ರಾಜ್ಯ ಸರ್ಕಾರವು ಸಿಆರ್‌ಪಿಸಿ ಸೆಕ್ಷನ್‌ 372 ಅಡಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ: ಹೈಕೋರ್ಟ್‌

ಸಿಆರ್‌ಪಿಸಿ ಕಾಯಿದೆ ಸೆಕ್ಷನ್ 372 ಅಡಿ ಸಂತ್ರಸ್ತರಿಗೆ ಮಾತ್ರ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದೇ ರೀತಿ ಸೆಕ್ಷನ್ 378(1) ಮತ್ತು (3)ರಲ್ಲಿ ರಾಜ್ಯ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲು ಪ್ರತ್ಯೇಕ ಅವಕಾಶವಿದೆ ಎಂದಿರುವ ನ್ಯಾಯಾಲಯ.
High Court of Karnataka
High Court of Karnataka

ಅಪರಾಧ ದಂಡ ಸಂಹಿತೆ ಸೆಕ್ಷನ್ 372 ಅಡಿ ರಾಜ್ಯ ಸರ್ಕಾರವು ತಾನೇ ಸಂತ್ರಸ್ತ ಎಂದು ಪರಿಗಣಿಸಿ ಆರೋಪಿಗಳು ಖುಲಾಸೆಯಾಗಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಒಂದೊಮ್ಮೆ ಸರ್ಕಾರ ಮೇಲ್ಮನವಿ ಸಲ್ಲಿಸಬೇಕೆಂದಾದರೆ ಸೆಕ್ಷನ್ 378ರಡಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಕಡೂರಿನ ಅಧೀನ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಸಿಆರ್‌ಪಿಸಿ ಸೆಕ್ಷನ್ 372 ಆರೋಪಿಯನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಅಥವಾ ಆರೋಪಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣ ಕಡಿಮೆ ಎಂದು ಆಕ್ಷೇಪಿಸಿ ಸಂತ್ರಸ್ತರು ನ್ಯಾಯಾಲಯಗಳು ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಇರುವ ಅವಕಾಶವಾಗಿದೆ.

ಪ್ರಕರಣವನ್ನು ಆಲಿಸಿದ ನ್ಯಾಯಾಲಯವು “ಸಿಆರ್‌ಪಿಸಿ ಕಾಯಿದೆ ಸೆಕ್ಷನ್ 372 ಅಡಿ ಸಂತ್ರಸ್ತರಿಗೆ ಮಾತ್ರ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದೇ ರೀತಿ ಸೆಕ್ಷನ್ 378(1) ಮತ್ತು (3)ರಲ್ಲಿ ರಾಜ್ಯ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲು ಪ್ರತ್ಯೇಕ ಅವಕಾಶವಿದೆ. ಎರಡೂ ಬೇರೆ ಬೇರೆ ಸೆಕ್ಷನ್‌ಗಳು. ಹಾಗಾಗಿ ಸಂತ್ರಸ್ತರು ಸೆಕ್ಷನ್ 372 ಅಡಿ ಸಲ್ಲಿಸಬೇಕಾದ ಮೇಲ್ಮನವಿಯನ್ನು ಸರ್ಕಾರ ಸಲ್ಲಿಸಲು ಸಾಧ್ಯವಿಲ್ಲ. ಸರ್ಕಾರ ತಾನೇ ಸೆಕ್ಷನ್ 378 ಅಡಿ ಪ್ರತ್ಯೇಕ ಮೇಲ್ಮನವಿ ಸಲ್ಲಿಸಬಹುದಾಗಿದೆ” ಎಂದು ಆದೇಶಿಸಿತು. ಅಲ್ಲದೆ, ಅದೇ ಕಾರಣಕ್ಕಾಗಿ ವಿಚಾರಣಾಧೀನ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ಮಾಡಿದ್ದ ಆದೇಶವನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.

ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮಿಕಸ್ ಕ್ಯೂರಿಯಾಗಿದ್ದ ವಕೀಲ ಎಸ್ ಜಾವೇದ್ ಅವರು ರಾಜ್ಯ ಸರ್ಕಾರ ತಾನೇ ಬಾದಿತ ವ್ಯಕ್ತಿ ಎಂದು ಭಾವಿಸಿ ಸಿಆರ್‌ಪಿಸಿ ಸೆಕ್ಷನ್ 372 ಅಡಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೀಠಕ್ಕೆ ವಿವರಿಸಿದ್ದರು.

ಆ ವಾದ ಒಪ್ಪಿದ ಪೀಠವು ಅಪರಾಧ ಪ್ರಕರಣಗಳಲ್ಲಿ ವಿಚಾರಣಾಧೀನ ನ್ಯಾಯಾಲಯಗಳ ಆದೇಶಗಳನ್ನು ಪ್ರಶ್ನಿಸಲು ಸಂತ್ರಸ್ತರಿಗೆ ಮತ್ತು ಸರ್ಕಾರಕ್ಕೆ ಅಪರಾಧ ದಂಡ ಸಂಹಿತೆಯ ಬೇರೆ ಬೇರೆ ಸೆಕ್ಷನ್‌ಗಳಲ್ಲಿ ಅವಕಾಶ ನೀಡಲಾಗಿದೆ. ಹಾಗಾಗಿ ಅವುಗಳು ಅದೇ ಸೆಕ್ಷನ್‌ನಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಬೇಕು. ಸರ್ಕಾರ ಸಂತ್ರಸ್ತರಿಗೆ ಲಭ್ಯವಿರುವ ನಿಯಮದಲ್ಲಿ ಮೇಲ್ಮನವಿ ಸಲ್ಲಿಸಲಾಗದು ಎಂದು ಹೇಳಿದೆ.

Related Stories

No stories found.
Kannada Bar & Bench
kannada.barandbench.com