ಎಚ್‌ಡಿಕೆ ಭೂ ಒತ್ತುವರಿ ವಿವಾದ: ನೋಟಿಸ್‌ ಜಾರಿ ಮಾಡುವ ತಹಶೀಲ್ದಾರ್‌ ಅಧಿಕಾರದ ಬಗ್ಗೆ ನ್ಯಾಯಾಲಯದಲ್ಲಿ ವಾಗ್ವಾದ

ಭೂಕಂದಾಯ ಕಾಯಿದೆ 1964ರ ಸೆಕ್ಷನ್‌ 104ರ‌ಡಿ ರಾಮನಗರ ತಹಶೀಲ್ದಾರ್‌ ನೋಟಿಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್‌ ನೀಡಿದೆ.
Karnataka HC and H D Kumaraswamy
Karnataka HC and H D Kumaraswamy
Published on

ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿನ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನೀಡಿರುವ ನೋಟಿಸ್‌ ಸಂಬಂಧ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ದ ಬಲವಂತದ ಕ್ರಮಕೈಗೊಳ್ಳುವುದಿಲ್ಲ ಎಂದು ರಾಜ್ಯ‌ ಸರ್ಕಾರವು ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಭೂಕಂದಾಯ ಕಾಯಿದೆ 1964ರ ಸೆಕ್ಷನ್‌ 104ರ‌ಡಿ ರಾಮನಗರ ತಹಶೀಲ್ದಾರ್‌ ನೋಟಿಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಕಾಯಿದೆ ಸೆಕ್ಷನ್‌ 104 ಕುರಿತು ಸೂಚನೆ ಪಡೆಯಲು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಾಲಾವಕಾಶ ಕೇಳಿದ್ದಾರೆ. ಆಕ್ಷೇಪಾರ್ಹವಾದ ನೋಟಿಸ್‌ ಜಾರಿ ಮಾಡಲು ತಹಶೀಲ್ದಾರ್‌ಗೆ ಇರುವ ಅಧಿಕಾರ ಲಭ್ಯತೆ ಕುರಿತು ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ. ಅಲ್ಲಿಯವರೆಗೆ ಕುಮಾರಸ್ವಾಮಿ ವಿರುದ್ಧ ಆತುರದ ಕ್ರಮಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ. ವಿಚಾರಣೆಯನ್ನು ಪೀಠವು ಮಾರ್ಚ್‌ 27ಕ್ಕೆ ಮುಂದೂಡಿದೆ.

ಕುಮಾರಸ್ವಾಮಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು ಭೂಕಂದಾಯ ಕಾಯಿದೆ 1964ರ ಸೆಕ್ಷನ್‌ 104ರ ಅಡಿ ನೋಟಿಸ್‌ ನೀಡಲಾಗಿದೆ. ಆದರೆ, ಕಾಯಿದೆಗೆ 2025ರ ಜನವರಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಸೆಕ್ಷನ್‌ 67ರ ಪ್ರಕಾರ ಜಿಲ್ಲಾಧಿಕಾರಿ/ಉಪವಿಭಾಗಾಧಿಕಾರಿ ಮಾತ್ರ ನೋಟಿಸ್‌ ಜಾರಿ ಮಾಡಬಹುದು. ಇಲ್ಲಿ ತಹಶೀಲ್ದಾರ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಹೀಗಾಗಿ, ತಹಶೀಲ್ದಾರ್‌ ಮುಂದೆ ಕುಮಾರಸ್ವಾಮಿ ಅವರು ಹೋಗುವ ಅವಶ್ಯಕತೆ ಇಲ್ಲ. ಸೂಕ್ತ ಪ್ರಾಧಿಕಾರ ನೋಟಿಸ್‌ ನೀಡಿದರೆ ಅದಕ್ಕೆ ಪ್ರತಿಕ್ರಿಯೆ ಸಲ್ಲಿಸಲಾಗುವುದು. 1985ರಲ್ಲಿ ಭೂಮಿ ಖರೀದಿಸಲಾಗಿದ್ದು, ಸಂಬಂಧಿತ ಎಲ್ಲಾ ದಾಖಲೆಗಳು ಇವೆ” ಎಂದರು.

“ಕುಮಾರಸ್ವಾಮಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಈಗಾಗಲೇ ರಾಮನಗರ ತಹಶೀಲ್ದಾರ್‌ ನಿರ್ಧರಿಸಿಬಿಟ್ಟಿದ್ದಾರೆ. ಒತ್ತುವರಿ ಮಾಡಿರುವುದು ನಕ್ಷೆ ವರದಿಯಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ. ನಕ್ಷೆ ಮಾಡಲಾಗಿಲ್ಲ. ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಕುಮಾರಸ್ವಾಮಿ ಪಕ್ಷಕಾರರೇ ಆಗಿಲ್ಲ. ಸಂಬಂಧಿತ ಅಧಿಕಾರಿ ನೋಟಿಸ್‌ ಜಾರಿ ಮಾಡಲು ಏಕೆ ಹಿಂಜರಿಯುತ್ತಿದ್ದಾರೆ. ಅಲ್ಲಿ ತನಕ ಅವರು ಯಾವುದೇ ಆತುರದ ಕ್ರಮಕೈಗೊಳ್ಳಬಾರದು. 1985ರ ಕ್ರಯ ಪತ್ರ, ಮಂಜೂರಾತಿ ಪತ್ರವನ್ನು ಉಪವಿಭಾಗಧಿಕಾರಿ ಮುಂದಿಡಲಾಗುವುದು. ಅವರು ನೋಟಿಸ್‌ ಜಾರಿ ಮಾಡಲಿ, ಅವರೇಕೆ ಹಿಂಜರಿಯುತ್ತಿದ್ದಾರೆ?” ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್ ಎಂ. ರೋಣ್ ಅವರು “ನೋಟಿಸ್‌ ಜಾರಿ ಮಾಡಲು ತಹಶೀಲ್ದಾರ್‌ ವ್ಯಾಪ್ತಿ ಹೊಂದಿದ್ದಾರೆ. ಈ ಸಂಬಂಧ ಕಾಯಿದೆ ತಿದ್ದುಪಡಿಯನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ದಾಖಲೆ ನೀಡಿಲ್ಲ ಎಂಬುದು ಅವರ ಅಹವಾಲಾಗಿದೆ. ವಿಚಾರಣೆಗೆ ಹಾಜರಾದರೆ ಆ ಎಲ್ಲಾ ದಾಖಲೆಗಳನ್ನು ನೀಡಲಾಗುವುದು. ಒತ್ತುವರಿಯಾಗಿರುವ ಸರ್ಕಾರದ ಭೂಮಿ ವಶಕ್ಕೆ ಪಡೆಯಬೇಕು ಎಂದು ಸಮನ್ವಯ ಪೀಠವು ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಆದೇಶಿಸಿದೆ. ಇದಕ್ಕಾಗಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಐವರು ಅಧಿಕಾರಿಗಳ ಎಸ್‌ಐಟಿ ರಚಿಸಲಾಗಿದೆ” ಎಂದರು.

“ಮಾರ್ಚ್‌ 11ರಂದು ಕುಮಾರಸ್ವಾಮಿ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಪ್ರತಿಕ್ರಿಯಿಸಲು ಏಳು ದಿನ ಕಾಲಾವಕಾಶ ನೀಡಲಾಗಿದೆ. ತಹಶೀಲ್ದಾರ್‌ ಮುಂದೆ ಹಾಜರಾಗಿ ಅವರು ವಿವರಣೆ ನೀಡಬಹುದು. ಎರಡು ಸರ್ವೇ ನಡೆಸಲಾಗಿದೆ. ಆ ಸರ್ವೇ ಸ್ಕೆಚ್‌ ಅನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ಇದರಲ್ಲಿ ಕುಮಾರಸ್ವಾಮಿ ಅವರು ಆರು ಎಕರೆ ಭೂಮಿ ಒತ್ತುವರಿ ಮಾಡಿದ್ದು, ಇದರಲ್ಲಿ ಜಲಮೂಲಗಳೂ ಸೇರಿವೆ. ಈಚೆಗೆ ತಿದ್ದುಪಡಿಯಾಗಿರುವುದರ ಕುರಿತು ಸೂಚನೆ ಪಡೆಯಲಾಗುವುದು. ಸೋಮವಾರ ವಿಚಾರಣೆ ನಡೆಸಬಹುದು” ಎಂದರು.

ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಗ್ರಾಮದಲ್ಲಿನ ಸರ್ವೇ ನಂಬರ್‌ 7, 8, 9, 10, 16, 17 ಮತ್ತು 79ರಲ್ಲಿ ಭೂಮಿ ಒತ್ತುವರಿ ತೆರವು ಸಂಬಂಧ ಮಾರ್ಚ್‌ 18ರಂದು ತಹಶೀಲ್ದಾರ್‌ ನೋಟಿಸ್‌ ಜಾರಿ ಮಾಡಿದ್ದಾರೆ.

Kannada Bar & Bench
kannada.barandbench.com