ಓಲಾ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ; ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶ

ಇಂಥದ್ದೇ ಪ್ರಕರಣದಲ್ಲಿ ಅರ್ಜಿದಾರರಿಗೆ ಬೈಕ್‌ ಟ್ಯಾಕ್ಸಿ ಸೇವೆ ನೀಡಲು ಅನುಮತಿಸಲಾಗಿದೆ. ಹೀಗಾಗಿ, ತಮಗೂ ಅನುಮತಿ ನೀಡಬೇಕು ಎಂದು ಕೋರಿದ ಅರ್ಜಿದಾರರ ಪರ ವಕೀಲರು.
Ola bike and Karnataka HC

Ola bike and Karnataka HC

ಓಲಾ ಬೈಕ್ ಟ್ಯಾಕ್ಸಿ ಸೇವೆಯ ವಿರುದ್ಧ ನ್ಯಾಯಾಲಯದ ಮುಂದಿನ ಆದೇಶವರೆಗೆ ಯಾವುದೇ ಕಠಿಣ ಕ್ರಮ ಜರುಗಿಸದಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೇ, ಕೇಂದ್ರ ಸರ್ಕಾರಕ್ಕೆ ತುರ್ತು ನೋಟಿಸ್‌ ಜಾರಿ ಮಾಡಿದೆ.

ಓಲಾ ಕ್ಯಾಬ್ ನಡೆಸುತ್ತಿರುವ ಎಎನ್ಐ ಟೆಕ್ನಾಲಜೀಸ್ ಸಂಸ್ಥೆ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ತೀಚೆಗೆ ನಡೆಸಿತು.

ಕರ್ನಾಟಕ ಸಾರಿಗೆ ಪ್ರಾಧಿಕಾರದ ಆಯುಕ್ತರು, ಹೆಚ್ಚುವರಿ ಸಾರಿಗೆ ಆಯುಕ್ತ ಮತ್ತು ಕಾರ್ಯದರ್ಶಿ, ರಾಜ್ಯ ಸಾರಿಗೆ ಇಲಾಖೆಯ ಕಾರ್ಯದರ್ಶಿ ಅವರು ಎಎನ್ಐ ಟೆಕ್ನಾಲಜೀಸ್ ಸಂಸ್ಥೆ ವಿರುದ್ಧದ ಯಾವುದೇ ತೆರನಾದ ಕಠಿಣ ಕ್ರಮಕೈಗೊಳ್ಳಬಾರದು ಎಂದು ಪೀಠವು ಕಟ್ಟುನಿಟ್ಟಿನ ಆದೇಶ ಮಾಡಿದೆ. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಬಿ ಜಿ ನಯನ ತಾರಾ ಅವರಿಗೆ ತುರ್ತು ನೋಟಿಸ್‌ ಸ್ವೀಕರಿಸುವಂತೆ ಪೀಠವು ಸೂಚಿಸಿದೆ.

“ಕರ್ನಾಟಕ ಹೈಕೋರ್ಟ್‌ ಸದರಿ ವಿಚಾರ ಕುರಿತಾದ ಮೇಲ್ಮನವಿಯಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ನೀಡುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸುವ ಮನವಿಗಳನ್ನು ಪರಿಗಣಿಸಬೇಕು ಎಂದು ಸಾರಿಗೆ ಇಲಾಖೆಗೆ ಸ್ಪಷ್ಟವಾದ ನಿರ್ದೇಶನ ನೀಡಿದೆ. ಇದನ್ನು ಆಧರಿಸಿ ಎಎನ್‌ಐ ಸಂಸ್ಥೆಯು 2021ರ ಏಪ್ರಿಲ್‌ 19ರಂದು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದೆ. ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು ಎಂದು 2021ರ ಆಗಸ್ಟ್‌ 11ರಂದು ನ್ಯಾಯಾಲಯವು ಮಧ್ಯಂತರ ಆದೇಶ ಮಾಡಿದೆ. ಹಾಲಿ ಪ್ರಕರಣದಲ್ಲಿ ಈ ಅರ್ಜಿದಾರರು ಬೈಕ್‌ ಟ್ಯಾಕ್ಸಿ ಸೇವೆಯನ್ನೇ ನೀಡುತ್ತಿರುವುದರಿಂದ ಅವರಿಗೂ ಮಧ್ಯಂತರ ರಕ್ಷಣೆಗೆಯ ಅಗತ್ಯವಿದೆ. ಹೀಗಾಗಿ, ಅರ್ಜಿಯಲ್ಲಿ ಉಲ್ಲೇಖಿಸಿರುವ ಪ್ರದೇಶಗಳಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ನೀಡಲಿರುವ ಎಎನ್‌ಐ ವಿರುದ್ಧ ಮುಂದಿನ ಆದೇಶವರೆಗೆ ಸಾರಿಗೆ ಇಲಾಖೆ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು” ಎಂದು ಪೀಠವು ಆದೇಶ ಮಾಡಿದೆ.

ಓಲಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಅರುಣ್‌ ಕುಮಾರ್‌ ಅವರು “ರಾಜ್ಯದಲ್ಲಿ ಓಲಾ ಕ್ಯಾಬ್ ಹಾಗೂ ಓಲಾ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿರುವ ಎಎನ್ಐ ಟೆಕ್ನಾಲಾಜೀಸ್ ಸಂಸ್ಥೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ಕೋರಿ ಸಾರಿಗೆ ಇಲಾಖೆಗೆ 2019ರ ಮಾರ್ಚ್‌ 2ರಂದು ಮೊದಲಿಗೆ ಅರ್ಜಿ ಸಲ್ಲಿಸಿತ್ತು. ಅನುಮತಿಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯು ಯಾವುದೇ ಆದೇಶ ಮಾಡಿರಲಿಲ್ಲ. ಆ ಬಳಿಕ ನ್ಯಾಯಾಲಯವು ಹಲವು ಆದೇಶಗಳನ್ನು ಮಾಡಿದ್ದು, ಮೇಲ್ಮನವಿಯೊಂದರಲ್ಲಿ ನ್ಯಾಯಾಲಯದ ಆದೇಶದ ಅನ್ವಯ 2021ರ ಏಪ್ರಿಲ್‌ 19ರಂದು ಎಎನ್ಐ ಟೆಕ್ನಾಲಾಜೀಸ್ ಸಂಸ್ಥೆಯು ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಲು ಅನುಮತಿ ನೀಡುವಂತೆ ಕೋರಿ ಕರ್ನಾಟಕ ಸಾರಿಗೆ ಪ್ರಾಧಿಕಾರದ ಆಯುಕ್ತರಿಗೆ ಮತ್ತೊಂದು ಮನವಿ ಮಾಡಿತ್ತು. ಆದರೆ, ಇದಕ್ಕೆ ಸಾರಿಗೆ ಆಯುಕ್ತರು ಅನುಮತಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಸಂಸ್ಥೆಯು ನ್ಯಾಯಾಲಯದ ಮೆಟ್ಟಿಲೇರಿತ್ತು. ಇಂಥದ್ದೇ ಪ್ರಕರಣದಲ್ಲಿ ಅರ್ಜಿದಾರರಿಗೆ ಬೈಕ್‌ ಟ್ಯಾಕ್ಸಿ ಸೇವೆ ನೀಡಲು ಅನುಮತಿಸಲಾಗಿದೆ. ಹೀಗಾಗಿ, ತಮಗೂ ಅನುಮತಿ ನೀಡಬೇಕು” ಎಂದು ಕೋರಿದರು.

Also Read
ಜೊಮ್ಯಾಟೊ, ಸ್ವಿಗ್ಗಿ, ಓಲಾ, ಉಬರ್ ಚಾಲಕರಿಗೆ ಸಾಮಾಜಿಕ ಭದ್ರತೆ ಕೋರಿ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಇದಕ್ಕೆ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಬೈಕ್‌ ಟ್ಯಾಕ್ಸಿ ಸೇವೆ ನೀಡಲು ಅರ್ಜಿದಾರರು ಸಲ್ಲಿಸಿರುವ ಕೋರಿಕೆಯನ್ನು ಏಕೆ ಪರಿಗಣಿಸಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಅಗತ್ಯ ಸೂಚನೆ ಪಡೆಯಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದನ್ನು ಒಪ್ಪದ ಪೀಠವು ಆದೇಶ ಮಾಡಿದೆ.

2004ರ ನವೆಂಬರ್ 5ರಂದು ಕೇಂದ್ರ ಸರ್ಕಾರ ಬೈಕ್ ಗಳನ್ನು ಕಾಂಟ್ರಾಕ್ಟ್ ಕ್ಯಾರೇಜ್ ಸರ್ವೀಸ್ ಗೆ ಬಳಸಲು ಅನುಮತಿ ನೀಡಿ ಹೊರಡಿಸಿರುವ ಅಧಿಸೂಚನೆ ಆಧರಿಸಿ, ಬೈಕ್ ಟ್ಯಾಕ್ಸಿ ಸರ್ವೀಸ್ ಗೆ ಅನುಮತಿ ಕೋರಲಾಗಿತ್ತು.

Related Stories

No stories found.
Kannada Bar & Bench
kannada.barandbench.com