ಕರ್ನಾಟಕ ಹೈಕೋರ್ಟ್‌ನ ಕಚೇರಿಗಳಿಗೆ ಹೆಚ್ಚುವರಿ ಸ್ಥಳಾವಕಾಶ ಒದಗಿಸುವ ಸಲುವಾಗಿ ರಾಜ್ಯ ಚುನಾವಣಾ ಆಯೋಗದ ಹಳೆಯ ಕಚೇರಿಯಿರುವ ಸ್ಥಳದಲ್ಲಿ ತಳ ಮಹಡಿ ಸಹಿತ 10 ಮಹಡಿಗಳ ಕಟ್ಟಡ ನಿರ್ಮಾಣ ಮಾಡುವುದಕ್ಕೆ ರಾಜ್ಯ ಸರ್ಕಾರ ಅನುಮತಿಸಿರುವುದನ್ನು ವಿರೋಧಿಸಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಸ್ಥೆ (ಸಿಪಿಡಬ್ಲ್ಯುಎ) ಭಾನುವಾರ ಪ್ರತಿಭಟನೆ ಹಮ್ಮಿಕೊಂಡಿದೆ.
“ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸುವುದಕ್ಕೆ ಆಕ್ಷೇಪಿಸಿ ಕಬ್ಬನ್ ಪಾರ್ಕ್‌ನ ಕೇಂದ್ರೀಯ ಗ್ರಂಥಾಲಯದ ಸಮೀಪ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಉದ್ದೇಶಿತ ಕಟ್ಟಡ ನಿರ್ಮಾಣವು ಪಾರ್ಕ್ ಒತ್ತುವರಿಗೆ ಆಸ್ಪದ ನೀಡಲಿದ್ದು, ಇದರಿಂದ ಜನರು ಮತ್ತು ವಾಹನಗಳ ಸಂಚಾರ ಹೆಚ್ಚಾಗಲಿದೆ. ಹೀಗಾಗಿ, ಸರ್ಕಾರ ಆದೇಶ ಹಿಂಪಡೆಯಬೇಕು” ಎಂದು ಸಿಪಿಡಬ್ಲ್ಯುಎ ಅಧ್ಯಕ್ಷ ಹಾಗೂ ವಕೀಲ ಎಸ್ ಉಮೇಶ್ ಆಗ್ರಹಿಸಿದ್ದಾರೆ.
“ಹೈಕೋರ್ಟ್‌ನ ವಿಭಾಗೀಯ ಪೀಠವು 2019ರಲ್ಲಿ ಅನುಮತಿ ನಿರಾಕರಿಸಿದ್ದ ಹೊರತಾಗಿಯೂ ರಾಜ್ಯ ಸರ್ಕಾರವು 10 ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಅನುಮತಿಸಿದೆ. ಕಬ್ಬನ್ ಪಾರ್ಕ್ ವಿವಿಧ ಸಸ್ಯ ಪ್ರಭೇದಗಳಿಗೆ ಆವಾಸ ಸ್ಥಾನವಾಗಿದೆ. ಕಟ್ಟಡ ನಿರ್ಮಾಣದಿಂದ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಹೆಚ್ಚಳವಾಗಿ ಪರಿಸರಕ್ಕೆ ಹಾನಿಯಾಗುತ್ತದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
“ಕಬ್ಬನ್ ಪಾರ್ಕ್‌ನ ಒಟ್ಟು ವಿಸ್ತೀರ್ಣವು 300 ಎಕರೆ ಇದ್ದು, ಕಾಲಕ್ರಮೇಣ ವಿವಿಧ ವಾಣಿಜ್ಯ ಕಟ್ಟಡ ನಿರ್ಮಾಣ ಮತ್ತು ಕ್ಲಬ್‌ಗಳಿಂದಾಗಿ 162ಎಕರೆಗೆ ಸೀಮಿತವಾಗಿದೆ. ಈಗ ಹತ್ತು ಬಹುಮಹಡಿ ಕಟ್ಟಡದಿಂದ ಹಸಿರು ಹೊದಿಕೆ ಕಡಿಮೆಯಾಗಲಿದೆ” ಎಂದಿದ್ದಾರೆ.
ಹೈಕೋರ್ಟ್‌ನ ನೆಲಮಹಡಿಯ ಕಚೇರಿಗಳನ್ನು ಸ್ಥಳಾಂತರಿಸುವಂತೆ ಕೋರಿ ತುಮಕೂರು ಮೂಲದ ವಕೀಲ ರಮೇಶ್ ನಾಯಕ್ ಮತ್ತು ಶರಣ್ ದೇಸಾಯಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಈಚೆಗೆ ಇತ್ಯರ್ಥಪಡಿಸಿದ್ದ ವಿಭಾಗೀಯ ಪೀಠವು ಹೈಕೋರ್ಟ್‌ಗೆ ಕಟ್ಟಡ ಒದಗಿಸುವುದು ಸರ್ಕಾರದ ಕರ್ತವ್ಯ ಎಂದಿತ್ತು.
ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಹೈಕೋರ್ಟ್‌ನ ಕಚೇರಿಗಳಿಗೆ ಹೊಸದಾಗಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಸ್ತಾವಗಳನ್ನು ಸಲ್ಲಿಸಲಾಗಿತ್ತು. ಇದರಲ್ಲಿ ನಾಲ್ಕನೇ ಪ್ರಸ್ತಾವ (ತಳ ಮಹಡಿ ಸೇರಿದಂತೆ 10 ಮಹಡಿಗಳ ಕಟ್ಟಡ) ಅಂತಿಮವಾಗಿದೆ. ಈ ಸಂಬಂಧ ಹೈಕೋರ್ಟ್ ಕಟ್ಟಡ ಸಮಿತಿಯೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ನ್ಯಾಯಾಲತಕ್ಕೆ ವಿವರಿಸಿದ್ದನ್ನು ಪರಿಗಣಿಸಿ, ಪಿಐಎಲ್ ಇತ್ಯರ್ಥಪಡಿಸಿದ್ದನ್ನು ಸ್ಮರಿಸಬಹುದಾಗಿದೆ.