ಬಿಜೆಪಿ ಶಾಸಕ ಪೂಂಜಾ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

“ಪೂಂಜಾರಂಥವರ ಕೋಮು ಭಾಷಣದಿಂದ ಕೊಲೆಗಳು ನಡೆಯುತ್ತಿವೆ. ಅವರು ವಿಷ ಉಗುಳುತಿದ್ದಾರೆ. ಈ ಹಿಂದೆ ಪೂಂಜಾ ಅವರು ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ” ಎಂದು ವಿವರಿಸಿದ ವಕೀಲ ಬಾಲನ್‌.
Harish Poonja and Karnataka HC
Harish Poonja and Karnataka HC
Published on

ಕೋಮು ದ್ವೇಷ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ಅವರ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರವು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು. ಎಫ್‌ಐಆರ್‌ ದಾಖಲಾದ 16 ದಿನಗಳಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವ ಮೂಲಕ ರಾಜ್ಯ ಸರ್ಕಾರವು ವಿಶಿಷ್ಟ ಸಾಧನೆಗೈದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಆನಂತರ ಕಾನೂನು ಪ್ರಕ್ರಿಯೆ ರದ್ದತಿ ಕೋರಿ ಪೂಂಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ರಾಚಯ್ಯ ಅವರ ರಜಾಕಾಲೀನ ಏಕಸದಸ್ಯ ಪೀಠವು ನಡೆಸಿತು.

ಪೂಂಜಾ ಪರ ವಕೀಲರು “ಇದು ವಿಶೇಷ ನ್ಯಾಯಾಲಯದ ಪ್ರಕರಣವಾಗಿದ್ದು, ಅರ್ಜಿದಾರರು ಹಾಲಿ ಶಾಸಕರಾಗಿದ್ದಾರೆ. ಉಪ್ಪಿನಂಗಡಿಯಲ್ಲಿ ಎಫ್‌ಐಆರ್‌ ದಾಖಲಿಸಿ, ಅದನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅದು ಟ್ರಾನ್ಸಿಟ್‌ ಹಂತದಲ್ಲಿದೆ. ನಮಗೆ ಯಾವುದೇ ದಾಖಲೆ ದೊರೆತಿಲ್ಲ. ಈ ನಡುವೆ, ಅತ್ಯಂತ ಕಡಿಮೆ ಅವಧಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಅದಕ್ಕೆ, ಅವರಿಗೆ ಸ್ವಾತಂತ್ರ್ಯವಿದೆ. ಆದರೆ ಇದು ಸರಿಯಾದ ವಿಧಾನವಲ್ಲ. ಹೀಗಾಗಿ, ಬಲವಂತದ ಕ್ರಮಕೈಗೊಳ್ಳದಂತೆ ಆದೇಶಿಸಬೇಕು ಮತ್ತು ಆರೋಪ ಪಟ್ಟಿಯ ಪ್ರತಿ ನೀಡಲು ಆದೇಶಿಸಬೇಕು” ಎಂದು ಕೋರಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಇಂದು ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ತನಿಖಾಧಿಕಾರಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ. ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಪೂಂಜಾ ಅವರು ಹೊಸ ಅರ್ಜಿ ಸಲ್ಲಿಸಬೇಕು, ಇಲ್ಲವೇ ಅದನ್ನು ತಿದ್ದುಪಡಿ ಮಾಡಬೇಕು. ಈಗಲೇ ಆರೋಪ ಪಟ್ಟಿ ಪ್ರತಿ ನೀಡಬೇಕು ಎಂದರೆ ಅದು ನನ್ನ ಬಳಿಯೂ ಇಲ್ಲ” ಎಂದರು.

ದೂರುದಾರ ಎಸ್‌ ಬಿ ಇಬ್ರಾಹಿಂ ಪರವಾಗಿ ಹಾಜರಾದ ವಕೀಲ ಎಸ್‌ ಬಾಲನ್‌ ಅವರು “ಇಬ್ರಾಹಿಂ ಪರವಾಗಿ ವಕಾಲತ್ತು ಹಾಕಿದ್ದೇನೆ. ಈ ಹಿಂದೆ ಪೂಂಜಾ ಅವರು ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಸಾರ್ವಜನಿಕವಾಗಿ ಅವರು ಬಳಕೆ ಮಾಡಿರುವ ಭಾಷೆಯನ್ನು ನ್ಯಾಯಾಲಯ ನೋಡಬೇಕು. ಈ ಪ್ರಕರಣ ದಾಖಲಾದ ಬಳಿಕ ಪೂಂಜಾ ಅವರು ಬಹಿರಂಗವಾಗಿ “ಇನ್ನೂ ನೂರು ಪ್ರಕರಣವನ್ನು ಸರ್ಕಾರ ದಾಖಲಿಸಲಿ. ಅದಕ್ಕೆ ಹೆದರುವ ಮಗ ನಾನಲ್ಲ” ಎಂದಿದ್ದಾರೆ. ಇಂಥ ಕೋಮು ಭಾಷಣದಿಂದ ಕೊಲೆಗಳು ನಡೆಯುತ್ತಿವೆ. ಅವರು ವಿಷ ಉಗುಳುತಿದ್ದಾರೆ. ಹೀಗಾಗಿ, ರಜಾಕಾಲ ಮುಗಿದ ಬಳಿಕ ವಿಚಾರಣೆ ನಡೆಸಬಹುದು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು” ಎಂದರು.

ಇದನ್ನು ಆಲಿಸಿದ ಪೀಠವು ಪೂಂಜಾ ಪರ ವಕೀಲರಿಗೆ ತಿದ್ದುಪಡಿ ಅರ್ಜಿ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ಮೇ 22ಕ್ಕೆ ಮುಂದೂಡಿತು.

Also Read
ಕೋಮು ದ್ವೇಷ ಪ್ರಕರಣ ರದ್ದತಿ ಕೋರಿ ಹೈಕೋರ್ಟ್‌ ಕದತಟ್ಟಿದ ಬಿಜೆಪಿ ಶಾಸಕ ಹರೀಶ್‌ ಪೂಂಜಾ

ಪ್ರಕರಣದ ಹಿನ್ನೆಲೆ: ಇಬ್ರಾಹಿಂ ಉಪ್ಪಿನಂಗಡಿ ನೀಡಿರುವ ದೂರಿನಲ್ಲಿ, ತೆಕ್ಕಾರುವಿನ ಭಟ್ರಬೈಲು ಎಂಬಲ್ಲಿ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮ ಕಲಶೋತ್ಸವದಲ್ಲಿ ಮೇ 3ರಂದು ಹರೀಶ್‌ ಪೂಂಜಾ ಅವರು ರಾತ್ರಿ 9-9.30ರ ವೇಳೆಗೆ ತುಳು ಭಾಷೆಯಲ್ಲಿ “ತೆಕ್ಕಾರಿನ ಕಂತ್ರಿ ಬ್ಯಾರಿಗಳು ಟ್ಯೂಬ್ಲೈಟ್‌ ಹೊಡೆದಿದ್ದಾರೆ. ಜನರೇಟರ್‌ನ ಡೀಸೆಲ್‌ ಕದ್ದಿದ್ದಾರೆ ಎಂಬ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂದಿದೆ. ಬ್ರಹ್ಮ ಕಲಶೋತ್ಸವ ಮುಗಿಯುವ ವೇಳೆಗೆ ಕದ್ದಿರುವವರು ಯಾರು ಎಂಬ ಮಾಹಿತಿ ಬರುತ್ತದೆ. ನಮ್ಮಲ್ಲಿ ಸೌಹಾರ್ದತೆ ಬೇಕು ಎಂದು ಹೇಳುತ್ತಾರೆ. ನಾವು ಮಸೀದಿಗೆ ಹೋಗಿ ಆಮಂತ್ರಣ ಕೊಟ್ಟಿದ್ದರಿಂದ ಬ್ಯಾರಿಗಳು ಟ್ಯೂಬ್‌ ಹೊಡೆದಿದ್ದಾರೆ. ಅವರಿಗೆ ಆಮಂತ್ರಣ ನೀಡಬಾರದಿತ್ತು. ಕಾರ್ಯಕ್ರಮಕ್ಕೆ ಕರೆಯಬಾರದಿತ್ತು. ನಾವು ಹಿಂದೂಗಳು ಹಿಂದೂಗಳೇ, ಅವರನ್ನು ಸೇರಿಸಬಾರದು. ಪ್ರಸ್ತುತ ತೆಕ್ಕಾರಿನಲ್ಲಿ 1,200 ಮುಸ್ಲಿಮರಿದ್ದು, ನಾವು 150 ಮನೆಯವರು ಇದ್ದೇವೆ. 10 ವರ್ಷ ಕಳೆದರೆ 5 ಸಾವಿರ ಜನರಾಗುತ್ತಾರೆ. ಮುಸ್ಲಿಮರು ಐದು ಸಾವಿರ ಅಲ್ಲ 10 ಸಾವಿರ ಆದರೂ ಅವರನ್ನು ಹೆದರಿಸಿ, ನೀವು ಸನಾತನ ಹಿಂದೂ ಧರ್ಮವನ್ನು ಪಾಲನೆ ಮಾಡಿ, ದೇವರ ಪೂಜೆ ಮಾಡಿಕೊಂಡ ಬರಬೇಕು" ಎಂದು ಹೇಳಿದ್ದಾರೆ. ಆ ಮೂಲಕ ಸಮುದಾಯಗಳ ನಡುವೆ ದ್ವೇಷ ಹರಿಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲೂ ವೀಕ್ಷಿಸಿರುವುದಾಗಿ ಇಬ್ರಾಹಿಂ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನು ಆಧರಿಸಿ ಪೊಲೀಸರು ಹರೀಶ್‌ ಪೂಂಜಾ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 196 (ಧರ್ಮದ ಆಧಾರದಲ್ಲಿ ದ್ವೇಷ ಹರಡುವುದು), 353(2) (ದ್ವೇಷ ಹರಡಲು ಸುಳ್ಳು ಸುದ್ದಿ ಹಂಚಿಕೆ) ಅಡಿ ಶಾಸಕ ಪೂಂಜಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Kannada Bar & Bench
kannada.barandbench.com