದುಕೊಂಡ ಕ್ರಮದ ವರದಿಯನ್ನು ಸಲ್ಲಿಸಬೇಕು.
ಸದರಿ ಪ್ರಕರಣದಲ್ಲಿ ನೋಡಲ್ ಅಧಿಕಾರಿಯಾಗಿರುವ ಸಾರ್ವಜನಿಕ ಆಡಳಿತ ಮತ್ತು ಸಿಬ್ಬಂದಿ ಇಲಾಖೆಯ (ಡಿಎಪಿಆರ್-ವಿಚಕ್ಷಣಾ) ಜಂಟಿ ಕಾರ್ಯದರ್ಶಿ ಎಲ್ ಶಾರದಾ ಅವರು ಮೆಮೊ ಸಲ್ಲಿಸಿದ್ದಾರೆ. ಕಂದಾಯ, ನಗರಾಭಿವೃದ್ಧಿ ಸೇರಿದಂತೆ 10 ಇಲಾಖೆಗಳಿಂದ ಸೂಚನೆಗಳಿಗಾಗಿ ಕಾಯಲಾಗುತ್ತಿದೆ ಎಂದು ಮೆಮೊದಲ್ಲಿ ವಿವರಿಸಲಾಗಿದ್ದು, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಲಾಗಿದೆ.
342 ಪ್ರಕರಣಗಳಲ್ಲಿ ಕ್ರಮಕೈಗೊಂಡಿರುವ ಕುರಿತು ಸಂಬಂಧಪಟ್ಟ ಪ್ರಾಧಿಕಾರಗಳು ವರದಿ ಸಲ್ಲಿಸಿಲ್ಲ ಎಂದು ಮಾಹಿತಿ ಹಕ್ಕು ಕಾಯಿದೆ ಅಡಿ ಸಲ್ಲಿಸಲಾದ ಮನವಿಯಿಂದ ಬಹಿರಂಗವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಕರ್ನಾಟಕ ನಾಗರಿಕ ಸೇವೆಗಳ (ಸಿಸಿಎ) ಕಾನೂನಿನ ನಿಯಮ 14 (2) (ಡಿ) ಪ್ರಕಾರ ಕ್ರಮ ಕೈಗೊಳ್ಳಲು 932 ಪ್ರಕರಣಗಳಲ್ಲಿ ಸಕ್ಷಮ ಅಧಿಕಾರಿಗಳ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.