ರಾಜಕೀಯ ವಿಚಾರವಾಗಿ ರಾಜ್ಯ ಸರ್ಕಾರಗಳು ಅತಿಯಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿವೆ: ಅಟಾರ್ನಿ ಜನರಲ್‌ ವೆಂಕಟರಮಣಿ

ಕರ್ನಾಟಕ ತೀವ್ರ ಬರ ಸಂಕಷ್ಟ ಎದುರಿಸುತ್ತಿದ್ದರೂ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಸರ್ಕಾರ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಎಜಿ ಅವರ ಈ ಮಾತುಗಳು ಮಹತ್ವ ಪಡೆದುಕೊಂಡಿವೆ.
ಭಾರತದ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ
ಭಾರತದ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ
Published on

ರಾಜಕೀಯ ಚರ್ಚಾ ವಿಷಯಗಳ ಕುರಿತು ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದ್ದು ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದ ಇಂತಹ ಕಾನೂನು ವ್ಯಾಜ್ಯಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಸಾಂವಿಧಾನಿಕ ನ್ಯಾಯಾಲಯಗಳನ್ನು ಆಕ್ರಮಿಸಿಕೊಂಡಿವೆ ಎಂದು ಭಾರತದ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಸೋಮವಾರ ತಿಳಿಸಿದರು.

ತಂಜಾವೂರಿನ ʼಸಾಸ್ತ್ರʼ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ನಾನಿ ಪಾಲ್ಖಿವಾಲಾ ಸ್ಮಾರಕ 18ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಕೀಯ ಸಂಘರ್ಷ ಮತ್ತು ಘರ್ಷಣೆಗಳಿಂದಾಗಿ ರಾಜ್ಯ ಸರ್ಕಾರಗಳು ವ್ಯಾಪಕ ಶ್ರೇಣಿಯ ರಾಜಕೀಯ ಚರ್ಚೆ ಮತ್ತು ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಎಡತಾಕುತ್ತಿರುವುದನ್ನು ಹೆಚ್ಚಾಗಿ ನೋಡುತ್ತಿದ್ದೇನೆ. ಇವು ಸಾಂವಿಧಾನಿಕ ಆಯಾಮಗಳನ್ನು ಹೊಂದಿರುವ ಹೊಸ ಸವಾಲುಗಳು. ವಿಸ್ತೃತವಾದ ಸಾಂವಿಧಾನಿಕ ವ್ಯಾಪ್ತಿಯನ್ನು ಒಳಗೊಂಡಿರುವ ಈ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲು ನ್ಯಾಯಾಲಯಗಳು ಬದ್ಧವಾಗಿವೆ ಎಂದು ಅವರು ತಿಳಿಸಿದರು.

ಕರ್ನಾಟಕ ತೀವ್ರ ಬರ ಸಂಕಷ್ಟ ಎದುರಿಸುತ್ತಿದ್ದರೂ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಸರ್ಕಾರ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಎಜಿ ಅವರ ಈ ಮಾತುಗಳು ಮಹತ್ವ ಪಡೆದುಕೊಂಡಿವೆ.

ಕಳೆದ ವರ್ಷ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಉಲ್ಲೇಖಿಸಿದ್ದ ಏಳು ಮಸೂದೆಗಳಲ್ಲಿ ನಾಲ್ಕಕ್ಕೆ ಒಪ್ಪಿಗೆ ತಡೆಹಿಡಿದಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನಿರ್ಧಾರ ಪ್ರಶ್ನಿಸಿ ಕೇರಳ ಸರ್ಕಾರ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಇದಕ್ಕೂ ಮೊದಲು ಅಂದರೆ ಕಳೆದ ವರ್ಷ, ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲ ಖಾನ್ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿಯೂ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಈ ಹಿಂದೆ ಪಂಜಾಬ್, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳು ಕೂಡ ಇದೇ ರೀತಿಯ ಅರ್ಜಿ ಸಲ್ಲಿಸಿದ್ದವು.

ಉಪನ್ಯಾಸ ಕಾರ್ಯಕ್ರಮದಲ್ಲಿ ಎಜಿ ಅವರು "ಸಂವಿಧಾನವನ್ನು ರೆಫರಿಗಳಿಲ್ಲದ ಆಟದ ಮೈದಾನ ಎಂದು ಆಡಳಿತ ಸಂಸ್ಥೆಗಳು ಪರಿಗಣಿಸದಂತೆ ನೋಡಿಕೊಳ್ಳಬೇಕಿದೆ. ಪ್ರಜೆಗಳಿಗೆ ಸಂವಿಧಾನವನ್ನು ಜೀವಂತ ದಾಖಲೆಯಾಗಿ ಬಳಸಲು ಸಂವಿಧಾನ ಮೂಲ ರಚನಾ ಸಿದ್ಧಾಂತ ಅನುವು ಮಾಡಿಕೊಡುತ್ತದೆ ಎಂದರು. ಪಾಲ್ಖಿವಾಲಾ ಅವರನ್ನು ಭಾರತೀಯ ಕಾನೂನು ಸಮುದಾಯದ ಎತ್ತರದ ವ್ಯಕ್ತಿತ್ವ ಎಂದು ಎಜಿ ಇದೇ ವೇಳೆ ಬಣ್ಣಿಸಿದರು.

Kannada Bar & Bench
kannada.barandbench.com