ಪವನ್‌, ಧನರಾಜ್‌, ನಂದೀಶ್‌, ವಿನಯ್‌ ಜಾಮೀನು ರದ್ದತಿ ಕೋರಿದ ಸರ್ಕಾರ: ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದ ಹೈಕೋರ್ಟ್‌

ಬೆಂಗಳೂರಿನ 56ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು 2024ರ ಡಿಸೆಂಬರ್‌ 23ರಂದು ಆರೋಪಿಗಳಾದ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ಧನರಾಜ್‌, ನಂದೀಶ್‌ ಮತ್ತು ವಿ ವಿನಯ್‌ಗೆ ಜಾಮೀನು ಮಂಜೂರು ಮಾಡಿದೆ. ಇದನ್ನು ಸರ್ಕಾರ ಪ್ರಶ್ನಿಸಿದೆ.
Renukaswamy
Renukaswamy
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ಆರೋಪಿಗಳಾದ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ಧನರಾಜ್‌, ನಂದೀಶ್‌ ಮತ್ತು ವಿ ವಿನಯ್‌ಗೆ ಜಾಮೀನು ಮಂಜೂರು ಮಾಡಿ ಬೆಂಗಳೂರಿನ 56ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು 2024ರ ಡಿಸೆಂಬರ್‌ 23ರಂದು ಆದೇಶ ಹೊರಡಿಸಿತ್ತು. ಈ ಆದೇಶ  ಪ್ರಶ್ನಿಸಿರುವ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು (ರಾಜ್ಯ ಸರ್ಕಾರ) ಈ ನಾಲ್ವರು ಆರೋಪಿಗೆ ಮಂಜೂರು ಮಾಡಿರುವ ಜಾಮೀನು ರದ್ದತಿ ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ರಾಚಯ್ಯ ಅವರ ಏಕಸದಸ್ಯ ಪೀಠ ನಡೆಸಿತು.

ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು “ಪ್ರಕರಣವು ಅತ್ಯಂತ ಹೀನವಾಗಿದೆ. ನಟ ದರ್ಶನ್‌, ಪವಿತ್ರಾಗೌಡ ಸೇರಿದಂತೆ ಪ್ರಕರಣದ ಏಳು ಆರೋಪಿಗಳಿಗೆ ಹೈಕೋರ್ಟ್‌ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಇದರಿಂದ ಆ ಏಳು ಮಂದಿ ಆರೋಪಿಗಳು ಮರಳಿ ಜೈಲು ಸೇರಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪು ಆಧರಿಸಿ ಈ ನಾಲ್ವರು ಆರೋಪಿಗಳಿಗೆ ಮಂಜೂರಾಗಿರುವ ಜಾಮೀನು ರದ್ದುಪಡಿಸಬೇಕು” ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು “ಸುಪ್ರೀಂ ಕೋರ್ಟ್‌ ಆದೇಶವಿರುವುದು ನಿಜ. ಆದರೆ, ಅರ್ಜಿದಾರರಿಗೆ ಜಾಮೀನು ರದ್ದುಪಡಿಸಬೇಕು ಎಂಬ ಪ್ರಾಸಿಕ್ಯೂಷನ್‌ ಮನವಿಯನ್ನು ಕುರಿತಂತೆ ಪರಿಶೀಲನೆ ನಡೆಸಬೇಕಿದೆ. ಅರ್ಜಿ ಸಂಬಂಧ ಆರೋಪಿಗಳ ಪರ ವಕೀಲರು ತಮ್ಮ ಆಕ್ಷೇಪಣೆ ಸಲ್ಲಿಸಲಿ” ಎಂದಿತು.

“ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಮಾತ್ರಕ್ಕೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂಬುದೇನಿಲ್ಲ. ಕೋರ್ಟ್ ಮೆಟ್ಟಿಲೇರಿದ ಎಲ್ಲಾ ಕೊಲೆ ಪ್ರಕರಣಗಳನ್ನು ಒಂದೇ ರೀತಿ ತಾಳೆ ಹಾಕಲಾಗದು. ಯಾರೋ ಒಬ್ಬರನ್ನು ಗುರಿಯಾಗಿಸಿಕೊಂಡು ಜಾಮೀನು ರದ್ದುಪಡಿಸಿದರೆ, ಸಂವಿಧಾನದಲ್ಲಿ ಕೊಡಮಾಡಲಾಗಿರುವ ಮೂಲಭೂತ ಹಕ್ಕಿಗೆ ಚ್ಯುತಿಯಾಗುವುದಿಲ್ಲವೇ? ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇರುತ್ತದೆ. ಜಾಮೀನು ರದ್ದತಿಗೆ ವಿಚಾರವವು ಮೂಲಭೂತ ಹಕ್ಕು ಆದ ಜೀವಿಸುವ ಹಕ್ಕಿಗೆ ಸಂಬಂಧಪಟ್ಟಿರುತ್ತದೆ” ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ರೇಣುಕಾಸ್ವಾಮಿ ಕೊಲೆ: ಕಾಮಾಕ್ಷಿಪಾಳ್ಯ ಹಿಂದಿನ ಇನ್‌ಸ್ಪೆಕ್ಟರ್‌ ಗಿರೀಶ್‌ ನಾಯ್ಕ್‌ ಆರೋಪಿಯಾಗಿಸಲು ಸರ್ಕಾರ ಆಕ್ಷೇಪ

“ಜಾಮೀನು ಕೋರಿರುವ ಅರ್ಜಿಗಳ ಕುರಿತು ವಿವೇಚನೆ ಬಳಸಿ ತೀರ್ಮಾನ ಕೈಗೊಳ್ಳುವ ಅಧಿಕಾರ ಹೈಕೋರ್ಟ್‌ಗೆ ಇರುತ್ತದೆ. ಅಂದ ಮಾತ್ರಕ್ಕೆ ಈ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರಾತಿ ಆದೇಶ ಎತ್ತಿಹಿಡಿಯಲಾಗುತ್ತದೆ ಎಂದರ್ಥವಲ್ಲ. ವಿಶೇಷವಾಗಿ ಈ ಪ್ರಕರಣ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು,  ನ್ಯಾಯಾಲಯ ಅದರ ಪ್ರಭಾವಕ್ಕೂ ಒಳಗಾಗುವುದಿಲ್ಲ” ಎಂದು ಪೀಠ ಮೌಖಿಕವಾಗಿ ಹೇಳಿತು.

ಅಂತಿಮವಾಗಿ ಅರ್ಜಿ ಕುರಿತು ಲಿಖಿತ ಆಕ್ಷೇಪಣೆ/ ವಾದಾಂಶ ಸಲ್ಲಿಸುವಂತೆ ಪ್ರತಿವಾದಿಯಾಗಿರುವ ಪವನ್‌ ಹಾಗೂ ಇತರೆ ಮೂವರು ಆರೋಪಿಗಳಿಗೆ ನಿರ್ದೇಶಿಸಿ ವಿಚಾರಣೆಯನ್ನು ಮಾರ್ಚ್‌ 17ಕ್ಕೆ ಮುಂದೂಡಿತು.

Kannada Bar & Bench
kannada.barandbench.com