ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ಮರು ನೇಮಕ ಮನವಿ ಪರಿಗಣಿಸಲು ಸರ್ಕಾರಕ್ಕೆ ಆ.1ರ ಗಡುವು ವಿಧಿಸಿದ ಹೈಕೋರ್ಟ್‌

“ವಿಕಾಸ್‌ ಕುಮಾರ್‌ ಹೊರತುಪಡಿಸಿ ಉಳಿದ ನಾಲ್ವರು ಪೊಲೀಸ್‌ ಅಧಿಕಾರಿಗಳು ಮರು ನೇಮಕಾತಿ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದ್ದಾರೆ. ವಿಕಾಸ್‌ ಕುಮಾರ್‌ ಅವರು ಮನವಿ ನೀಡಲಿ” ಎಂದ ಹಿರಿಯ ವಕೀಲ ರಾಜಗೋಪಾಲ್.
ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ಮರು ನೇಮಕ ಮನವಿ ಪರಿಗಣಿಸಲು ಸರ್ಕಾರಕ್ಕೆ ಆ.1ರ ಗಡುವು ವಿಧಿಸಿದ ಹೈಕೋರ್ಟ್‌
Published on

ಕಾಲ್ತುಳಿತ ಪ್ರಕರಣದಲ್ಲಿ ಅಮಾನತುಗೊಂಡಿರುವ ಹಿರಿಯ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ವಿಕಾಸ್‌ ಅವರು ಸೇವೆಗೆ ಮರು ನೇಮಕಕ್ಕೆ ಸಂಬಂಧಿಸಿದಂತೆ ನೀಡುವ ಮನವಿಯನ್ನು ರಾಜ್ಯ ಸರ್ಕಾರವು ಮುಂದಿನ ಆಗಸ್ಟ್‌ 1ರೊಳಗೆ (ಶುಕ್ರವಾರ) ಪರಿಗಣಿಸಬೇಕು. ಇಲ್ಲವಾದಲ್ಲಿ ತಾನು ಆದೇಶ ಮಾಡುವುದಾಗಿ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಸರ್ಕಾರಕ್ಕೆ ಎಚ್ಚರಿಸಿದೆ.

ಪೊಲೀಸ್‌ ಅಧಿಕಾರಿಗಳ ಅಮಾನತು ಬದಿಗೆ ಸರಿಸಿರುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಹಾಗೂ ಸಿಎಟಿ ಆದೇಶದಲ್ಲಿ ದುರ್ಘಟನೆಗೆ ತಾನೇ ಕಾರಣ ಎಂದಿರುವ ಅಂಶಗಳನ್ನು ಅಳಿಸಿ ಹಾಕುವಂತೆ ಕೋರಿರುವ ಆರ್‌ಸಿಬಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಟಿ ಎಂ ನದಾಫ್‌ ಅವರ ವಿಭಾಗೀಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಎಸ್‌ ರಾಜಗೋಪಾಲ್‌ ಅವರು “ವಿಕಾಸ್‌ ಕುಮಾರ್‌ ಹೊರತುಪಡಿಸಿ ಉಳಿದ ನಾಲ್ವರು ಪೊಲೀಸ್‌ ಅಧಿಕಾರಿಗಳು ಮರು ನೇಮಕಾತಿ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದ್ದಾರೆ. ವಿಕಾಸ್‌ ಕುಮಾರ್‌ ಅವರು ಮನವಿ ನೀಡಲಿ. ಈ ಮಧ್ಯೆ, ಹಾಲಿ ಅರ್ಜಿಯ ವಿಚಾರಣೆಯನ್ನು ಒಂದು ವಾರ ಅಥವಾ ಹತ್ತು ದಿನಗಳ ಕಾಲ ಮುಂದೂಡಬೇಕು” ಎಂದು ಕೋರಿದರು.

ಆಗ ಪೀಠವು “ನಾಳೆಯೇ ವಿಕಾಸ್‌ ಕುಮಾರ್‌ ಅವರು ಸರ್ಕಾರಕ್ಕೆ ಮನವಿ ನೀಡಲಿ, ಆನಂತರ ನಿಮಗೆ (ಸರ್ಕಾರಕ್ಕೆ) ಎಷ್ಟು ಸಮಯ ಬೇಕು? ಮುಂದಿನ ಶುಕ್ರವಾರದೊಳಗೆ ಕ್ರಮಕೈಗೊಳ್ಳಬೇಕು. ಈ ಸಂಬಂಧ ಸರ್ಕಾರ ಆದೇಶ ಮಾಡದಿದ್ದರೆ ನಾವು ಮಾಡುತ್ತೇವೆ” ಎಂದು ಪೀಠ ಮೌಖಿಕವಾಗಿ ಹೇಳಿತು.

ಈ ಮಧ್ಯೆ, ವಿಕಾಸ್‌ ಕುಮಾರ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ಅವರು “ಸಿಎಟಿ ಆದೇಶ ಬಂದ ಬಳಿಕ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಯಾವುದೇ ದಾಖಲೆ ಇಲ್ಲದಿದ್ದರೂ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಕಾನೂನುಬಾಹಿರ ಕ್ರಮವಾಗಿದೆ” ಎಂದರು.

ವಿಚಾರಣೆಯ ಒಂದು ಹಂತದಲ್ಲಿ ರಾಜಗೋಪಾಲ್‌ ಅವರು “ಅಮಾನತು ವಿಚಾರವು ಮುಂಜಾಗ್ರತಾ ಕ್ರಮವಾಗಿದೆಯೇ ವಿನಾ ದಂಡನೀಯವಲ್ಲ. ಇನ್ನು ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ಅವರ ವಿಚಾರಣಾ ಆಯೋಗದ ವರದಿ ಬಂದಿದೆ. ವಿಚಾರಣಾ ಆಯೋಗ ಕಾಯಿದೆಯ ಉಪ ಸೆಕ್ಷನ್‌ 4(3) ಪ್ರಕಾರ ವರದಿ ಮತ್ತು ಕ್ರಮಕೈಗೊಂಡ ವರದಿಯನ್ನು ಮೊದಲಿಗೆ ಅಧಿವೇಶನದಲ್ಲಿ ಮಂಡಿಸಬೇಕಿದೆ. ಆಗಸ್ಟ್‌ 11ರಂದು ಅಧಿವೇಶನ ಆರಂಭವಾಗಲಿದೆ. ಆನಂತರ ಅದನ್ನು ನ್ಯಾಯಾಲಯದ ಮುಂದೆ ಇಡಲಾಗುವುದು” ಎಂದರು.

ಇನ್ನು, ಸಿಎಟಿ ಆದೇಶದಲ್ಲಿ ಆರ್‌ಸಿಬಿ ವಿರುದ್ಧ ಮಾಡಿರುವ ಆಕ್ಷೇಪಾರ್ಹ ಅಂಶಗಳನ್ನು ತೆಗೆಯಬೇಕು ಎಂಬ ಹಿರಿಯ ವಕೀಲ ಸಂದೇಶ್‌ ಚೌಟ ಅವರ ವಾದಕ್ಕೆ ರಾಜಗೋಪಾಲ್‌ ಅವರು “ಆ ಅಂಶಗಳನ್ನು ತೆಗೆದರೆ ಇಡೀ ಪ್ರಕರಣ ಮತ್ತೆ ಸಿಎಟಿಗೆ ಹೋಗಬೇಕಾಗುತ್ತದೆ” ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಆಗಸ್ಟ್‌ 1ಕ್ಕೆ ಮುಂದೂಡಿತು.

Kannada Bar & Bench
kannada.barandbench.com