ಸಿಬಿಐ ತನಿಖೆಗೆ ನೀಡಿರುವ ಸಮ್ಮತಿ ಹಿಂಪಡೆಯಲು ಎಲ್ಲ ಪ್ರಕರಣಗಳಲ್ಲಿಯೂ ರಾಜ್ಯಗಳಿಗೆ ಸರ್ವತ್ರ ಅಧಿಕಾರವಿಲ್ಲ: ಕೇಂದ್ರ

ಪಶ್ಚಿಮ ಬಂಗಾಳ ಸರ್ಕಾರವು ಅಪರಾಧಗಳ ತನಿಖೆಯ ವಿಷಯದಲ್ಲಿ ಸಿಬಿಐ ತನಿಖೆಗೆ ನೀಡಿರುವ ಸಮ್ಮತಿಯನ್ನು ಹಿಂಪಡೆದಿರುವುದು ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ.
CBI, WEST BENGAL AND Supreme court
CBI, WEST BENGAL AND Supreme court
Published on

ಸಿಬಿಐ ತನಿಖೆಗೆ ತಾನು ನೀಡಿರುವ ಸಮ್ಮತಿಯನ್ನು ಯಾವುದೇ ಒಂದು ಪ್ರಕರಣದಲ್ಲಾಗಲಿ ಅಥವಾ ಎಲ್ಲ ಪ್ರಕರಣಗಳಲ್ಲೇ ಅಗಲಿ ರಾಜ್ಯ ಸರ್ಕಾರಗಳು ಆದೇಶವೊಂದನ್ನು ಹೊರಡಿಸುವ ಮೂಲಕ ಹಿಂಪಡೆಯುವುದು ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯಿದೆಯ ಸೆಕ್ಷನ್‌ 6ಕ್ಕೆ ವಿರುದ್ಧವಾಗಿದ್ದು ಅಧಿಕಾರವ್ಯಾಪ್ತಿಯ ಹೊರತಾದದ್ದಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ (ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ವರ್ಸಸ್‌ ಭಾರತ ಸರ್ಕಾರ).

ರಾಜ್ಯ ಸರ್ಕಾರಕ್ಕೆ ಸಿಬಿಐ ತನಿಖೆಗೆ ಸಮ್ಮತಿ ನೀಡಲು ಇರುವ ಅಧಿಕಾರವು ಯಾವುದೇ ಪ್ರಕರಣದಲ್ಲಿ ತನಿಖೆಗೆ ಸಮ್ಮತಿಸದೆ ಇರುವುದಕ್ಕಾಗಲಿ ಅಥವಾ ಇದಾಗಲೇ ಸಮ್ಮತಿ ನೀಡಿರುವ ಪ್ರಕರಣದಲ್ಲಿ ಸಮ್ಮತಿಯನ್ನು ಹಿಂಪಡೆಯಲಾಗಲಿ ಸಮಗ್ರ ನಿರ್ದೇಶನಗಳನ್ನು ನೀಡುವ ಸರ್ವತ್ರ ಅಧಿಕಾರವನ್ನು ಒಳಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರವು ತಿಳಿಸಿದೆ.

ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರದ ಸ್ವರೂಪದಿಂದಲೇ ಅದನ್ನು ಕೇವಲ ಒಂದೊಂದೇ ಪ್ರಕರಣದ ಆಧಾರದಲ್ಲಿ ಬಳಸಬಹುದಾಗಿದ್ದು, ಉತ್ತಮ, ಸಮರ್ಥ, ಸುಸಂಬದ್ಧ ಕಾರಣಗಳನ್ನು ದಾಖಲಿಸಬೇಕು ಎಂದು ಕೇಂದ್ರವು ಹೇಳಿದೆ.

ಸಿಬಿಐ ರಚನೆಗೆ ಕಾರಣವಾಗಿರುವ “ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯಿದೆಯ ಸೆಕ್ಷನ್‌ 6ರ ಅಡಿ ರಾಜ್ಯ ಸರ್ಕಾರಗಳಿಗೆ ನೀಡಿರುವ ಶಾಸನಾತ್ಮಕ ಅಧಿಕಾರವು ಜವಾಬ್ದಾರಿಯೊಟ್ಟಿಗೇ ಬಂದಿರುವಂತಹದ್ದಾಗಿದ್ದು ಆ ಅಧಿಕಾರವು ಪ್ರಕರಣದಿಂದ ಪ್ರಕರಣಕ್ಕೆ ಅನ್ವಯಿಸುವಂಥದ್ದಾಗಿದೆ. ಅಲ್ಲದೆ, ಅದರೊಳಗೇ ಆ ಅಧಿಕಾರವನ್ನು ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಬಳಸಬೇಕೆ ಹೊರತು ರಾಜಕೀಯ ಕಾರಣಗಳಿಗೋ ಅಥವಾ ಆರೋಪಿಯನ್ನು ರಕ್ಷಿಸುವ ಸಲುವಾಗಿಯೋ ಅಲ್ಲ ಎನ್ನಲಾಗಿದೆ,” ಎಂದು ಕೇಂದ್ರವು ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

ಹಾಗಾಗಿ ಪ್ರಸ್ತುತ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಅಪರಾಧಗಳ ತನಿಖೆಯ ವಿಷಯದಲ್ಲಿ ಸಿಬಿಐ ತನಿಖೆಗೆ ನೀಡಿರುವ ಸಮ್ಮತಿಯನ್ನು ಹಿಂಪಡೆದಿರುವುದು ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಹೇಳಿದೆ. ಅಲ್ಲದೆ, ಪಶ್ಚಿಮ ಬಂಗಾಳ ಸರ್ಕಾರವು ಸಿಬಿಐ ಅನ್ನು “ಸ್ವಾಯತ್ತ” ಸಂಸ್ಥೆಯಾಗಿ, ಒಂದು ಪಕ್ಷವಾಗಿ ಮೊಕದ್ದಮೆಯಲ್ಲಿ ದಾಖಲಿಸಿಲ್ಲ ಬದಲಿಗೆ ಕೇಂದ್ರವನ್ನು ಮಾತ್ರವೇ ಪಕ್ಷಕಾರನನ್ನಾಗಿ ಮಾಡಲಾಗಿದೆ. ಹಾಗಾಗಿ ದಾವೆಯು ತಿರಸ್ಕರಿಸಲು ಯೋಗ್ಯ ಎಂದು ಕೇಂದ್ರವು ಹೇಳಿದೆ.

Kannada Bar & Bench
kannada.barandbench.com