ಸರ್ಕಾರ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಪರಿಹಾರಕ್ಕೆ ಅರ್ಹರಾದವರಿಗೆ ಪರಿಹಾರ ನೀಡುವುದು ಸರ್ಕಾರ ಮಾಡುವ ದಾನವಲ್ಲ ಎಂದು ಸುಪ್ರೀಂ ಕೋರ್ಟ್ ಈಚೆಗೆ ಕಿಡಿಕಾರಿದೆ [ಸುಧಾ ಭಲ್ಲಾ ಮತ್ತಿತರರು ಹಾಗೂ ರಾಕೇಶ್ ಕುಮಾರ್ ಸಿಂಗ್ ಇನ್ನಿತರರ ನಡುವಣ ಪ್ರಕರಣ].
ಸರ್ಕಾರ ಮತ್ತು ಅದರ ಅಂಗಗಳು ದಯಾಪರತೆಯಿಂದ ಭೂಮಾಲೀಕರಿಗೆ ಪರಿಹಾರ ನೀಡಿವೆ ಎಂದು ಬಿಂಬಿಸಿಕೊಳ್ಳುವಂತಿಲ್ಲ ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಂವಿಧಾನದ 300-ಎ ವಿಧಿಯಡಿ ಆಸ್ತಿಯ ಹಕ್ಕು ಈಗಲೂ ಸಾಂವಿಧಾನಿಕ ಹಕ್ಕು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ತಿಳಿಸಿತು.
"ಇಪ್ಪತ್ತು ವರ್ಷಗಳ ಕಾಲ ಜಮೀನು ಬಳಸುವ ನಾಗರಿಕರ ಸಾಂವಿಧಾನಿಕ ಹಕ್ಕು ಕಸಿದುಕೊಂಡು ಆ ಬಳಿಕ ಪರಿಹಾರ ನೀಡಿದ್ದೇವೆ ಎಂದು ದಯೆ ತೋರಿಸುವುದು ಮತ್ತು ಆ ಕುರಿತು ಡಂಗುರ ಬಾರಿಸುವುದು ಒಪ್ಪುವಂಥದ್ದಲ್ಲ. ಭೂಸ್ವಾಧೀನಕ್ಕಾಗಿ ಪರಿಹಾರ ನೀಡುವುದು ಸರ್ಕಾರ ಮಾಡುವ ದಾನವಲ್ಲ" ಎಂದು ನ್ಯಾಯಾಲಯ ಚಾಟಿ ಬೀಸಿತು.
ಉತ್ತರ ಪ್ರದೇಶದ ಗಾಜಿಯಾಬಾದ್ ಅಭಿವೃದ್ಧಿ ಪ್ರಾಧಿಕಾರ (ಜಿಡಿಎ) 2004ರಲ್ಲಿ ಕೆಲವು ಭೂಮಾಲೀಕರಿಗೆ ಸಮರ್ಪಕವಾಗಿ ಪರಿಹಾರ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ದಾಖಲಿಸಿಕೊಳ್ಳಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ವೇಳೆ ಪೀಠ ಈ ವಿಷಯ ತಿಳಿಸಿದೆ.
ಭೂಮಾಲೀಕರು ಕೋರಿಕೆಯಂತೆಯೇ ಪರಿಹಾರ ನೀಡಲಾಗಿದೆ ಎಂಬ ಜಿಡಿಎ ವಾದ ತಳ್ಳಿಹಾಕಿದ ನ್ಯಾಯಾಲಯ ಸ್ವಾಧೀನಪಡಿಸಿಕೊಳ್ಳಲಾದ ಭೂಮಿ ವಸತಿ ಭೂಮಿಯಲ್ಲ, ಆದರೆ ಕೃಷಿ ಭೂಮಿ ಎಂದು ತೀರ್ಮಾನಿಸಲು ಜಿಡಿಎ ಏಳು ದೀರ್ಘ ವರ್ಷಗಳನ್ನು ತೆಗೆದುಕೊಂಡಿದೆ ಎಂದಿತು.
ಅಲ್ಲದೆ, ವಿಳಂಬದಿಂದಾಗಿ ಅರ್ಜಿದಾರರಿಗೆ ಅನುಕೂಲವಾಗಿದೆ. ವಿಳಂಬದ ಕಾರಣದಿಂದಾಗಿ ಅರ್ಜಿದಾರರಿಗೆ 1956ರ ಭೂಸ್ವಾಧೀನ ಕಾಯಿದೆ ಅನ್ವಯವಾಗದೆ 2013ರ ಭೂಸ್ವಾಧೀನ ಕಾಯಿದೆ ಅನ್ವಯಿಸಿ ಅವರು ಇನ್ನೂ ಉತ್ತಮ ಪರಿಹಾರ ಪಡೆದಿದ್ದಾರೆ ಎಂಬ ಪ್ರಾಧಿಕಾರದ ವಾದ ಕೂಡ ನ್ಯಾಯಾಲಯವನ್ನು ಸಂತುಷ್ಟಗೊಳಿಸಲಿಲ್ಲ.
ಆದರೂ, ಜಿಡಿಎ ಮತ್ತು ನ್ಯಾಯಾಲಯದಲ್ಲಿ ಪ್ರಾಧಿಕಾರವನ್ನು ಪ್ರತಿನಿಧಿಸುವ ವಕೀಲರ ನಡುವೆ ತಪ್ಪು ಸಂವಹನ ನಡೆದಿರಬಹುದು. ಜಿಡಿಎ ನ್ಯಾಯಾಲಯದ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿಲ್ಲ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಅದು ನ್ಯಾಯಾಂಗ ನಿಂದನೆ ವಿಚಾರಣೆ ಮುಕ್ತಾಯಗೊಳಿಸಿತು.
ಇದೇ ವೇಳೆ, ಪರಿಹಾರ ತೀರ್ಪಿನ ಸಿಂಧುತ್ವದ ಬಗ್ಗೆ ತಾನು ನಿರ್ಧರಿಸಿಲ್ಲ. ಅಗತ್ಯವಿದ್ದರೆ ಭೂಮಾಲೀಕರು ಅದನ್ನು ಪ್ರಶ್ನಿಸಲು ಇನ್ನೂ ಮುಕ್ತರಾಗಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಂತಹ ಯಾವುದೇ ಸವಾಲನ್ನು ಆರು ತಿಂಗಳೊಳಗೆ ನಿರ್ಧರಿಸಬೇಕು ಎಂದು ನ್ಯಾಯಾಲಯ ಹೇಳಿದೆ.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]